World Cup 2023: ಲಂಕಾ ಎದುರು ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ..!
ವಿಶ್ವಕಪ್‌ನಲ್ಲಿ ಅತಿವೇಗದ ಶತಕ ಚಚ್ಚಿದ ಮಾರ್ಕ್‌ರಮ್: ಇನ್ನು ಡಿ ಕಾಕ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಮಾರ್ಕ್‌ರಮ್ ವಿಶ್ವಕಪ್ ಟೂರ್ನಿಯಲ್ಲಿ ಅತಿವೇಗದ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಮಾರ್ಕ್‌ರಮ್ ಕೇವಲ 49 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದರು.
ನವದೆಹಲಿ(ಅ.07): ಕ್ವಿಂಟನ್ ಡಿ ಕಾಕ್, ರಾಸ್ಸಿ ವ್ಯಾನ್ ಡರ್ ಡುಸೇನ್ ಹಾಗೂ ಏಯ್ಡನ್ ಮಾರ್ಕ್‌ರಮ್ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಶ್ರೀಲಂಕಾ ಎದುರು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವದಾಖಲೆ ನಿರ್ಮಿಸಿದೆ. ಮೊದಲು ಬ್ಯಾಟ್ ಮಾಡಿದ ಹರಿಣಗಳ ಪಡೆ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 428 ರನ್ ಬಾರಿಸಿದ್ದು, ಶ್ರೀಲಂಕಾಗೆ ಕಠಿಣ ಗುರಿ ನೀಡಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹರಿಣಗಳ ಪಡೆ ಆರಂಭದಲ್ಲೇ ನಾಯಕ ತೆಂಬ ಬವುಮಾ ವಿಕೆಟ್ ಕಳೆದುಕೊಂಡಿತು. ಬವುಮಾ ಕೇವಲ 8 ರನ್ ಬಾರಿಸಿ ದಿಲ್ಯ್ಷಾನ್ ಮದುಶನಕಾಗೆ ವಿಕೆಟ್ ಒಪ್ಪಿಸಿದ್ದರು. ಆರಂಭದಲ್ಲೇ ನಾಯಕ ವಿಕೆಟ್ ಕಳೆದುಕೊಂಡರೂ, ಮೈಚಳಿ ಬಿಟ್ಟು ಬ್ಯಾಟಿಂಗ್ ನಡೆಸಿ ಗಮನ ಸೆಳೆಯಿತು.
ಡಿ ಕಾಕ್- ಡುಸೇನ್ ದ್ವಿಶತಕದ ಜುಗಲ್ಬಂದಿ: ನಾಯಕ ಬವುಮಾ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ರಾಸ್ಸಿ ವಾನ್ ಡರ್ ಡುಸೇನ್ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಜತೆಗೂಡಿ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಲಂಕಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಡಿ ಕಾಕ್ ಕೇವಲ 84 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 100 ರನ್ ಬಾರಿಸಿ ಮಿಂಚಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವ್ಯಾನ್ ಡರ್ ಡುಸೇನ್, 110 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 108 ರನ್ ಗಳಿಸಿ ವೆಲ್ಲಾಲಗೆಗೆ ವಿಕೆಟ್ ಒಪ್ಪಿಸಿದರು.
ಆಸೀಸ್ ಎದುರಿನ ಪಂದ್ಯಕ್ಕೂ ಮುನ್ನ ಗಿಲ್ ಬಗ್ಗೆ ಮಹತ್ವದ ಹೆಲ್ತ್ ಅಪ್ಡೇಟ್ ಕೊಟ್ಟ ಕೋಚ್ ರಾಹುಲ್ ದ್ರಾವಿಡ್..!
ವಿಶ್ವಕಪ್‌ನಲ್ಲಿ ಅತಿವೇಗದ ಶತಕ ಚಚ್ಚಿದ ಮಾರ್ಕ್‌ರಮ್: ಇನ್ನು ಡಿ ಕಾಕ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಮಾರ್ಕ್‌ರಮ್ ವಿಶ್ವಕಪ್ ಟೂರ್ನಿಯಲ್ಲಿ ಅತಿವೇಗದ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಮಾರ್ಕ್‌ರಮ್ ಕೇವಲ 49 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದರು. ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾದರು. ಈ ಮೊದಲು 2011ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಎದುರು ಐರ್ಲೆಂಡ್‌ನ ಕೆವಿನ್ ಒ ಬ್ರಿಯಾನ್ 50 ಎಸೆತಗಳಲ್ಲಿ ಶತಕ ಬಾರಿಸಿದ್ದು ದಾಖಲೆಯಾಗಿತ್ತು.
ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದ ಹರಿಣಗಳು:
ಲಂಕಾ ಎದುರು ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್ ಕಳೆದುಕೊಂಡು 428 ರನ್ ಬಾರಿಸುವ ಮೂಲಕ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಸ್ಕೋರ್ ಎನ್ನುವ ವಿಶ್ವದಾಖಲೆಗೆ ಹರಿಣಗಳ ಪಡೆ ಪಾತ್ರವಾಗಿದೆ. ಈ ಮೊದಲು 2015ರಲ್ಲಿ ಆಸ್ಟ್ರೇಲಿಯಾ ತಂಡವು ಪರ್ತ್‌ನಲ್ಲಿ ಆಫ್ಘಾನಿಸ್ತಾನ ವಿರುದ್ದ 7 ವಿಕೆಟ್ ಕಳೆದುಕೊಂಡು 417 ರನ್ ಬಾರಿಸಿತ್ತು. ಆ ದಾಖಲೆ ಇದೀಗ ನುಚ್ಚುನೂರಾಗಿದೆ.