ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 285 ರನ್‌ಗಳಿಗೆ ಆಲೌಟ್ ಆಗಿದೆ. ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಅವರ ಅರ್ಧಶತಕಗಳ ಹೊರತಾಗಿಯೂ ತಂಡವು ಉತ್ತಮ ಆರಂಭದ ನಂತರ ಕುಸಿತ ಕಂಡಿತು. ಇದೇ ಪಂದ್ಯದಲ್ಲಿ ಸ್ಮೃತಿ ಮಂಧಾನ 300 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಅತಿ ಕಿರಿಯ ಆಟಗಾರ್ತಿ ಎಂಬ ವಿಶ್ವದಾಖಲೆ ನಿರ್ಮಿಸಿದರು.

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 285 ರನ್‌ ಕಲೆಹಾಕಿದೆ. ಉತ್ತಮ ಆರಂಭ ಪಡೆದಿದ್ದ ತಂಡ 200 ರನ್‌ ಗಳಿಸುವ ವೇಳೆ 4 ವಿಕೆಟ್‌ ಮಾತ್ರ ಕಳೆದುಕೊಂಡಿತ್ತು. ಆದರೆ ಬಳಿಕ ಕುಸಿದ ತಂಡ 83 ರನ್‌ ಸೇರಿಸುವಷ್ಟರಲ್ಲಿ ಉಳಿದ 6 ವಿಕೆಟ್‌ ನಷ್ಟಕ್ಕೊಳಗಾಯಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಮೃತಿ ಮಂಧನಾ(83) ಶತಕದ ಅಂಚಿನಲ್ಲಿ ಎಡವಿದರು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 58, ದೀಪ್ತಿ ಶರ್ಮಾ 57, ಜೆಮಿಮಾ ರೋಡ್ರಿಗ್ಸ್‌ 35 ರನ್‌ ಕೊಡುಗೆ ನೀಡಿದರು. ಶಫಾಲಿ ವರ್ಮಾ(0), ಯಸ್ತಿಕಾ ಭಾಟಿಯಾ(12), ರಿಚಾ ಘೋಷ್‌(13), ಸ್ನೇಹ ರಾಣಾ(13) ವೈಫಲ್ಯ ಅನುಭವಿಸಿದರು. ಇಂಗ್ಲೆಂಡ್‌ ಪರ ಸೋಫಿ ಎಕ್ಲೆಸ್ಟೋನ್‌ 3, ಲಾರೆನ್‌ ಫಿಲೆರ್‌, ಇಸ್ಸಿ ವೊಂಗ್‌, ಮ್ಯಾಡಿ ವಿಲಿಯರ್ಸ್‌ ತಲಾ 2 ವಿಕೆಟ್‌ ಪಡೆದರು.

300 ಅಂ.ರಾ. ಪಂದ್ಯವನ್ನಾಡಿದ ಅತಿ ಕಿರಿಯ ಆಟಗಾರ್ತಿ ಸ್ಮೃತಿ

ಲಂಡನ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ಪಂದ್ಯಗಳನ್ನಾಡಿದ ವಿಶ್ವದ ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧನಾ ಪಾತ್ರರಾಗಿದ್ದಾರೆ. ಶುಕ್ರವಾರ ಆರಂಭಗೊಂಡ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ ಅವರು ಈ ಮೈಲುಗಲ್ಲು ಸಾಧಿಸಿದರು. 30 ವರ್ಷದ ಸ್ಮೃತಿ 120 ಏಕದಿನ, 171 ಟಿ20 ಹಾಗೂ 9 ಟೆಸ್ಟ್‌ ಆಡಿದ್ದಾರೆ. ಒಟ್ಟಾರೆ 300 ಅಂತಾರಾಷ್ಟ್ರೀಯ ಪಂದ್ಯವಾಡಿದ 12ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಭಾರತೀಯರ ಪೈಕಿ ಹರ್ಮನ್‌ಪ್ರೀತ್‌ ಕೌರ್‌(374) ಹಾಗೂ ಮಿಥಾಲಿ ರಾಜ್‌(333) ಈ ಸಾಧನೆ ಮಾಡಿದ್ದಾರೆ.

ಪುರುಷ ಟೆಸ್ಟ್‌ಗೆ ಆತಿಥ್ಯ ವಹಿಸಿ 142 ವರ್ಷ ಬಳಿಕ ಲಾರ್ಡ್ಸ್‌ನಲ್ಲಿ ಚೊಚ್ಚಲ ವನಿತಾ ಟೆಸ್ಟ್‌ ಪಂದ್ಯ!

ಕ್ರಿಕೆಟ್‌ನ ಅತ್ಯಂತ ಪ್ರತಿಷ್ಠಿತ ಲಾರ್ಡ್ಸ್‌ ಕ್ರೀಡಾಂಗಣವು ಚೊಚ್ಚಲ ಮಹಿಳಾ ಟೆಸ್ಟ್‌ ಪಂದ್ಯದ ಆತಿಥ್ಯ ವಹಿಸಿದೆ. 1884ರಲ್ಲಿ ಇಂಗ್ಲೆಂಡ್‌-ಆಸ್ಟ್ರೇಲಿಯಾ ಪುರುಷರ ತಂಡಗಳ ನಡುವೆ ಲಾರ್ಡ್ಸ್‌ನಲ್ಲಿ ಮೊದಲ ಟೆಸ್ಟ್‌ ನಡೆದಿತ್ತು. ಅದಾಗಿ ಬರೋಬ್ಬರಿ 142 ವರ್ಷಗಳ ಬಳಿಕ ಲಂಡನ್‌ನ ಈ ಐಕಾನಿಕ್‌ ಕ್ರೀಡಾಂಗಣದಲ್ಲಿ ಮಹಿಳಾ ಟೆಸ್ಟ್‌ ಆಯೋಜನೆಗೊಂಡಿದೆ. ಶುಕ್ರವಾರದಿಂದ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಏಕೈಕ ಟೆಸ್ಟ್ ಪಂದ್ಯ ಶುರುವಾಯಿತು.

ಇಂಗ್ಲೆಂಡ್‌ ಮಹಿಳಾ ತಂಡ 1937ರಿಂದ ತವರಿನ 19 ಕ್ರೀಡಾಂಗಣಗಳಲ್ಲಿ ಒಟ್ಟು 55 ಟೆಸ್ಟ್‌ ಪಂದ್ಯಗಳನ್ನಾಡಿವೆ. ಆದರೆ ಲಾರ್ಡ್ಸ್‌ನಲ್ಲಿ ಇದೇ ಮೊದಲ ಸಲ ಕಣಕ್ಕಿಳಿದಿದೆ. ಇನ್ನು, ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಟೆಸ್ಟ್‌ನಲ್ಲಿ ಈವರೆಗೂ 15 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 3ರಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್‌ ಕೇವಲ 1 ಪಂದ್ಯದಲ್ಲಿ ಜಯಗಳಿಸಿದೆ. ಉಳಿದ 11 ಪಂದ್ಯಗಳು ಡ್ರಾಗೊಂಡಿವೆ. 1995ರ ಬಳಿಕ ಇಂಗ್ಲೆಂಡ್‌ ತಂಡ ಭಾರತ ವಿರುದ್ಧ ಗೆದ್ದಿಲ್ಲ.