ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿತು: ಕರುನಾಡನ್ನು ಕೊಂಡಾಡಿದ ಎಬಿ ಡಿವಿಲಿಯರ್ಸ್
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದಾರೆ. ಎಬಿಡಿ ಏನಂದ್ರು ಎನ್ನುವುದನ್ನು ನೀವೇ ನೋಡಿ.

ಐಪಿಎಲ್ ಬಗ್ಗೆ ವಿದೇಶಿ ಆಟಗಾರರ ಪ್ರೀತಿ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾರತೀಯ ಆಟಗಾರರು ಮಾತ್ರವಲ್ಲದೇ ವಿದೇಶಿ ಆಟಗಾರರು ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಐಪಿಎಲ್ ಆಡಲು ಬಂದ ಬಹುತೇಕ ಆಟಗಾರರು ಟೂರ್ನಿ ಮುಗಿದ ಬಳಿಕ, ಭಾರತೀಯರ ಆತಿಥ್ಯ, ಸೌಲಭ್ಯ, ಊಟೋಪಚಾರಗಳನ್ನು ಮರೆತೇ ಬಿಡುತ್ತಾರೆ. ಆದರೆ ಇನ್ನು ಕೆಲವು ವಿದೇಶಿ ಆಟಗಾರರು ಭಾರತವನ್ನು ತಮ್ಮ ಎರಡನೇ ತವರು ಎಂದು ಬಣ್ಣಿಸಿದ್ದೂ ಇದೆ.
ಬೆಂಗಳೂರು ನಗರವನ್ನು ಕೊಂಡಾಡಿದ ಮಿಸ್ಟರ್ 360
ಇನ್ನು ಮಿಸ್ಟರ್ 360 ಎಂದೇ ಖ್ಯಾತಿ ಗಳಿಸುವುದರ ಜತೆಗೆ ವಿಸ್ಪೋಟಕ ಆಟದ ಮೂಲಕ ಭಾರತೀಯರ ಅದರಲ್ಲೂ ಕನ್ನಡಿಗ ಮನಸ್ಸು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವ್ಯಸಾಚಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿಬಿಟ್ಟಿತು ಎಂದು ಕರುನಾಡನ್ನು ಸ್ಮರಿಸಿಕೊಂಡಿದ್ದಾರೆ.
ಆರ್‌ಸಿಬಿ ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದ ಎಬಿಡಿ
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗಿನ ಪಯಣವನ್ನು ಮೆಲುಕು ಹಾಕಿರುವ ಎಬಿಡಿ, 'ಬೆಂಗಳೂರು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾದ ನಗರವಾಗಿಯೇ ಉಳಿಯಲಿದೆ. ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿತು. ಇದೇ ಕಾರಣಕ್ಕೆ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ' ಎಂದು ಎಬಿಡಿ ಟೈಮ್ ಆಫ್ ಇಂಡಿಯಾಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
2011ರಲ್ಲಿ ಆರ್‌ಸಿಬಿ ತಂಡ ಕೂಡಿಕೊಂಡ ಎಬಿಡಿ
ಬೆಂಗಳೂರು ಅತ್ಯಂತ ವಿಶೇಷವಾದ ನಗರ. ಇದು ನನ್ನ ಜೀವನದ ಮೇಲೆ ಅಪಾರ ಪ್ರಭಾವ ಬೀರಿದೆ. 2011ರಲ್ಲಿ ನಾನು ಆರ್‌ಸಿಬಿ (RCB) ತಂಡವನ್ನು ಸೇರಿದಾಗ, ತಕ್ಷಣವೇ ನನಗೆ ಇಲ್ಲಿನ ವಾತಾವರಣವು ಮನೆಯಂತೆಯೇ ಭಾಸವಾಯಿತು. ಪ್ರೇಕ್ಷಕರು ನನ್ನ ಬೆಂಬಲಕ್ಕೆ ನಿಲ್ಲಲು ಹೆಚ್ಚು ಸಮಯವೇನೂ ಹಿಡಿಯಲಿಲ್ಲ ಎಂದು ಆ ದಿನಗಳನ್ನು ಎಬಿಡಿ ಮೆಲುಕು ಹಾಕಿದ್ದಾರೆ.
ದಶಕಗಳ ಕಾಲ ಆರ್‌ಸಿಬಿಯ ಆಪತ್ಬಾಂಧವ ಎಬಿಡಿ
ಒಂದು ದಶಕಗಳ ಕಾಲ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್, ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಬೆಂಗಳೂರು ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಎಬಿಡಿ ಐಪಿಎಲ್‌ಗೆ ವಿದಾಯ ಹೇಳಿ ನಾಲ್ಕೈದು ವರ್ಷ ಕಳೆದರೂ, ಇಂದಿಗೂ ಆರ್‌ಸಿಬಿ ಪರ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರ ಎನ್ನುವ ದಾಖಲೆ ಎಬಿಡಿ ಹೆಸರಿನಲ್ಲಿಯೇ ಇದೆ.
ಭಾರತೀಯ ಫ್ಯಾನ್ಸ್ ಬಗ್ಗೆ ಎಬಿಡಿ ಮಾತು
ನಿಜ ಹೇಳಬೇಕೆಂದರೆ, ನನಗ್ಯಾಕೆ ಇಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿರಲಿಲ್ಲ. ಭಾರತದಲ್ಲಿ ಕ್ರಿಕೆಟ್ ಹಾಗೂ ಸ್ಪರ್ಧೆಗೆ ಜನರು ತುಂಬಾನೆ ಪ್ರೀತಿ ಕೊಡುತ್ತಾರೆ. ಜನರು ಕೆಚ್ಚೆದೆಯಿಂದ ಹೋರಾಡುವ ಆಟಗಾರರಿಗೆ ತುಂಬಾನೆ ಬೆಂಬಲ ಕೊಡುತ್ತಾರೆ ಎಂದೆನಿಸುತ್ತಿದೆ. ಯಾವಾಗಲೂ ಸಕಾರಾತ್ಮಕವಾಗಿರಲು ಪ್ರಯತ್ನಿಸುವ ವ್ಯಕ್ತಿಯನ್ನು ಇಷ್ಟ ಪಡುತ್ತಾರೆ ಎಂದು ಎಬಿಡಿ ಭಾರತೀಯ ಫ್ಯಾನ್ಸ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

