'ಧೋನಿಯ ಬಳಿಕ ಜವಾಬ್ದಾರಿ ನನ್ನ ಮೇಲಿದೆ': ಹಾರ್ದಿಕ್ ಪಾಂಡ್ಯ ಹೀಗಂದಿದ್ದೇಕೆ?
ಕಿವೀಸ್ ಎದುರು ಟಿ20 ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ
ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ
ಧೋನಿ ಬಳಿಕ ಮ್ಯಾಚ್ ಫಿನಿಶಿಂಗ್ ಜವಾಬ್ದಾರಿ ನನ್ನ ಮೇಲಿದೆ ಎಂದ ಪಾಂಡ್ಯ

ಅಹಮದಾಬಾದ್(ಫೆ.02): ನ್ಯೂಜಿಲೆಂಡ್ ಎದುರಿನ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ, 168 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 2-1 ಅಂತರದಲ್ಲಿ ಟಿ20 ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಟಿ20 ಕ್ರಿಕೆಟ್ ಮಾದರಿಯಲ್ಲಿ ಟೀಂ ಇಂಡಿಯಾ ಜಯಿಸಿದ ಅತಿ ದೊಡ್ಡ ಅಂತರದ ಗೆಲುವು ಎನಿಸಿಕೊಂಡಿತು.
ಇದರ ಜತೆಗೆ ತವರಿನಲ್ಲಿ ಟೀಂ ಇಂಡಿಯಾ ಜಯಿಸಿದ ಸತತ 13ನೇ ಟಿ20 ಸರಣಿ ಎನಿಸಿಕೊಂಡಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಅಜೇಯ 126 ರನ್ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಭಾರತ 4 ವಿಕೆಟ್‌ಗೆ 234 ರನ್ ಚಚ್ಚಿತು. ದೊಡ್ಡ ಮೊತ್ತ ನೋಡಿಯೇ ಕಂಗಾಲಾದ ಕಿವೀಸ್ ಯಾವ ಕ್ಷಣದಲ್ಲೂ ಪ್ರತಿರೋಧ ತೋರಲಿಲ್ಲ. 12.1 ಓವರಲ್ಲಿ ಕೇವಲ 66ಕ್ಕೆ ಗಂಟುಮೂಟೆ ಕಟ್ಟಿತು. ಡ್ಯಾರಿಲ್ ಮಿಚೆಲ್(35), ಸ್ಯಾಂಟ್ನರ್(13) ಹೋರಾಟ ತಂಡದ ಮಾನ ಉಳಿಸಿತು. ಹಾರ್ದಿಕ್ 16ಕ್ಕೆ 4, ಉಮ್ರಾನ್, ಆರ್ಶದೀಪ್, ಶಿವಂ ಮಾವಿ ತಲಾ 2 ವಿಕೆಟ್ ಪಡೆದರು.
ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಷ್ಟೇ ಅಲ್ಲದೇ, ಬ್ಯಾಟಿಂಗ್‌ನಲ್ಲೂ ಕೇವಲ 17 ಎಸೆತಗಳನ್ನು ಎದುರಿಸಿ 30 ರನ್‌ಗಳ ಮಹತ್ವದ ಕಾಣಿಕೆ ನೀಡಿದರು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ, ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಕಳೆದ ವರ್ಷದ ಗಾಯದಿಂದ ಚೇತರಿಸಿಕೊಂಡು ತಂಡಕೂಡಿಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ಆಟದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಹಾರ್ದಿಕ್ ಪಾಂಡ್ಯ, ದೊಡ್ಡ ಹೊಡೆತಕ್ಕೆ ಕೈ ಹಾಕುವುದಕ್ಕಿಂತ ಹೆಚ್ಚಾಗಿ ಸ್ಟ್ರೈಕ್ ರೊಟೇಟ್ ಮಾಡುವ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಸ್ಪೋಟಕ ಬ್ಯಾಟಿಂಗ್‌ನಿಂದಲೇ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ, ಇದೀಗ ತಮ್ಮ ಆಟದ ಶೈಲಿಯನ್ನು ಕೊಂಚ ಬದಲಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ.
'ಈತನೇ ಭವಿಷ್ಯದ ತಾರೆ': ಶುಭ್‌ಮನ್ ಗಿಲ್ ಶತಕವನ್ನು ಗುಣಗಾನ ಮಾಡಿದ ವಿರಾಟ್ ಕೊಹ್ಲಿ..!
