WTC ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ದಿಟ್ಟ ಹೋರಾಟ ಪ್ರದರ್ಶಿಸುತ್ತಿದೆ. ಮಾರ್ಕರಮ್ ಮತ್ತು ಬವುಮಾ ಅಮೋಘ ಬ್ಯಾಟಿಂಗ್ ನೆರವಿನಿಂದ ಗೆಲುವಿನತ್ತ ದಕ್ಷಿಣ ಆಫ್ರಿಕಾ ದಿಟ್ಟ ಹೆಜ್ಜೆ ಇಟ್ಟಿದೆ. ಮೊದಲ ಇನ್ನಿಂಗ್ಸ್ ಹಿನ್ನಡೆಯ ನಡುವೆಯೂ ದಕ್ಷಿಣ ಆಫ್ರಿಕಾ ಗೆಲುವಿನ ಹಾದಿಯಲ್ಲಿದೆ.

ಲಂಡನ್: ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲುವಿನತ್ತ ದಕ್ಷಿಣ ಆಫ್ರಿಕಾ ದಿಟ್ಟ ಹೆಜ್ಜೆ ಇರಿಸಿದೆ. ಮೊದಲ ಇನ್ನಿಂಗ್ಸ್‌ನ ಭಾರೀ ಹಿನ್ನಡೆ, ಆಸ್ಟ್ರೇಲಿಯಾದ 2ನೇ ಇನ್ನಿಂಗ್ಸ್‌ನ ದಿಟ್ಟ ಹೋರಾಟದ ಬಳಿಕ ಏಯ್ಡನ್ ಮಾರ್ಕರಮ್ ಹಾಗೂ ನಾಯಕ ತೆಂಬಾ ಬವುಮಾರ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ತಂಡವನ್ನು ಕಪ್ ಗೆಲುವಿನತ್ತ ಮುನ್ನಡೆಸುತ್ತಿದೆ.

ಲಾರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ನಲ್ಲಿ ಗೆಲುವಿಗೆ ದ.ಆಫ್ರಿಕಾ ಪಡೆದ ಗುರಿ 282. ಟೆಸ್ಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ಇದು ಬೃಹತ್ ಗುರಿ. ಹೀಗಾಗಿಯೇ ದಕ್ಷಿಣ ಆಫ್ರಿಕಾ ಸೋಲು ಖಚಿತ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಆದರೆ ದಿಟ್ಟ ಪ್ರತಿರೋಧ ತೋರಿದ ತಂಡ 3ನೇ ದಿನದಂತ್ಯಕ್ಕೆ2 ವಿಕೆಟ್‌ಗೆ 213 ರನ್ ಗಳಿಸಿದ್ದು, ಇನ್ನು 69 ರನ್ ಅಗತ್ಯವಿದೆ. ಆಸ್ಟ್ರೇಲಿಯಾ ಸತತ 2ನೇ ಟ್ರೋಫಿ ಎತ್ತಿ ಹಿಡಿಯಲು 8 ವಿಕೆಟ್ ಪಡೆಯಬೇಕಿದೆ.

Scroll to load tweet…

ಸ್ಟಾರ್ಕ್ ಮ್ಯಾಜಿಕ್: 2ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್ ನಲ್ಲಿ 8 ವಿಕೆಟ್‌ಗೆ 144 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಶುಕ್ರವಾರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿತು. 148ಕ್ಕೆ 9 ವಿಕೆಟ್ ಕಳೆದುಕೊಂಡ ತಂಡಕ್ಕೆ ಮಿಚೆಲ್ ಸ್ಟಾರ್ಕ್- ಹೇಜಲ್‌ವುಡ್ ಆಸರೆಯಾದರು. ಈ ಜೋಡಿ 10ನೇ ವಿಕೆಟ್‌ಗೆ 59 ರನ್ ಸೇರಿಸಿತು. ಸ್ಟಾರ್ಕ್ ಔಟಾಗದೆ 58 ರನ್ ಸಿಡಿಸಿದರೆ, ಹೇಜಲ್‌ವುಡ್ 17 ರನ್ ಕೊಡುಗೆ ನೀಡಿದರು.

