ಕೋಲ್ಕತಾ(ಜ.05): ಬಿಸಿಸಿಐ ಅಧ್ಯಕ್ಷ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಕೆಲ ವಾರಗಳಲ್ಲಿ ಮತ್ತೊಂದು ಆ್ಯಂಜಿಯೋಪ್ಲಾಸ್ಟಿಅವಶ್ಯಕತೆ ಇದೆ ಎಂದು ಗಂಗೂಲಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

9 ಹಿರಿಯ ವೈದ್ಯರ ತಂಡ ಗಂಗೂಲಿ ಆರೋಗ್ಯ ಸ್ಥಿತಿ ಬಗ್ಗೆ ಚರ್ಚೆ ನಡೆಸಿ ಆ್ಯಂಜಿಯೋಪ್ಲಾಸ್ಟಿಯನ್ನು ಮುಂದೂಡಬಹುದು ಎನ್ನುವ ನಿರ್ಧಾರಕ್ಕೆ ಬಂದಿದೆ ಎಂದು ವುಡ್‌ಲ್ಯಾಂಡ್ಸ್‌ ಆಸ್ಪತ್ರೆಯ ಮುಖ್ಯಸ್ಥೆ ಡಾ. ರುಪಾಲಿ ಬಸು ತಿಳಿಸಿದ್ದಾರೆ.

ಶನಿವಾರ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಗಂಗೂಲಿಗೆ ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿ ಹೃದಯದಲ್ಲಿದ್ದ ಒಂದು ಬ್ಲಾಕೇಜ್‌ ತೆಗೆದು ಸ್ಟೆಂಟ್‌ ಅಳವಡಿಸಲಾಗಿತ್ತು. ಅವರ ಹೃದಯದಲ್ಲಿ ಇನ್ನೂ 2 ಬ್ಲಾಕೇಜ್‌ಗಳಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಗಂಗೂಲಿಗೆ ಚಿಕಿತ್ಸೆ: ಕರ್ನಾಟಕದ ಖ್ಯಾತ ವೈದ್ಯ ದೇವಿಶೆಟ್ಟಿಗೆ ಬುಲಾವ್

ಸೋಮವಾರ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ, ಬಿಸಿಸಿಐ ಮಾಜಿ ಅಧ್ಯಕ್ಷ, ಕೇಂದ್ರ ರಾಜ್ಯ ಖಾತೆ ಸಚಿವ ಅನುರಾಗ್‌ ಠಾಕೂರ್‌ ಆಸ್ಪತ್ರೆಗೆ ಭೇಟಿ ನೀಡಿ ಗಂಗೂಲಿ ಆರೋಗ್ಯ ವಿಚಾರಿಸಿದರು.

ಇಂದು ಡಾ. ದೇವಿ ಶೆಟ್ಟಿ ಭೇಟಿ

ಕೋಲ್ಕತಾದ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗೂಲಿಯನ್ನು ಮಂಗಳವಾರ ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಭೇಟಿ ಮಾಡಲಿದ್ದು, ಅವರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಗಂಗೂಲಿ ಆರೋಗ್ಯ ಸ್ಥಿತಿ ಬಗ್ಗೆ ಚರ್ಚೆ ನಡೆಸಿದ 9 ಮಂದಿ ಹಿರಿಯ ವೈದ್ಯರ ಪೈಕಿ ಡಾ. ದೇವಿ ಶೆಟ್ಟಿಸಹ ಒಬ್ಬರು.