2019ರಲ್ಲಿ ತನ್ನ ತವರಿನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ 11 ಪಂದ್ಯಗಳಲ್ಲಿ 76 ಸಿಕ್ಸರ್‌ ಸಿಡಿಸಿತ್ತು. ದಕ್ಷಿಣ ಆಫ್ರಿಕಾ, 7 ಪಂದ್ಯಗಳಲ್ಲೇ ಆ ದಾಖಲೆ ಮುರಿದಿದೆ. ಸದ್ಯ ಈ ವಿಶ್ವಕಪ್‌ನಲ್ಲಿ ಹರಿಣ ಪಡೆ 82 ಸಿಕ್ಸರ್‌ ಬಾರಿಸಿದ್ದು, 100 ಸಿಕ್ಸರ್‌ಗಳ ಮೈಲಿಗಲ್ಲು ತಲುಪುವ ಗುರಿ ಹೊಂದಿದೆ.

ಪುಣೆ(ನ.02): ಏಕದಿನ ವಿಶ್ವಕಪ್‌ನ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆಯನ್ನು ದಕ್ಷಿಣ ಆಫ್ರಿಕಾ ಬರೆದಿದೆ. ಬುಧವಾರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ 15 ಸಿಕ್ಸರ್‌ ಚಚ್ಚಿದ ದ.ಆಫ್ರಿಕಾ, ಇಂಗ್ಲೆಂಡ್‌ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಿತು.

2019ರಲ್ಲಿ ತನ್ನ ತವರಿನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ 11 ಪಂದ್ಯಗಳಲ್ಲಿ 76 ಸಿಕ್ಸರ್‌ ಸಿಡಿಸಿತ್ತು. ದಕ್ಷಿಣ ಆಫ್ರಿಕಾ, 7 ಪಂದ್ಯಗಳಲ್ಲೇ ಆ ದಾಖಲೆ ಮುರಿದಿದೆ. ಸದ್ಯ ಈ ವಿಶ್ವಕಪ್‌ನಲ್ಲಿ ಹರಿಣ ಪಡೆ 82 ಸಿಕ್ಸರ್‌ ಬಾರಿಸಿದ್ದು, 100 ಸಿಕ್ಸರ್‌ಗಳ ಮೈಲಿಗಲ್ಲು ತಲುಪುವ ಗುರಿ ಹೊಂದಿದೆ. ಡಿ ಕಾಕ್‌ 18, ಕ್ಲಾಸೆನ್‌ 17, ಮಿಲ್ಲರ್‌ 14 ಸಿಕ್ಸರ್‌ ಸಿಡಿಸಿದ್ದಾರೆ.

ಈ ವಿಶ್ವಕಪ್‌ನಲ್ಲಿ ಡಿ ಕಾಕ್‌ 4ನೇ ಶತಕ

ಪುಣೆ: 2023ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್‌ ಕ್ವಿಂಟನ್‌ ಡಿ ಕಾಕ್‌ 4ನೇ ಶತಕ ದಾಖಲಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ 114 ರನ್‌ ಚಚ್ಚಿದ ಡಿ ಕಾಕ್‌, ಬಾಂಗ್ಲಾ ವಿರುದ್ಧ 174, ಆಸ್ಟ್ರೇಲಿಯಾ ವಿರುದ್ಧ 109, ಶ್ರೀಲಂಕಾ ವಿರುದ್ಧ 100 ರನ್‌ ಗಳಿಸಿದ್ದರು. ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಗರಿಷ್ಠ ಶತಕ ಬಾರಿಸಿದ ದಾಖಲೆ ರೋಹಿತ್‌ ಶರ್ಮಾ ಹೆಸರಿನಲ್ಲಿದೆ. ಅವರು 2019ರ ವಿಶ್ವಕಪ್‌ನಲ್ಲಿ 5 ಶತಕ ಸಿಡಿಸಿದ್ದರು. ಡಿ ಕಾಕ್‌ ಇನ್ನೊಂದು ಶತಕ ಬಾರಿಸಿದರೆ, ರೋಹಿತ್‌ರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಹರಿಣಗಳ ಹೊಡೆತಕ್ಕೆ ನೆಲಕಚ್ಚಿದ ಕಿವೀಸ್‌!

ಪುಣೆ: ದಕ್ಷಿಣ ಆಫ್ರಿಕಾಕ್ಕೆ ಮೊದಲು ಬ್ಯಾಟ್‌ ಮಾಡಲು ಬಿಡುವುದು ಎಷ್ಟು ಅಪಾಯಕಾರಿ ಎನ್ನುವುದು ಗೊತ್ತಿದರೂ, ಆದೇ ತಪ್ಪು ಮಾಡಿದ ನ್ಯೂಜಿಲೆಂಡ್‌ ಭಾರಿ ದಂಡ ತೆರಬೇಕಾಗಿ ಬಂತು. 190 ರನ್‌ಗಳ ಬೃಹತ್‌ ಗೆಲುವಿನೊಂದಿಗೆ ದ.ಆಫ್ರಿಕಾ ಮತ್ತೆ ಅಗ್ರಸ್ಥಾನಕ್ಕೇರಿ ಸೆಮಿಫೈನಲ್‌ನಲ್ಲಿ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡರೆ, ಸತತ 3ನೇ ಸೋಲು ಕಿವೀಸ್‌ ಪಡೆಯನ್ನು ಭಾರಿ ಒತ್ತಡಕ್ಕೆ ಸಿಲುಕಿಸಿದೆ.

ಟಾಸ್ ಗೆದ್ದ ಕಿವೀಸ್‌ ನಾಯಕ ಟಾಮ್‌ ಲೇಥಮ್‌, ದ.ಆಫ್ರಿಕಾವನ್ನು ಬ್ಯಾಟ್‌ ಮಾಡುವಂತೆ ಆಹ್ವಾನಿಸಿದ್ದು ಬೆಂಕಿಯ ಜೊತೆ ಸರಸವಾಡಿದಂತಿತ್ತು. ಕ್ವಿಂಟನ್‌ ಡಿ ಕಾಕ್‌ ಹಾಗೂ ರಾಸ್ಸಿ ವಾನ್‌ ಡೆರ್‌ ಡುಸ್ಸೆನ್‌ರ ಶತಕಗಳು ನ್ಯೂಜಿಲೆಂಡ್‌ನ ಆತ್ಮವಿಶ್ವಾಸವನ್ನು ಕುಗ್ಗಿಸಿದರೆ, ಡೇವಿಡ್‌ ಮಿಲ್ಲರ್‌ರ ಸ್ಫೋಟಕ ಅರ್ಧಶತಕ, ಗುರಿ ಕಿವೀಸ್‌ ಕೈಗೆಟುಕದಷ್ಟು ಎತ್ತರಕ್ಕೆ ತಲುಪಿಸಿತು. 4 ವಿಕೆಟ್‌ಗೆ 357 ರನ್‌ ಚಚ್ಚಿದ ದ.ಆಫ್ರಿಕಾ, ಶಿಸ್ತುಬದ್ಧ ಬೌಲಿಂಗ್‌ ದಾಳಿ ಸಂಘಟಿಸಿ ನ್ಯೂಜಿಲೆಂಡನ್ನು 167 ರನ್‌ಗೆ ಕಟ್ಟಿಹಾಕಿತು.