ಭರ್ಜರಿ ಬ್ಯಾಟಿಂಗ್: ದೊಡ್ಡ ಗುರಿ ಪಡೆದ ದಕ್ಷಿಣ ಆಫ್ರಿಕಾ ಆರಂಭಿಕ ಆಘಾತಕ್ಕೆ ಒಳಗಾಯಿತು. ರಿಕೆಲ್ಟನ್ 6 ರನ್‌ಗೆ ಔಟಾದರು. 2ನೇ ವಿಕೆಟ್‌ಗೆ ಮಾರ್ಕ್‌ರಮ್-ವಿಯಾನ್ ಮುಲ್ಡರ್ (27) ಜೋಡಿ 61 ರನ್ ಸೇರಿಸಿತು. ಮುಲ್ಡರ್ ಔಟಾದ ಬಳಿಕ ಮಾರ್ಕ್‌ರನ್ನು ಕೂಡಿಕೊಂಡ ನಾಯಕ ಬವುಮಾ, ಅತ್ಯಮೋಘ ಜೊತೆಯಾಟವಾಡಿದರು. ಆಸೀಸ್‌ನ ಪ್ರಚಂಡ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಮುರಿಯದ 3ನೇ ವಿಕೆಟ್‌ಗೆ 232 ಎಸೆತಕ್ಕೆ 143 ರನ್‌ ಸೇರಿಸಿತು. ತಮ್ಮ ವೃತ್ತಿಬದುಕಿನ ಶ್ರೇಷ್ಠ ಆಟ ಪ್ರದರ್ಶಿಸಿದ ಮಾರ್ಕ್‌ರಮ್, 157 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಸದ್ಯ ಅವರು 102 ರನ್ ಗಳಿಸಿದ್ದು, ಬವುಮಾ(121 ಎಸೆತಕ್ಕೆ ಔಟಾಗದೆ 65) ಜೊತೆ 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸ್ಕೋರ್:

ಆಸ್ಟ್ರೇಲಿಯಾ 212/10 ಮತ್ತು 207/10 (ಸ್ಟಾರ್ಕ್ 58, ರಬಾಡ 4-59, ಎನ್‌ಗಿಡಿ 3-38)

ದಕ್ಷಿಣ ಆಫ್ರಿಕಾ 138/10 ಮತ್ತು 213/2 (3ನೇ ದಿನದಂತ್ಯಕ್ಕೆ) (ಮಾರ್ಕ್ರಮ್ 102*, ಬವುಮಾ 65*, ಮಿಚೆಲ್ ಸ್ಟಾರ್ಕ್ 2-53)

ವಿಮಾನ ದುರಂತ: ಭಾರತ, ಆಸೀಸ್, ಆಫ್ರಿಕಾ ಕ್ರಿಕೆಟಿಗರಿಂದ ಮನ ಪ್ರಾರ್ಥನೆ, ಕೈಗೆ ಕಪ್ಪು ಪಟ್ಟಿ

ಲಂಡನ್: ಗುರುವಾರ ಗುಜರಾತ್‌ ಅಹಮ ದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ಅವಘಡಕ್ಕೆ ಶುಕ್ರವಾರ ಭಾರತ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರರು ಸಂತಾಪ ಸೂಚಿಸಿದರು.

ಬೆಕೆನ್‌ಹ್ಯಾಮ್‌ನಲ್ಲಿ ಭಾರತ ಹಾಗೂ ಭಾರತ 'ಎ' ತಂಡಗಳ ನಡುವಿನ 4 ದಿನಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಆಟಗಾರರು, ಕೋಚ್‌ಗಳು ಮೌನ ಪ್ರಾರ್ಥನೆ ನಡೆಸಿದರು. ಬಳಿಕ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದರು. ಅಲ್ಲದೆ, ಲಾರ್ಡ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ 3ನೇ ದಿನದಾಟ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು, ಅಂಪೈರ್‌ಗಳು, ಪ್ರೇಕ್ಷಕರು ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಿ ದರು. ಬಳಿಕ ಆಟಗಾರರು, ಅಂಪೈರ್‌ಗಳು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು.