Asianet Suvarna News Asianet Suvarna News

ICC Referee Ranjan Madugalle 200 ಟೆಸ್ಟ್‌ ಪಂದ್ಯಗಳಿಗೆ ರೆಫ್ರಿಯಾಗಿ ಹೊಸ ದಾಖಲೆ ಬರೆದ ಲಂಕಾ ಮಾಜಿ ಕ್ರಿಕೆಟಿಗ..!

* ಐಸಿಸಿ ಮ್ಯಾಚ್‌ ರೆಫ್ರಿಯಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಂಜನ್ ಮದುಗಲೆ

* 200 ಟೆಸ್ಟ್‌ ಪಂದ್ಯಗಳಿಗೆ ಮ್ಯಾಚ್‌ ರೆಫ್ರಿಯಾದ ಮೊದಲ ವ್ಯಕ್ತಿ ಎನ್ನುವ ದಾಖಲೆ ಮದುಗಲೆ ಪಾಲು

* ಲಂಕಾ-ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣ

Sri Lanka Former Cricketer Ranjan Madugalle becomes first match referee to officiate in 200 Test matches kvn
Author
Bengaluru, First Published Nov 22, 2021, 9:19 AM IST

ಗಾಲೆ(ನ.22): 200 ಟೆಸ್ಟ್‌ ಪಂದ್ಯಗಳಲ್ಲಿ ಮ್ಯಾಚ್‌ ರೆಫ್ರಿಯಾಗಿ (ICC Match Referee) ಕಾರ‍್ಯನಿರ್ವಹಿಸಿದ ಮೊದಲ ವ್ಯಕ್ತಿ ಎನ್ನುವ ದಾಖಲೆಯನ್ನು ಶ್ರೀಲಂಕಾದ ರಂಜನ್‌ ಮದುಗಲೆ (Ranjan Madugalle) ಬರೆದಿದ್ದಾರೆ. ಇಲ್ಲಿ ಭಾನುವಾರ ಆರಂಭಗೊಂಡ ಶ್ರೀಲಂಕಾ ಹಾಗೂ ವೆಸ್ಟ್‌ಇಂಡೀಸ್‌ (Sri Lanka vs West Indies) ನಡುವಿನ ಮೊದಲ ಟೆಸ್ಟ್‌ನಲ್ಲಿ ಕಾರ‍್ಯನಿರ್ವಹಿಸುವ ಮೂಲಕ ರಂಜನ್‌ ಈ ಮೈಲಿಗಲ್ಲು ತಲುಪಿದರು. 200 ಪುರುಷರ ಟೆಸ್ಟ್‌ ಜೊತೆಗೆ ರಂಜನ್‌ 369 ಪುರುಷರ ಏಕದಿನ, 125 ಪುರುಷರ ಅಂತಾರಾಷ್ಟ್ರೀಯ ಟಿ20, 14 ಮಹಿಳಾ ಏಕದಿನ ಪಂದ್ಯ, 8 ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮ್ಯಾಚ್‌ ರೆಫ್ರಿಯಾಗಿ ಕೆಲಸ ಮಾಡಿದ್ದಾರೆ.

ಇಂಗ್ಲೆಂಡ್‌ನ ಕ್ರಿಸ್‌ ಬ್ರಾಡ್‌ (Chris Broad) (113 ಟೆಸ್ಟ್‌), ಮದುಗಲೆ ನಂತರ ಅತಿಹೆಚ್ಚು ಟೆಸ್ಟ್‌ನಲ್ಲಿ ಕಾರ‍್ಯನಿರ್ವಹಿಸಿದ ಮ್ಯಾಚ್‌ ರೆಫ್ರಿ ಎನಿಸಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಲಂಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದ ಮದುಗಲೆ, 1993ರಲ್ಲಿ ಐಸಿಸಿ ಮ್ಯಾಚ್‌ ರೆಫ್ರಿಯಾಗಿ ನೇಮಕಗೊಂಡರು. ಅವರು 4 ಐಸಿಸಿ ಪುರುಷರ ಏಕದಿನ ವಿಶ್ವಕಪ್‌ ಫೈನಲ್‌ (ICC ODI World Cup Final) (1999, 2003, 2015, 2019), 3 ಐಸಿಸಿ ಚಾಂಪಿಯನ್ಸ್‌ ಟ್ರೋಫಿ (ICC Champions Trophy Final) ಫೈನಲ್‌ (2004, 2006, 2013) ಹಾಗೂ 4 ಐಸಿಸಿ ಪುರುಷರ ಟಿ20 ವಿಶ್ವಕಪ್‌ ಫೈನಲ್‌ (ICC T20 World Cup Final) (2007, 2010, 2016, 2021)ನಲ್ಲಿ ಕಾರ‍್ಯನಿರ್ವಹಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಮದುಗಲೆ ಸಾಧನೆಯನ್ನು ಕೊಂಡಾಡಿರುವ ಐಸಿಸಿ, ಅವರನ್ನು ಅಭಿನಂದಿಸಿದೆ.

