ಭಾರತೀಯ ಮಹಿಳಾ ಕ್ರಿಕೆಟ್ ತಂಡ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಬಳಿಕ, ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ನಾಯಕಿ ಸ್ಮೃತಿ ಮಂಧಾನಾಗೆ ವೈಯಕ್ತಿಕವಾಗಿ ವಾಟ್ಸಾಪ್ ಸಂದೇಶ ಕಳುಹಿಸಿದ್ದರಂತೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಬಳಿಕ, ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ನಾಯಕಿ ಸ್ಮೃತಿ ಮಂಧಾನಾಗೆ ವೈಯಕ್ತಿಕವಾಗಿ ವಾಟ್ಸಾಪ್ ಸಂದೇಶ ಕಳುಹಿಸಿ ಅಭಿನಂದನೆ ಸಲ್ಲಿಸಿದ್ದರಂತೆ. ಇದೀಗ ಈ ವಿಶೇಷ ಸಂದೇಶದ ಹಿಂದಿನ ಸ್ವಾರಸ್ಯಕರ ಸಂಗತಿಯನ್ನು ಸ್ವತಃ ಸ್ಮೃತಿ ಮಂಧಾನಾ ಬಹಿರಂಗಪಡಿಸಿದ್ದಾರೆ.
ಧೋನಿ ಅವರಿಂದ ಬಂದ ಆ ಒಂದು ಮೆಸೇಜ್ ತನಗೆ ತುಂಬಾ ಖುಷಿ ನೀಡಿತ್ತು ಎಂದು ಸ್ಮೃತಿ ಹೇಳಿಕೊಂಡಿದ್ದಾರೆ. ಅದರಲ್ಲೂ ಧೋನಿ ಮೊಬೈಲ್ ಫೋನ್ ಅನ್ನು ಹೆಚ್ಚು ಬಳಸುವುದಿಲ್ಲ ಎಂಬುದು ತಿಳಿದಿದ್ದರಿಂದ, ಅವರು ವಾಟ್ಸಾಪ್ ಮೂಲಕ ಅಭಿನಂದನೆ ಸಲ್ಲಿಸಿದ್ದು ಇನ್ನಷ್ಟು ವಿಶೇಷವೆನಿಸಿತ್ತು ಎಂದು ತಿಳಿಸಿದ್ದಾರೆ.
ಧೋನಿ ಮೆಸೇಜ್ ನೋಡಿ ಖುಷಿಯಾದ ಸ್ಮೃತಿ ಮಂಧಾನಾ
ಧೋನಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ಮೃತಿ ಮಂಧಾನಾ, ವಿಶ್ವಕಪ್ ಗೆಲುವಿನ ಬಳಿಕ ಧೋನಿ ತಮಗೆ ಸಂದೇಶ ಕಳುಹಿಸಿದ್ದ ವಿಚಾರವನ್ನು ನೆನಪಿಸಿಕೊಂಡರು. "ವಿಶ್ವಕಪ್ ಗೆದ್ದ ಬಳಿಕ ಅವರು ನಿಜವಾಗಿಯೂ ನನಗೆ ಮೆಸೇಜ್ ಕಳುಹಿಸಿದ್ದರು. ಅವರು ಫೋನ್ ಹೆಚ್ಚು ಬಳಸುವುದಿಲ್ಲ ಎಂಬುದು ನನಗೆ ಗೊತ್ತು. ನಮ್ಮೆಲ್ಲರಿಗೂ ಅಭಿನಂದನೆ ತಿಳಿಸಲು ಅವರು ವಾಟ್ಸಾಪ್ ಬಳಸಿದ್ದು ನನಗೆ ತುಂಬಾ ಖುಷಿ ನೀಡಿತು" ಎಂದು ಸ್ಮೃತಿ ಹೇಳಿದ್ದಾರೆ.
ಈ ವೇಳೆ ಕಾರ್ಯಕ್ರಮದ ನಿರೂಪಕ ಹರ್ಷ ಭೋಗ್ಲೆ, "ನಿಮ್ಮ ಬಳಿ ಧೋನಿ ಅವರ ನಂಬರ್ ಇತ್ತಾ?" ಎಂದು ಪ್ರಶ್ನಿಸಿದರು. ಇದಕ್ಕೆ ಸ್ಮೃತಿ, "ಹೌದು, ಅವರ ನಂಬರ್ ನನ್ನ ಬಳಿ ಇತ್ತು" ಎಂದು ಉತ್ತರಿಸಿದರು.
