Asianet Suvarna News Asianet Suvarna News

ICC ODI World Cup: ಏಕದಿನ ವಿಶ್ವಕಪ್‌ ಪ್ರಧಾನ ಸುತ್ತಿಗೆ ಶ್ರೀಲಂಕಾ ಪ್ರವೇಶ

* ಐಸಿಸಿ ಏಕದಿನ ವಿಶ್ವಕಪ್ ಪ್ರಧಾನ ಸುತ್ತಿಗೆ ಲಂಕಾ ಲಗ್ಗೆ
* ಜಿಂಬಾಬ್ವೆ ಎದುರು 9 ವಿಕೆಟ್‌ ಭರ್ಜರಿ ಜಯ ಸಾಧಿಸಿದ ಶ್ರೀಲಂಕಾ
* ನವೆಂಬರ್ 2ಕ್ಕೆ ಮುಂಬೈನಲ್ಲಿ ಭಾರತ-ಲಂಕಾ ಪಂದ್ಯ

Sri Lanka qualify for 2023 ICC ODI World Cup in India with win against Zimbabwe kvn
Author
First Published Jul 3, 2023, 9:52 AM IST

ಬುಲವಾಯೊ(ಜು.03): ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಮಾಜಿ ಚಾಂಪಿಯನ್‌ ಶ್ರೀಲಂಕಾ ಅರ್ಹತೆ ಪಡೆದಿದೆ. ಅರ್ಹತಾ ಟೂರ್ನಿಯ ಸೂಪರ್‌-6 ಹಂತದ ಪಂದ್ಯದಲ್ಲಿ ಜಿಂಬಾಬ್ವೆಯನ್ನು 9 ವಿಕೆಟ್‌ಗಳಿಂದ ಸೋಲಿಸಿ ಲಂಕಾ ಪ್ರಧಾನ ಟೂರ್ನಿಗೆ ಪ್ರವೇಶಿಸಿತು. ಇದರೊಂದಿಗೆ ಜಿಂಬಾಬ್ವೆ ವಿಶ್ವಕಪ್‌ಗೇರಬೇಕಿದ್ದರೆ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ಜಿಂಬಾಬ್ವೆ ಕ್ರಿಕೆಟ್ ತಂಡ (Zimbabwe Cricket Team) ಶಾನ್‌ ವಿಲಿಯಮ್ಸ್‌(56) ಹೋರಾಟದ ಹೊರತಾಗಿಯೂ 32.2 ಓವರ್‌ಗಳಲ್ಲಿ 165 ರನ್‌ಗೆ ಸರ್ವಪತನ ಕಂಡಿತು. ಸಿಕಂದರ್‌ ರಾಜಾ 31 ರನ್‌ ಕೊಡುಗೆ ನೀಡಿದರೂ, ಇತರರು ವಿಫಲರಾದರು. ಸ್ಪಿನ್ನರ್‌ ಮಹೀಶ್ ತೀಕ್ಷಣ 4 ವಿಕೆಟ್‌ ಕಿತ್ತರು. ಸುಲಭ ಗುರಿಯನ್ನು ಲಂಕಾ 33.1 ಓವರ್‌ಗಳಲ್ಲಿ ಬೆನ್ನತ್ತಿತು. ಪಥುಮ್‌ ನಿಸ್ಸಾಂಕ ಔಟಾಗದೆ 101 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.

ನವೆಂಬರ್ 2ಕ್ಕೆ ಮುಂಬೈನಲ್ಲಿ ಭಾರತ-ಲಂಕಾ ಪಂದ್ಯ

ಶ್ರೀಲಂಕಾ ಅರ್ಹತಾ ಟೂರ್ನಿಯಲ್ಲಿ ಚಾಂಪಿಯನ್‌ ಆದರೂ, ಕ್ವಾಲಿಫೈಯರ್‌-2 ಎಂದೇ ಕರೆಸಿಕೊಳ್ಳಲಿದೆ ಎಂದು ಐಸಿಸಿ (ICC) ಖಚಿತಪಡಿಸಿದೆ. ವಿಶ್ವಕಪ್‌ನಲ್ಲಿ ಭಾರತ ಹಾಗೂ ಲಂಕಾ (India vs Sri Lanka) ನಡುವಿನ ಪಂದ್ಯ ನ.2ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ (Wankhede Stadium) ನಡೆಯಲಿದೆ. ಇದೇ ವೇಳೆ ಅರ್ಹತಾ ಸುತ್ತಿನಿಂದ ಪ್ರಧಾನ ಟೂರ್ನಿಗೆ ಪ್ರವೇಶ ಪಡೆಯುವ ಮತ್ತೊಂದು ತಂಡ ಕ್ವಾಲಿಫೈಯರ್‌-1 ಎನಿಸಲಿದೆ. ಭಾರತ ಹಾಗೂ ಕ್ವಾಲಿಫೈಯರ್‌-1 ನಡುವಿನ ಪಂದ್ಯ ಬೆಂಗಳೂರಲ್ಲಿ ನ.11ರಂದು ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಭಾರತ ತಂಡವು ಜಿಂಬಾಬ್ವೆ, ಸ್ಕಾಟ್ಲೆಂಡ್‌ ಅಥವಾ ನೆದರ್‌ಲೆಂಡ್ಸ್‌ ವಿರುದ್ಧ ಸೆಣಸಲಿದೆ.

