ಗಂಗೂಲಿಗೆ ಚಿಕಿತ್ಸೆ: ಕರ್ನಾಟಕದ ಖ್ಯಾತ ವೈದ್ಯ ದೇವಿಶೆಟ್ಟಿಗೆ ಬುಲಾವ್
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜನವರಿ 02ರಂದು ಲಘು ಹೃದಾಯಾಘಾತಕ್ಕೆ ಒಳಗಾಗಿದ್ದರು. ಸದ್ಯ ಕೋಲ್ಕತದ ವುಡ್‌ಲ್ಯಾಂಡ್ಸ್ ಖಾಸಗಿ ಆಸ್ಪತ್ರೆಯಲ್ಲಿ ದಾದಾ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಪ್ರಿನ್ಸ್ ಆಫ್ ಕೋಲ್ಕತ ಖ್ಯಾತಿಯ ಸೌರವ್ ಗಂಗೂಲಿ ಚಿಕಿತ್ಸೆ ನೆರವಾಗಲು ಕರ್ನಾಟಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ದೇವಿಪ್ರಸಾದ್ ಶೆಟ್ಟಿಗೆ ಬುಲಾವ್ ಬಂದಿದೆ. ಭಾರತ ಕಂಡ ಶ್ರೇಷ್ಠ ನಾಯಕನ ಚಿಕಿತ್ಸೆಗೆ ಇದೀಗ ಕನ್ನಡದ ಖ್ಯಾತ ಸರ್ಜನ್ ಮುಂದಾಗಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜನವರಿ 02ರಂದು ಜಿಮ್ ಮಾಡುವ ವೇಳೆ ಎದೆ ನೋವು ಕಾಣಿಸಿಕೊಂಡಿತ್ತು. ದಾದಾ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು.
ತಕ್ಷಣವೇ ಸೌರವ್ ಗಂಗೂಲಿ ಅವರನ್ನು ಚಿಕಿತ್ಸೆಗಾಗಿ ಕೋಲ್ಕತದ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈಗಾಗಲೇ ಸೌರವ್ ಗಂಗೂಲಿಗೆ ವುಡ್‌ಲ್ಯಾಂಡ್ಸ್ ಆಸ್ಪತ್ರೆಯ ವೈದ್ಯರು ಒಂದು ಸ್ಟಿಂಟ್ ಅಳವಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ದೇವಿಶೆಟ್ಟಿ ಅವರಿಗೆ ಬುಲಾವ್ ಬಂದಿದೆ.
ಮದರ್ ಥೆರೆಸಾಗೆ ಖಾಸಗಿ ವೈದ್ಯರಾಗಿ ಚಿಕಿತ್ಸೆ ನೀಡಿದ್ದ ಕರ್ನಾಟಕದ ಖ್ಯಾತ ವೈದ್ಯ ದೇವಿಶೆಟ್ಟಿ ಸೇರಿದಂತೆ ಮೂವರು ವೈದ್ಯರನ್ನೊಳಗೊಂಡ ತಂಡ ದಾದಾ ಆರೋಗ್ಯದ ಮೇಲೆ ಕಣ್ಣಿಡಲಿದ್ದಾರೆ.
ದೇವಿಶೆಟ್ಟಿ ಕೋಲ್ಕತ ತಲುಪಿದ ಬಳಿಕ ಸೌರವ್ ಗಂಗೂಲಿಗೆ ಮತ್ತೆರಡು ಸ್ಟಿಂಟ್ ಅಳವಡಿಸಬೇಕೇ ಅಥವಾ ಬೈಪಾಸ್ ಸರ್ಜರಿ ಮಾಡಬೇಕೇ ಎನ್ನುವುದನ್ನು ಆನಂತರ ತೀರ್ಮಾನಿಸುವುದಾಗಿ ದಾದಾ ಕುಟುಂಬಸ್ಥರು ತಿಳಿಸಿದ್ದಾರೆ.
ದೇವಿಶೆಟ್ಟಿ ಅವರನ್ನೊಳಗೊಂಡ ತಂಡದ ಜತೆಗೆ ಏಮ್ಸ್ ವೈದ್ಯರ ತಂಡ ಕೂಡಾ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಪದ್ಮಭೂಷಣ ಪ್ರಶಸ್ತಿ ಪುರಷ್ಕೃತರಾಗಿರುವ ದೇವಿ ಶೆಟ್ಟಿ ಕೋಲ್ಕತದಲ್ಲೂ ಚಿರಪರಿಚಿತರೆನಿಸಿದ್ದಾರೆ. ಕೋಲ್ಕತದ ಬಿ.ಎಂ. ಬಿರ್ಲಾ ಆಸ್ಪತ್ರೆಯೊಂದಿಗೆ ಸಂಪರ್ಕ ಹೊಂದಿದ್ದ ಅವರು, ಆಬಳಿಕ ರವೀಂದ್ರನಾಥ್ ಟ್ಯಾಗೋರ್ ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಕಾರ್ಡಿಯಕ್ ಸೈನ್ಸ್ ಸಂಸ್ಥಾಪನೆ ಮಾಡಿದ್ದಾರೆ.
ಸೌರವ್ ಗಂಗೂಲಿಗೆ ಕೋವಿಡ್ 19 ಟೆಸ್ಟ್‌ಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಕೊರೋನಾ ನೆಗೆಟಿವ್ ಬಂದಿದೆ.