ಸ್ಮೃತಿಗೇ ಮೆಸೇಜ್ ಮಾಡಿದ್ದೇಕೆ? ಧೋನಿ ಕೊಟ್ಟ ಉತ್ತರವೇನು
ಧೋನಿ ಅವರು ಸ್ಮೃತಿ ಮಂಧಾನಾಗೆ ಮಾತ್ರ ಸಂದೇಶ ಕಳುಹಿಸಲು ಕಾರಣವೇನು ಎಂಬುದನ್ನೂ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಭಾರತೀಯ ಮಹಿಳಾ ತಂಡದ ಇತರ ಆಟಗಾರ್ತಿಯರ ನಂಬರ್ ತಮ್ಮ ಬಳಿ ಇರಲಿಲ್ಲ. ಸ್ಮೃತಿ ಅವರ ನಂಬರ್ ಮಾತ್ರ ಸೇವ್ ಆಗಿತ್ತು ಎಂದು ಧೋನಿ ಹೇಳಿದ್ದಾರೆ. "ತಂಡದ ಬೇರೆ ಯಾರ ನಂಬರ್ ಕೂಡ ನನಗೆ ಗೊತ್ತಿರಲಿಲ್ಲ. ಸಂದೇಶ ತಲುಪಬೇಕು ಎಂದುಕೊಂಡಿದ್ದೆ. ಅದಕ್ಕೂ ಮೊದಲು ನಾವು ಒಟ್ಟಿಗೆ ಒಂದು ಜಾಹೀರಾತಿನ ಚಿತ್ರೀಕರಣ ಮಾಡಿದ್ದೆವು. ಹಾಗಾಗಿ ಸ್ಮೃತಿಗೆ ಮೆಸೇಜ್ ಕಳುಹಿಸೋಣ ಎಂದುಕೊಂಡೆ. ತಂಡದಲ್ಲಿರುವ ಎಲ್ಲರಿಗೂ ನನ್ನ ಅಭಿನಂದನೆಗಳನ್ನು ತಿಳಿಸಿ ಎಂದು ಹೇಳಿದ್ದೆ" ಎಂದು ಧೋನಿ ವಿವರಿಸಿದ್ದಾರೆ.
ಧೋನಿ ಅವರ ಈ ಸರಳ ನಡೆ ಮತ್ತು ಸ್ಮೃತಿ ಅವರ ಸಂತೋಷದ ಮಾತುಗಳು ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ದಕ್ಷಿಣ ಆಫ್ರಿಕಾವನ್ನು ಮಣಿಸಿ ಇತಿಹಾಸ ಬರೆದಿದ್ದ ಭಾರತ
2025ರ ನವೆಂಬರ್ 2ರಂದು ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 52 ರನ್ಗಳಿಂದ ಸೋಲಿಸಿ ಚೊಚ್ಚಲ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಮೂಲಕ ಭಾರತೀಯ ಮಹಿಳಾ ತಂಡದ ಐಸಿಸಿ ಪ್ರಶಸ್ತಿಯ ದೀರ್ಘಕಾಲದ ಕಾಯುವಿಕೆ ಅಂತ್ಯಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತ್ತು. ಶಫಾಲಿ ವರ್ಮಾ 87 ರನ್ ಗಳಿಸಿ ತಂಡಕ್ಕೆ ಬಲ ತುಂಬಿದರೆ, ದೀಪ್ತಿ ಶರ್ಮಾ 58 ರನ್ಗಳ ಕೊಡುಗೆ ನೀಡಿದ್ದರು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಲಾರಾ ವೋಲ್ವಾರ್ಡ್ ಅವರ ಶತಕದ ಹೊರತಾಗಿಯೂ 246 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಬೌಲಿಂಗ್ನಲ್ಲೂ ಮಿಂಚಿದ ದೀಪ್ತಿ ಶರ್ಮಾ ಐದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಐತಿಹಾಸಿಕ ಗೆಲುವಿನ ಬಳಿಕ ಧೋನಿ ಕಳುಹಿಸಿದ ವೈಯಕ್ತಿಕ ಅಭಿನಂದನಾ ಸಂದೇಶ ಸ್ಮೃತಿ ಮಂಧಾನಾ ಅವರಿಗೆ ಮರೆಯಲಾಗದ ಕ್ಷಣವಾಗಿ ಉಳಿದಿದೆ. ಕ್ರಿಕೆಟ್ ದಿಗ್ಗಜನ ಈ ಪುಟ್ಟ ನಡೆ ಇದೀಗ ಅಭಿಮಾನಿಗಳ ಮನ ಗೆದ್ದಿದೆ.