ICC ODI World Cup: ಭದ್ರತೆ ತಪಾಸಣೆಗೆ ಭಾರತಕ್ಕೆ ಬರಲಿದೆ ಪಾಕ್ ನಿಯೋಗ..!

ಮತ್ತೊಂದು ಸ್ಥಾನಕ್ಕೆ 3 ತಂಡಗಳ ಪೈಪೋಟಿ!

ವಿಶ್ವಕಪ್‌ಗೆ ಅರ್ಹತೆ ಪಡೆಯುವ ರೇಸ್‌ನಲ್ಲಿ ಇನ್ನೂ ಜಿಂಬಾಬ್ವೆ, ಸ್ಕಾಟ್ಲೆಂಡ್‌ ಹಾಗೂ ನೆದರ್‌ಲೆಂಡ್ಸ್‌ ತಂಡಗಳು ಉಳಿದಿವೆ. ಜಿಂಬಾಬ್ವೆ 4 ಪಂದ್ಯಗಳಲ್ಲಿ 6 ಅಂಕ ಸಂಪಾದಿಸಿದ್ದು, ಇನ್ನುಳಿದ 1 ಪಂದ್ಯದಲ್ಲಿ ಗೆದ್ದರೆ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚು. ಸ್ಕಾಟ್ಲೆಂಡ್ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದು, ರೇಸ್‌ನಲ್ಲಿ ಉಳಿಯಬೇಕಿದ್ದರೆ ಇನ್ನೆರಡೂ ಪಂದ್ಯ ಜಯಿಸಬೇಕು. ಅತ್ತ ನೆದರ್‌ಲೆಂಡ್ಸ್ ಇನ್ನೆರಡೂ ಪಂದ್ಯವನ್ನು ಗೆಲ್ಲುವುದರ ಜೊತೆಗೆ, ಜಿಂಬಾಬ್ವೆ, ಸ್ಕಾಟ್ಲೆಂಡನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಿದರೆ ಮಾತ್ರ ವಿಶ್ವಕಪ್‌ ಪ್ರವೇಶಿಸಬಹುದು.

ವಿಶ್ವಕಪ್‌ ಆತಿಥ್ಯ ಕೈತಪ್ಪಿದ ಸ್ಟೇಡಿಯಂಗಳಲ್ಲಿ ದ್ವಿಪಕ್ಷೀಯ ಪಂದ್ಯ: ಬಿಸಿಸಿಐ ಭರವಸೆ

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್‌ನ ಆತಿಥ್ಯ ಕೈತಪ್ಪಿದ ಕ್ರೀಡಾಂಗಣಗಳಿಗೆ ಮುಂಬರುವ ದ್ವಿಪಕ್ಷೀಯ ಸರಣಿಗಳ ವೇಳೆ ಹೆಚ್ಚಿನ ಆದ್ಯತೆ ನೀಡುವುದಾಗಿ ಬಿಸಿಸಿಐ ಭರವಸೆ ನೀಡಿದೆ. ವಿಶ್ವಕಪ್‌ ಆತಿಥ್ಯ ಸಿಗದ್ದಕ್ಕೆ ಕೆಲ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಬಿಸಿಸಿಐ ವಿರುದ್ಧ ಬಹಿರಂಗವಾಗಿ ಸಿಟ್ಟು ಹೊರಹಾಕಿದ್ದವು. 

ಇದನ್ನು ತಣಿಸುವ ನಿಟ್ಟಿನಲ್ಲಿ ರಾಜ್ಯ ಸಂಸ್ಥೆಗಳಿಗೆ ಪತ್ರ ಬರೆದಿರುವ ಕಾರ್ಯದರ್ಶಿ ಜಯ್‌ ಶಾ, ಭಾರತದ ತವರಿನ ದ್ವಿಪಕ್ಷೀಯ ಪಂದ್ಯಗಳ ಆತಿಥ್ಯ ಹಕ್ಕನ್ನು ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ, ತಮಗೆ ಸಿಗಬೇಕಿರುವ ಪಂದ್ಯಗಳನ್ನು ಸ್ವಯಂ ಪ್ರೇರಿತವಾಗಿ ಇತರ ಕ್ರಿಕೆಟ್ ಸಂಸ್ಥೆಗಳಿಗೆ ಬಿಟ್ಟುಕೊಡುವಂತೆ ವಿಶ್ವಕಪ್ ಆತಿಥ್ಯ ಪಡೆದ ರಾಜ್ಯ ಸಂಸ್ಥೆಗಳಿಗೆ ಶಾ ಮನವಿ ಮಾಡಿದ್ದು, ಎಲ್ಲರೂ ಒಪ್ಪಿದ್ದಾರೆ ಎನ್ನಲಾಗಿದೆ. 

ವಿಶ್ವಕಪ್‌ ಈ ಬಾರಿ 10 ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಮೊಹಾಲಿ, ಇಂದೋರ್‌, ನಾಗ್ಪುರ, ರಾಜ್‌ಕೋಟ್‌, ರಾಂಚಿ ಸೇರಿ ಇನ್ನೂ ಕೆಲ ಪ್ರಮುಖ ಕ್ರೀಡಾಂಗಣಗಳಿಗೆ ಆತಿಥ್ಯ ಅವಕಾಶ ಸಿಕ್ಕಿಲ್ಲ.

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ ಹೀಗಿದೆ:

Sri Lanka qualify for 2023 ICC ODI World Cup in India with win against Zimbabwe kvn

 

Follow Us:
Download App:
  • android
  • ios