IND vs NZ T20: ಅಕ್ಸರ್ ಪಟೇಲ್ ಜಾದೂ, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಕ್ಲೀನ್ ಸ್ವೀಪ್ ಗೆಲುವು!

ರಂಜನ್ ಮದುಗಲೆಯವರ ಈ ಸಾಧನೆಗೆ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ (Mahela Jayawardene) ಸೇರಿದಂತೆ ಹಲವು ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ. ರಂಜನ್‌ ಮದುಗಲೆ ಶ್ರೀಲಂಕಾ ಪರ 21 ಟೆಸ್ಟ್ ಹಾಗೂ 63 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 1,029 ಹಾಗೂ 950 ರನ್‌ ಬಾರಿಸಿದ್ದಾರೆ. ಇನ್ನು ಮದುಗಲೆ ತಾನಾಡಿದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಲಂಕಾ ತಂಡದ ನಾಯಕನಾಗಿಯೂ ಕಾರ್ಯ ನಿರ್ವಹಿಸಿದ್ದರು.

ಕರುಣರತ್ನೆ ಶತಕ: ಲಂಕಾ ಮೊದಲ ದಿನಕ್ಕೆ 267/3

ಗಾಲೆ: ನಾಯಕ ದಿಮುತ್‌ ಕರುಣರತ್ನೆ (Dimuth Karunaratne ) (ಔಟಾಗದೆ 132) ಶತಕ, ಪಥುಮ್‌ ನಿಸ್ಸಾಂಕ(56) ಹಾಗೂ ಧನಂಜಯ ಡಿ ಸಿಲ್ವಾ (Dhananjaya de Silva) (ಔಟಾಗದೆ 56) ಬಾರಿಸಿದ ಅರ್ಧಶತಕಗಳ ನೆರವಿನಿಂದ, ವೆಸ್ಟ್‌ಇಂಡೀಸ್‌ ವಿರುದ್ಧ ಭಾನುವಾರ ಆರಂಭಗೊಂಡ ಮೊದಲ ಟೆಸ್ಟ್‌ನ ಮೊದಲ ದಿನದಂತ್ಯಕ್ಕೆ ಶ್ರೀಲಂಕಾ 3 ವಿಕೆಟ್‌ ನಷ್ಟಕ್ಕೆ 267 ರನ್‌ ಕಲೆಹಾಕಿದೆ. 

ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಪೇರಿಸಿ ಇನ್ನಿಂಗ್ಸ್‌ ಗೆಲುವಿಗೆ ಪ್ರಯತ್ನಿಸುವ ಲಕ್ಷಣಗಳು ಕಂಡುಬರುತ್ತಿವೆ. ಮೊದಲ ವಿಕೆಟ್‌ಗೆ 139 ರನ್‌ ಜೊತೆಯಾಟ ಪಡೆದ ಲಂಕಾ, ಆ ಬಳಿಕ ಕೇವಲ 31 ರನ್‌ಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಲಂಕಾ ತಂಡವು 170 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಕ್ಷಣಕಾಲ ಆತಂಕಕ್ಕೆ ಒಳಗಾಗಿತ್ತು. ಆದರೆ ಮುರಿಯದ 4ನೇ ವಿಕೆಟ್‌ಗೆ ದಿಮುತ್‌ ಹಾಗೂ ಡಿ ಸಿಲ್ವಾ 97 ರನ್‌ ಜೊತೆಯಾಟವಾಡಿ ತಂಡವನ್ನು ಉತ್ತಮ ಸ್ಥಿತಿ ತಲುಪಿಸಿದರು. ಸದ್ಯ ನಾಯಕ ದಿಮುತ್ ಕರುಣರತ್ನೆ(132*) ಹಾಗೂ ಧನಂಜಯ ಡಿ ಸಿಲ್ವಾ(56*) ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ವಿಂಡೀಸ್‌ ಪರ ರೋಸ್ಟನ್‌ ಚೇಸ್‌ 2 ವಿಕೆಟ್‌ ಕಬಳಿಸಿದರೆ, ಶೆನೊನ್ ಗೇಬ್ರಿಯಲ್ ಒಂದು ವಿಕೆಟ್ ಪಡೆದರು. ಸ್ವತಃ ನಾಯಕ ಕ್ರೆಗ್ ಬ್ರಾಥ್‌ವೇಟ್‌ ಸೇರಿದಂತೆ 8 ಬೌಲರ್‌ಗಳು ದಾಳಿ ನಡೆಸಿದರೂ, ಲಂಕಾವನ್ನು ಕಟ್ಟಿಹಾಕಲು ಸಫಲರಾಗಲಿಲ್ಲ.
 

Follow Us:
Download App:
  • android
  • ios