ಎಬಿ ಡಿವಿಲಿಯರ್ಸ್ ಅವರ ಅಬ್ಬರದ ಶತಕದ ನೆರವಿನಿಂದ ಪಾಕಿಸ್ತಾನವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಶಾರ್ಜೀಲ್ ಖಾನ್ ಅವರ 76 ರನ್‌ಗಳ ಹೊರತಾಗಿಯೂ, ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ಗೆಲುವು ಸಾಧಿಸಿತು.

ಎಡ್ಜ್‌ಬಾಸ್ಟನ್: ಎಬಿ ಡಿವಿಲಿಯರ್ಸ್ ಅವರ ಅಬ್ಬರದ ಶತಕದ ನೆರವಿನಿಂದ ಪಾಕಿಸ್ತಾನವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಸಾಕಷ್ಟು ವರ್ಷಗಳೇ ಕಳೆದಿದ್ದರೂ ಎಬಿಡಿ ಬ್ಯಾಟಿಂಗ್, ಈಗಿನ ಸಕ್ರಿಯ ಬ್ಯಾಟರ್‌ಗಳು ನಾಚುವಂತೆ ಬ್ಯಾಟ್ ಬೀಸಿದ್ದಾರೆ. ಈ ಗೆಲುವಿನೊಂದಿಗೆ ಎಬಿ ಡಿವಿಲಿಯರ್ಸ್ ಮಹತ್ವದ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಚಾಂಪಿಯನ್ಸ್ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಪಾಕಿಸ್ತಾನ ಲೆಜೆಂಡ್ಸ್‌ ಪರ ಶಾರ್ಜೀಲ್ ಖಾನ್ 44 ಎಸೆತಗಳಲ್ಲಿ 76 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಉಮರ್ ಅಮಿನ್ 36 ಹಾಗೂ ಆಸಿಫ್ ಅಲಿ 28 ರನ್ ಸಿಡಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಅಂತಿಮವಾಗಿ ಪಾಕಿಸ್ತಾನ ಲೆಜೆಂಡ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 195 ರನ್ ಕಲೆಹಾಕಿತು.

Scroll to load tweet…

ಇನ್ನು ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿಸ್ಪೋಟಕ ಆರಂಭ ಪಡೆಯಿತು. ಮೊದಲ ಆರು ಓವರ್‌ನಲ್ಲೇ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ 72 ರನ್‌ ಕಲೆಹಾಕಿತು. 60 ಎಸೆತಗಳಲ್ಲಿ 120 ರನ್ ಗಳಿಸಿ ಅಜೇಯರಾಗುಳಿದ ಡಿವಿಲಿಯರ್ಸ್ ಮತ್ತು 28 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗುಳಿದ ಜೆಪಿ ಡುಮಿನಿ ಅವರ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ 16.5 ಓವರ್‌ಗಳಲ್ಲಿ ಗುರಿ ತಲುಪಿತು. 18 ರನ್ ಗಳಿಸಿದ ಹಾಶಿಂ ಆಮ್ಲಾ ಅವರ ವಿಕೆಟ್ ಮಾತ್ರ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಕಳೆದುಕೊಂಡಿತು.

Scroll to load tweet…

ಪಾಕ್ ಬೌಲರ್‌ಗಳನ್ನು ಚಚ್ಚಿದ ಡಿವಿಲಿಯರ್ಸ್ 47 ಎಸೆತಗಳಲ್ಲಿ ಟೂರ್ನಿಯ ಮೂರನೇ ಶತಕ ಪೂರೈಸಿದರು. ಈ ಹಿಂದೆ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ 39 ಎಸೆತಗಳಲ್ಲಿ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್ ವಿರುದ್ಧ 41 ಎಸೆತಗಳಲ್ಲಿ ಡಿವಿಲಿಯರ್ಸ್ ಶತಕ ಗಳಿಸಿದ್ದರು. 196 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪರ ಡಿವಿಲಿಯರ್ಸ್ ಮತ್ತು ಹಾಶಿಂ ಆಮ್ಲ ಅಬ್ಬರದ ಆರಂಭ ಒದಗಿಸಿದರು.

ಮೊದಲ ಆವೃತ್ತಿಯ ವರ್ಲ್ಡ್‌ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ತಂಡವು ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಎರಡನೇ ಆವೃತ್ತಿಯ ವರ್ಲ್ಡ್‌ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ಲೆಜೆಂಡ್ಸ್ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮೀಸ್‌ನಲ್ಲಿ ಪಾಕಿಸ್ತಾನ ಎದುರು ಅಡಲು ಇಂಡಿಯಾ ಲೆಜೆಂಡ್ಸ್ ನಿರಾಕರಿಸಿತ್ತು. ಪೆಹಲ್ಗಾಮ್ ದಾಳಿಯ ನಂತರ ಪಾಕ್ ಎದುರು ಭಾರತ ತನ್ನ ಬಹುತೇಕ ಎಲ್ಲಾ ಸಂಬಂಧ ಕಡಿತಗೊಳಿಸಿಕೊಂಡಿದೆ. ವರ್ಲ್ಡ್‌ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಭಾರತ ಪಾಕ್ ಎದುರು ಸೆಮಿಫೈನಲ್ ಆಡಲು ನಿರಾಕರಿಸಿದ್ದರಿಂದ ಪಾಕಿಸ್ತಾನ ತಂಡವು ನೇರವಾಗಿ ಫೈನಲ್ ಪ್ರವೇಶಿಸಿತ್ತು.