ಬಾಂಗ್ಲಾದೇಶ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲೂ ಶ್ರೀಲಂಕಾ ತನ್ನ ಬಿಗಿಹಿಡಿತವನ್ನು ಮುಂದುವರೆಸಿದ್ದು, ಒಟ್ಟಾರೆ 259 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕ್ಯಾಂಡಿ(ಮೇ.02): ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ನಲ್ಲಿ ಶ್ರೀಲಂಕಾ ಮೇಲುಗೈ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯದ ವೇಳೆಗೆ ಲಂಕಾ ಹಿಡಿತದಲ್ಲಿ ಬಾಂಗ್ಲಾದೇಶ ತಂಡ ಸಿಲುಕಿಕೊಂಡಿದೆ.

ಮೊದಲ ಇನ್ನಿಂಗ್ಸಲ್ಲಿ 7 ವಿಕೆಟ್‌ಗೆ 493 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡ ಲಂಕಾ, ಮೊದಲ ಇನ್ನಿಂಗ್ಸಲ್ಲಿ ಬಾಂಗ್ಲಾವನ್ನು 251 ರನ್‌ಗೆ ಆಲೌಟ್‌ ಮಾಡಿತು. ಪ್ರವೀಣ್‌ ಜಯವಿಕ್ರಮ 6 ವಿಕೆಟ್‌ ಕಬಳಿಸುವ ಮೂಲಕ ಬಾಂಗ್ಲಾದೇಶ ಕುಸಿತಕ್ಕೆ ಕಾರಣರಾದರು. ಬಾಂಗ್ಲಾದೇಶ ಪರ ತಮೀಮ್ ಇಕ್ಬಾಲ್‌ 92 ರನ್‌ ಬಾರಿಸಿ ಕೇವಲ 8 ರನ್ ಅಂತರದಲ್ಲಿ ಶತಕ ವಂಚಿತರಾದರು. ಇನ್ನು ಮೊಮಿನುಲ್ ಹಕ್‌(49) ಹಾಗೂ ಮುಷ್ಪಿಕುರ್ ರಹೀಮ್(40) ರನ್ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬಾಂಗ್ಲಾ ಬ್ಯಾಟ್ಸ್‌ಗಳು ಲಂಕಾ ಬೌಲರ್ ಎದುರು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ.

Scroll to load tweet…

2ನೇ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಲಂಕಾ ದೊಡ್ಡ ಮೊತ್ತ

ಇನ್ನು 2ನೇ ಇನ್ನಿಂಗ್ಸ್‌ ಆರಂಭಿಸಿರುವ ಲಂಕಾ ಆರಂಭಿಕ ಆಘಾತ ಅನುಭವಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಲಹಿರು ತಿರುಮನ್ನೆ ಹಾಗೂ ಒಶಾಡ ಫರ್ನಾಂಡೋ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ. 3ನೇ ದಿನದಂತ್ಯಕ್ಕೆ ಲಂಕಾ 2 ವಿಕೆಟ್‌ಗೆ 17 ರನ್‌ ಗಳಿಸಿದ್ದು, ಒಟ್ಟು 259 ರನ್‌ ಮುನ್ನಡೆ ಪಡೆದಿದೆ.

ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ: 493/7 ಡಿ & 17/2
ಬಾಂಗ್ಲಾದೇಶ: 251/10
(* ಮೂರನೇ ದಿನದಾಟದಂತ್ಯದ ವೇಳೆಗೆ)