ನವದೆಹಲಿ(ಜೂ.01): ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಯುಎಇನಲ್ಲಿ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್‌ ಭಾಗ-2ಕ್ಕೆ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲು ಯುಎಇ ಕ್ರಿಕೆಟ್‌ ಮಂಡಳಿ ಚಿಂತನೆ ನಡೆಸಿದೆ. ಬಿಸಿಸಿಐ ಸಹ ಈ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ. ಕ್ರೀಡಾಂಗಣಗಳ ಸಾಮರ್ಥ್ಯದ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ. 

ಒಂದೊಮ್ಮೆ ಪ್ರೇಕ್ಷಕರಿಗೆ ಮೈದಾನಕ್ಕೆ ಪ್ರವೇಶ ಸಿಕ್ಕರೂ, ಪ್ರೇಕ್ಷಕರು ಕೋವಿಡ್‌ ಲಸಿಕೆ ಪಡೆದಿರುವ ಕುರಿತಂತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು ಎಂದು ಷರತ್ತು ವಿಧಿಸಲಾಗುತ್ತೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಯುಎಇನಲ್ಲಿ ಬಹುತೇಕರಿಗೆ ಈಗಾಗಲೇ ಲಸಿಕೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. 

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ‍್ಯದರ್ಶಿ ಜಯ್‌ ಶಾ, ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಬುಧವಾರ ಯುಎಇಗೆ ತೆರಳಿ, ಅಲ್ಲಿನ ಕ್ರಿಕೆಟ್‌ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈಗಾಗಲೇ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅರಬ್ಬರ ನಾಡಿಗೆ ಬಂದಿಳಿದ್ದು, ಟೂರ್ನಿ ಆಯೋಜನೆಯ ಕುರಿತಂತೆ ಯೋಜನೆ ನಡೆಸುತ್ತಿದ್ದಾರೆ.

ವಿದೇಶಿ ಕ್ರಿಕೆಟಿಗರು ಗೈರಾದ್ರೂ ಐಪಿಎಲ್‌ ನಡೆಯುತ್ತೆ: ರಾಜೀವ್ ಶುಕ್ಲಾ

13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಯುಎಇ ಆತಿಥ್ಯ ವಹಿಸಿತ್ತು. ಅಬುಧಾಬಿ, ಶಾರ್ಜಾ ಹಾಗೂ ದುಬೈ ಈ ಮೂರು ಮೈದಾನದಲ್ಲಿ ಯಶಸ್ವಿಯಾಗಿ ಐಪಿಎಲ್‌ ಟೂರ್ನಿ ಜರುಗಿತ್ತು. ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಗೆ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿತ್ತು. ಖಾಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ 5ನೇ ಬಾರಿಯ ಐಪಿಎಲ್ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 

ಇನ್ನು ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಖಾಲಿ ಮೈದಾನದಲ್ಲೇ ನಡೆಯುತ್ತಿತ್ತು. ಈ ಆವೃತ್ತಿಯ ಮೊದಲ 29 ಪಂದ್ಯಗಳು ಅತ್ಯಂತ ಸರಾಗವಾಗಿ ನಡೆದಿದ್ದವು. ಅದರೆ ಬಯೋ ಬಬಲ್‌ನೊಳಗೆ ಕೆಲವು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವ ವಿಚಾರ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಬಿಸಿಸಿಐ, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"