ಪುಣೆ(ಜ.10): ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭದಲ್ಲಿ ಅಬ್ಬರಿಸಿ ಬಳಿಕ ದಿಢೀರ್ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 201 ರನ್ ಸಿಡಿಸಿದೆ. ಈ ಮೂಲಕ ಶ್ರೀಲಂಕಾಗೆ 202 ರನ್ ಟಾರ್ಗೆಟ್ ನೀಡಿದೆ.

ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಅತ್ಯುತ್ತಮ ಆರಂಭದ ನೀಡಿದರೂ, ಮಧ್ಯಮ ಕ್ರಮಾಂಕದ ಕುಸಿತ ತಂಡದ ಬೃಹತ್ ಮೊತ್ತದ ಮೇಲೆ ಹೊಡೆತ ನೀಡಿತು. ಧವನ್ ಹಾಗೂ ರಾಹುಲ್ ಮೊದಲ ವಿಕೆಟ್‌ಗೆ 97 ರನ್ ಜೊತೆಯಾಟ ನೀಡಿದರು. ಇಷ್ಟೇ ಅಲ್ಲ ಆರಂಭಿಕರಿಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು.

ಧವನ್ 52 ರನ್ ಸಿಡಿಸಿ ಔಟಾದರೆ, ರಾಹುಲ್ 54 ರನ್ ಚಚ್ಚಿದರು. ಸಂದಕನ್ ಮೋಡಿಗೆ ಬಲಿಯಾದ ಆರಂಭಿಕರು ನಿರಾಸೆಯೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಇನ್ನು ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಸಂಜು ಸಾಮ್ಸನ್ ಸಿಕ್ಸರ್ ಮೂಲಕ 6 ರನ್ ಸಿಡಿಸಿದರು. ಆದರೆ ಮರು ಎಸೆತದಲ್ಲೇ ಔಟಾದರು.

ಶ್ರೇಯಸ್ ಅಯ್ಯರ್ ಕೇವಲ 4 ರನ್‌ಗೆ ಸುಸ್ತಾದರು. ಮನೀಶ್ ಪಾಂಡೆ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. ಕೊಹ್ಲಿ 26 ರನ್ ಸಿಡಿಸಿ ಔಟಾದರು.  ಅಂತಿಮ ಹಂತದಲ್ಲಿ ಪಾಂಡೆ ಹಾಗೂ ಶಾರ್ದೂಲ್ ಠಾಕೂರ್ ಅಬ್ಬರಿಸಿದರು. 

ಪಾಂಡೆ ಅಜೇಯ 31 ರನ್ ಸಿಡಿಸಿದರೆ, ಠಾಕೂರ್ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ಭಾರತ 6 ವಿಕೆಟ್ ನಷ್ಟಕ್ಕೆ 201 ರನ್ ಸಿಡಿಸಿತು.