ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ನಡೆಸಿದ ತಪ್ಪಿಗೆ ಲಂಕಾ ಮಾಜಿ ವೇಗಿ ನುವಾನ್ ಜೋಯ್ಸಾ ಐಸಿಸಿಯಿಂದ 6 ವರ್ಷಗಳ ಕಾಲ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದುಬೈ(ಏ.28): ಫಿಕ್ಸಿಂಗ್ ಭೂತ ಕ್ರಿಕೆಟ್ ಜಗತ್ತನ್ನು ಬಿಟ್ಟೂ ಬಿಡದಂತೆ ಕಾಡುತ್ತಿದ್ದು, ಇದೀಗ ಶ್ರೀಲಂಕಾ ಮಾಜಿ ವೇಗಿ ಹಾಗೂ ಕೋಚ್‌ ನುವಾನ್ ಜೋಯ್ಸಾ 6 ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಕ್ಕೆ ಗುರಿಯಾಗಿದ್ದಾರೆ.

ಶಂಕಿತ ಭಾರತದ ಬುಕಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದು ಹಾಗೂ ಮ್ಯಾಚ್‌ ಫಿಕ್ಸಿಂಗ್ ಮಾಡಲು ಯತ್ನಿಸಿದ್ದು ತನಿಖೆಯ ವೇಳೆ ಸಾಬೀತಾದ ಹಿನ್ನೆಲೆಯಲ್ಲಿ ಐಸಿಸಿ ಲಂಕಾ ಎಡಗೈ ವೇಗಿಯನ್ನು 6 ವರ್ಷಗಳ ಕಾಲ ಬ್ಯಾನ್‌ ಮಾಡಿದೆ. ನುವಾನ್ ಜೋಯ್ಸಾ ಅವರ ನಿಷೇಧ ಶಿಕ್ಷೆ ಅಕ್ಟೋಬರ್ 31, 2018ರಿಂದಲೇ ಆರಂಭವಾಗಿದೆ. 

Scroll to load tweet…

ರಾಷ್ಟ್ರಿಯ ತಂಡದ ಕೋಚ್‌ ಆಗಿರುವವರು ಮಾದರಿಯಾಗಿರಬೇಕು. ಅದು ಬಿಟ್ಟು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವುದು ಹಾಗೂ ಇತರರನ್ನು ಭ್ರಷ್ಟಾಚಾರಿಯನ್ನಾಗಿಸುವುದಲ್ಲ ಎಂದು ಐಸಿಸಿ ಇಂಟಿಗ್ರಿಟಿ ಯೂನಿಟ್‌ನ ಜನರಲ್‌ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್‌ ಹೇಳಿದ್ದಾರೆ. ಮ್ಯಾಚ್‌ ಫಿಕ್ಸಿಂಗ್ ಮಾಡುವುದು ಈ ಕ್ರೀಡೆಯ ಸ್ಪಷ್ಟವಾದ ಮೂಲಭೂತ ಉಲ್ಲಂಘನೆಯಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎನ್ನುವುದನ್ನು ಅಲೆಕ್ಸ್‌ ಮಾರ್ಷಲ್‌ ಪುನರುಚ್ಚರಿಸಿದ್ದಾರೆ.

42 ವರ್ಷದ ನುವಾನ್‌ ಜೋಯ್ಸಾ ಶ್ರೀಲಂಕಾ ಪರ 30 ಟೆಸ್ಟ್‌ ಹಾಗೂ 95 ಏಕದಿನ ಪಂದ್ಯಗಳನ್ನಾಡಿದ್ದಾರೆ. ಯುಎಇನಲ್ಲಿ 2017ರಲ್ಲಿ ನಡೆದ ಟಿ10 ಲೀಗ್‌ನಲ್ಲಿ ಟೀಂ ಶ್ರೀಲಂಕಾದ ಬೌಲಿಂಗ್ ಕೋಚ್ ಆಗಿದ್ದ ಜೋಯ್ಸಾ ಮೇಲೆ ಮ್ಯಾಚ್‌ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ 2018ರಲ್ಲೇ ಲಂಕಾ ಎಡಗೈ ವೇಗಿ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಐಸಿಸಿಗೆ 2017ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ಎ ತಂಡದ ಬೌಲಿಂಗ್‌ ಕೋಚ್ ಆಗಿದ್ದ ಸಂದರ್ಭದಲ್ಲಿ ಭಾರತದ ಬುಕಿಯೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವ ವಿಚಾರ ಖಚಿತವಾಗಿತ್ತು. 

ಫಿಕ್ಸಿಂಗ್‌: ದಿಲ್ಹಾರಾ ಲೋಕುಹೆಟ್ಟಿಗೆಗೆ ಐಸಿಸಿ 8 ವರ್ಷ ನಿಷೇಧ

ಈ ತಿಂಗಳ ಆರಂಭದಲ್ಲೇ ಲಂಕಾ ಮಾಜಿ ವೇಗಿ ದಿಲ್ಹಾರ ಲೋಕಹೆಟ್ಟಿಗೆ ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ತಪ್ಪಿಗಾಗಿ ಐಸಿಸಿಯಿಂದ 8 ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಕ್ಕೆ ಗುರಿಯಾಗಿದ್ದರು. ಇನ್ನು 2019ರಲ್ಲಿ ಭ್ರಷ್ಟಾಚಾರ ನಿಗ್ರಹ ಘಟಕದ ತನಿಖೆಗೆ ಸಹಕರಿಸಿಲ್ಲ ಎನ್ನುವ ತಪ್ಪಿಗೆ ಸನತ್ ಜಯಸೂರ್ಯ ಕೂಡಾ ಐಸಿಸಿಯಿಂದ ನಿಷೇಧಕ್ಕೀಡಾಗಿದ್ದರು. 2016ರಲ್ಲಿ ಇದೇ ರೀತಿ ಲಂಕಾ ಮಾಜಿ ಆಫ್‌ಸ್ಪಿನ್ನರ್ ಜಯನಂದ ವರಣವೀರಾ ಸಹಾ ಐಸಿಸಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.