ನ್ಯೂಜಿಲೆಂಡ್ ಎದುರಿನ ಮೂರನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, " ನಾನು ಯಾವಾಗಲೂ ಸಿಕ್ಸರ್ ಬಾರಿಸುವುದನ್ನು ಎಂಜಾಯ್ ಮಾಡುತ್ತಿದ್ದೆ, ಯಾಕೆಂದರೇ ನಾನು ಬೆಳೆದುಬಂದಿದ್ದೇ ಹಾಗೆ. ಆದರೆ ನಾನು ಜತೆಯಾಟದ ಮೇಲೆ ಹೆಚ್ಚು ನಂಬಿಕೆ ಇಡುತ್ತೇನೆ. ನಾನು ನನ್ನ ಸಹ ಆಟಗಾರನಿಗೆ ಹಾಗೂ ತಂಡಕ್ಕೆ ನಾನಿದ್ದೇನೆ ಎನ್ನುವ ಭರವಸೆ ನೀಡುತ್ತೇನೆ ಹಾಗೂ ಕ್ರೀಸ್‌ನಲ್ಲಿ ತಾಳ್ಮೆಯಿಂದಿರಲು ಬಯಸುತ್ತೇನೆ. ನಾನು ಇವರೆಲ್ಲರಿಗಿಂತ ಹೆಚ್ಚಿನ ಪಂದ್ಯಗಳನ್ನಾಡಿದ್ದೇನೆ. ನಾನು ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಅರಿತುಕೊಂಡಿದ್ದೇನೆ" ಎಂದು ಹೇಳಿದ್ದಾರೆ.
ಈ ಕಾರಣಕ್ಕಾಗಿಯೇ ನನ್ನ ಸ್ಟ್ರೈಕ್‌ರೇಟ್ ಕಡಿಮೆಯಾಗಬಹುದು. ನನಗೆ ಸಿಕ್ಕಿರುವ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗಲು ಬಯಸುತ್ತೇನೆ. ನಾನು ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಯಾಕೆಂದರೆ, ನಾನು ಬೇರೆಯವರು ಈ ಕಷ್ಟಕರ ಪಾತ್ರವನ್ನು ನಿಭಾಯಿಸಲಿ ಎಂದು ಬಯಸುವುದಿಲ್ಲ. ಎದುರಾಳಿಗಳು ಒತ್ತಡದಲ್ಲಿದ್ದಾರೆ ಎಂದರೆ ನಾವು ಅವರನ್ನು ಬೆನ್ನತ್ತಬಹುದು. ನಾನೇ ನೇತೃತ್ವ ತೆಗೆದುಕೊಂಡು ಮುಂದುವರೆಯುತ್ತೇನೆ. ಹೊಸ ಚೆಂಡಿನೊಂದಿಗೆ ದಾಳಿ ನಡೆಸುವ ಕೌಶಲ್ಯದ ಕಡೆಗೂ ಗಮನ ಕೊಡುತ್ತಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ನಾನು ಮಹೇಂದ್ರ ಸಿಂಗ್ ಧೋನಿ ಅವರಂತೆಯೇ, ಕೆಳಕ್ರಮಾಂಕದಲ್ಲಿ ಆಡುವ ಬಗ್ಗೆ ಹೆಚ್ಚು ಆಲೋಚಿಸಲು ಹೋಗುವುದಿಲ್ಲ. ನಾನು ಆರಂಭದಲ್ಲಿ ಚೆಂಡನ್ನು ಮೂಲೆ ಮೂಲೆಗೆ ಸಿಕ್ಸರ್‌ಗಟ್ಟುತ್ತಿದ್ದೆ. ಆದರೆ ಧೋನಿ ನಿವೃತ್ತಿಯಾದ ಬಳಿಕ, ದಿಢೀರ್ ಎನ್ನುವಂತೆ ಆ ಜವಾಬ್ದಾರಿ ಈಗ ನನ್ನ ಹೆಗಲೇರಿದೆ. ಹೀಗಾಗಿ ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ತಂಡಕ್ಕೆ ಒಳ್ಳೆಯದಾಗುತ್ತದೇ ಎಂದರೇ ನಾನು ಮಂದ ಗತಿಯಲ್ಲಿ ಬ್ಯಾಟಿಂಗ್ ಮಾಡುವ ಬಗ್ಗೆ ಆಲೋಚಿಸುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.