* ಇಂಗ್ಲೆಂಡ್ ವಿರುದ್ದದ ಸರಣಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ* 24 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಿದ ಲಂಕಾ ಆಯ್ಕೆ ಸಮಿತಿ* ಇಂಗ್ಲೆಂಡ್ ಪ್ರವಾಸದಲ್ಲಿ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿರುವ ಲಂಕಾ

ಕೊಲಂಬೊ(ಜೂ.05): ಮುಂಬರುವ ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿಗಳುಗೆ 24 ಆಟಗಾರರನ್ನೊಳಗೊಂಡ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಅನುಭವಿ ಆಟಗಾರರಾದ ಆವಿಷ್ಕಾ ಫರ್ನಾಂಡೊ, ನುವಾನ್ ಪ್ರದೀಪ್, ಒಶಾಡ ಫರ್ನಾಂಡೊ ಮತ್ತು ಕಸುನ್‌ ರಜಿತಾ ತಂಡ ಕೂಡಿಕೊಂಡಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ತಲಾ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಎರಡೂ ಮಾದರಿಯ ತಂಡವನ್ನು ಕುಸಾಲ್ ಪೆರೆರಾ ಮುನ್ನಡೆಸಲಿದ್ದಾರೆ. ಐಸಿಸಿ ಕ್ರಿಕೆಟ್‌ ವರ್ಲ್ಡ್‌ ಕಪ್‌ ಸೂಪರ್ ಲೀಗ್ ಟೂರ್ನಿಯಲ್ಲಿ ಲಂಕಾ ತಂಡವು ಮೊದಲ ಸರಣಿ ಗೆಲುವು ದಾಖಲಿಸಲು ಕಾತರಿಸುತ್ತಿದೆ. ಹೀಗಾಗಿ ಕೆಲವು ಅನುಭವಿ ಆಟಗಾರರಿಗೆ ಲಂಕಾ ಆಯ್ಕೆ ಸಮಿತಿ ಮಣೆ ಹಾಕಿದೆ.

Scroll to load tweet…

ಇತ್ತೀಚೆಗಷ್ಟೇ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ಆಘಾತಕಾರಿಯಾಗಿ ಸೋಲು ಕಂಡು ಮುಖಭಂಗ ಅನುಭವಿಸಿತ್ತು. ತಮೀಮ್ ಇಕ್ಬಾಲ್ ನೇತೃತ್ವದ ಬಾಂಗ್ಲಾದೇಶ ತಂಡ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿತ್ತು. ಆದರೆ ಮೂರನೇ ಪಂದ್ಯದಲ್ಲಿ ಲಂಕಾ ಗೆಲುವು ದಾಖಲಿಸುವ ಮೂಲಕ ವೈಟ್‌ವಾಷ್ ಭೀತಿಯಿಂದ ಪಾರಾಯಿತು.

ಬಾಂಗ್ಲಾದೇಶ ಎದುರು ಕೊನೆಯ ಏಕದಿನ ಪಂದ್ಯ ಗೆದ್ದು ನಿಟ್ಟುಸಿರು ಬಿಟ್ಟ ಶ್ರೀಲಂಕಾ..!

ಶ್ರೀಲಂಕಾ ಕ್ರಿಕೆಟ್‌ ತಂಡವು ಜೂನ್ 18ರಂದು ಕೆಂಟ್ ತಂಡದ ವಿರುದ್ದ ಅಭ್ಯಾಸ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಮೊದಲಿಗೆ ಜೂನ್ 23ರಿಂದ ಜೂನ್‌ 26ರವರೆಗೆ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದಾದ ಬಳಿಕ ಜೂನ್ 29ರಿಂದ ಜುಲೈ 04ರ ವರೆಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಶ್ರೀಲಂಕಾ ತಂಡ ಹೀಗಿದೆ ನೋಡಿ:

ಕುಸಾಲ್ ಪೆರೆರಾ(ನಾಯಕ), ಕುಸಾಲ್ ಮೆಂಡೀಸ್, ಧನುಷ್ಕಾ ಗುಣತಿಲಕ, ಪಥುಮ್ ನಿಶಾಂಕ, ಆವಿಷ್ಕಾ ಫರ್ನಾಂಡೊ, ಒಶಾಡ ಫರ್ನಾಂಡೊ, ಅಕಿಲಾ ಧನಂಜಯ, ದುಸ್ಮಂತ್ ಚಮಿರಾ, ಇಸುರು ಉಡಾನ, ಬಿನುರಾ ಫರ್ನಾಂಡೊ, ನುವಾನ್ ಪ್ರದೀಪ್, ಶಿರನ್ ಫರ್ನಾಂಡೊ, ಕಸುನ್ ರಜಿತಾ, ಧನಂಜಯ ಡಿಸಿಲ್ವಾ, ಚರಿತ್ ಅಸಲಂಕಾ, ನಿರ್ಶೊನ್ ಡಿಕ್‌ವೆಲ್ಲಾ, ದಶುನ್ ಶನಕಾ, ಚಮಿಕಾ ಕರುಣಾರತ್ನೆ, ಧನಂಜಯ ಲಕ್ಷನ್, ವಹಿಂದು ಹಸರಂಗ, ರಮೇಶ್ ಮೆಂಡೀಸ್, ಲಕ್ಸನ್ ಸಂದಕನ್‌, ಆಸಿತಾ ಫರ್ನಾಂಡೊ ಮತ್ತು ಇಶಾನ್ ಜಯರತ್ನೆ.