ಪಂಜಾಬ್ ಕಿಂಗ್ಸ್ ಎದುರು ರೋಚಕ ಜಯ ಸಾಧಿಸಿದ ಗುಜರಾತ್ ಟೈಟಾನ್ಸ್ಆಕರ್ಷಕ ಅರ್ಧಶತಕದ ಮೂಲಕ ಮಿಂಚಿದ ಶುಭ್‌ಮನ್ ಗಿಲ್‌ಶುಭ್‌ಮನ್ ಗಿಲ್ ಬ್ಯಾಟಿಂಗ್ ಕೊಂಡಾಡಿದ ಕ್ರಿಕೆಟ್ ದಿಗ್ಗಜ 

ಮೊಹಾಲಿ(ಏ.14): 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಲೇ ಸಾಗಿದೆ. ಕಳೆದ 5 ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದರೆ, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್‌ ನಡುವಿನ ಪಂದ್ಯ ಒಂದು ಎಸೆತ ಬಾಕಿ ಇರುವಂತೆಯೇ ಫಲಿತಾಂಶ ಸಿಕ್ಕಿದೆ. ಒಟ್ಟಿನಲ್ಲಿ ಕ್ರಿಕೆಟ್ ಅಭಿಮಾನಿಗಳಿಗಂತೂ ಬರಪೂರ ಮನರಂಜನೆ ಸಿಗುತ್ತಿದೆ.

ಇನ್ನು ಇದೆಲ್ಲದರ ನಡುವೆ ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ತಂಡವು, ಪಂಜಾಬ್ ಕಿಂಗ್ಸ್ ಎದುರು ಗುರಿ ಬೆನ್ನತ್ತುವಾಗ ಕೊಂಚ ತಡವರಿಸಿತು. ಆದರೆ ಕೊನೆಯಲ್ಲಿ ಮ್ಯಾಚ್ ಫಿನಿಶರ್ ರಾಹುಲ್ ತೆವಾಟಿಯಾ ಸ್ಕೂಪ್‌ ಮೂಲಕ ಬೌಂಡರಿ ಬಾರಿಸುವುದರೊಂದಿಗೆ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದರು. ಇನ್ನು ಇದೇ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಶುಭ್‌ಮನ್‌ ಗಿಲ್‌ 49 ಎಸೆತಗಳನ್ನು ಎದುರಿಸಿ ಸಮಯೋಚಿತ 67 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಅಂದಹಾಗೆ ಇದು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭ್‌ಮನ್ ಗಿಲ್ ಬಾರಿಸಿದ ಎರಡನೇ ಅರ್ಧಶತಕ ಎನಿಸಿಕೊಂಡಿತು.

ಇದಕ್ಕಿಂತ ಕೆಳಹಂತ ತಲುಪಲು ಸಾಧ್ಯವಿಲ್ಲ: ಯಶ್‌ ದಯಾಳ್ ಜತೆಗಿನ ಮಾತುಕಥೆ ಬಿಚ್ಚಿಟ್ಟ ತೆವಾಟಿಯಾ

ಶುಭ್‌ಮನ್‌ ಗಿಲ್ ಉತ್ತಮ ಬ್ಯಾಟಿಂಗ್ ನಡೆಸಿದ ಹೊರತಾಗಿಯೂ ಯಾವೇ ಮ್ಯಾಚ್‌ ಫಿನಿಶ್ ಮಾಡಲು ಸಾಧ್ಯವಾಗದ್ದಕ್ಕೆ ನಿರಾಸೆ ವ್ಯಕ್ತಪಡಿಸಿದ್ದರು. ಇದೀಗ ಶುಭ್‌ಮನ್ ಗಿಲ್ ಆಟದ ಬಗ್ಗೆ ಆಸ್ಟ್ರೇಲಿಯಾದ ಬ್ಯಾಟಿಂಗ್ ದಂತಕಥೆ ಮ್ಯಾಥ್ಯೂ ಹೇಡನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಭಾಗವಹಿಸಿ ಮಾತನಾಡಿದ ಹೇಡನ್‌, " ಪಂಜಾಬ್ ಕಿಂಗ್ಸ್‌ ಗುಣಮಟ್ಟದ ಬೌಲಿಂಗ್ ಪಡೆ ಹೊಂದಿರುವ ತಂಡದೆದುರು ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಟಗಾರನೊಬ್ಬ ಜವಾಬ್ದಾರಿಯನ್ನು ಹೊತ್ತುಕೊಂಡು ಕೊನೆಯವರೆಗೂ ಬ್ಯಾಟ್ ಮಾಡುವ ಅಗತ್ಯವಿತ್ತು. ಅದನ್ನು ಶುಭ್‌ಮನ್ ಗಿಲ್ ಮಾಡಿ ತೋರಿಸಿದ್ದಾರೆ. ಅವರ ಕೆಲವೊಂದು ಶಾಟ್‌ಗಳನ್ನು ನೋಡುವುದೇ ಒಂದು ರೀತಿ ಕಣ್ಣಿಗೆ ಹಬ್ಬ. ಅವರೊಬ್ಬ ಕ್ಲಾಸ್ ಆಟಗಾರನಾಗಿದ್ದು, ಮುಂದಿನ ಒಂದು ದಶಕ ಕ್ರಿಕೆಟ್ ಜಗತ್ತು ಆಳಲಿದ್ದಾರೆ ಎಂದು ಹೇಡನ್ ಬಣ್ಣಿಸಿದ್ದಾರೆ.

ಹೇಗಿತ್ತು ಪಂಜಾಬ್-ಗುಜರಾತ್ ಪಂದ್ಯ?:

ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟಪಂಜಾಬ್‌, ನಿಧಾನಗತಿಯ ಆಟಕ್ಕೆ ಬೆಲೆ ತೆರಬೇಕಾಯಿತು. ತಂಡದ ಇನ್ನಿಂಗ್ಸ್‌ ಬರೋಬ್ಬರಿ 56 ಡಾಟ್‌ ಬಾಲ್‌ಗಳಿಂದ ಕೂಡಿತ್ತು. ಆರಂಭದಲ್ಲಿ ಮ್ಯಾಥ್ಯೂ ಶಾರ್ಟ್ ಹಾಗೂ ಕೊನೆಯಲ್ಲಿ ಶಾರುಖ್‌ ಖಾನ್‌ ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಸಕಾರಾತ್ಮಕ ಆಟ ಮೂಡಿಬರಲಿಲ್ಲ. ಇದರ ಪರಿಣಾಮ ಬ್ಯಾಟರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲೂ ತಂಡ 20 ಓವರಲ್ಲಿ 8 ವಿಕೆಟ್‌ 153 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.

ಸುಲಭ ಗುರಿ ಬೆನ್ನತ್ತಲು ಇಳಿದ ಗುಜರಾತ್‌ಗೆ ವೃದ್ಧಿಮಾನ್‌ ಸಾಹ ಸ್ಫೋಟಕ ಆರಂಭ ಒದಗಿಸಿದರು. 19 ಎಸೆತದಲ್ಲಿ 30 ರನ್‌ ಚಚ್ಚಿದರು. ಬಳಿಕ 2ನೇ ವಿಕೆಟ್‌ಗೆ ಶುಭ್‌ಮನ್‌ ಗಿಲ್‌ಗೆ ಜೊತೆಯಾದ ಸಾಯಿ ಸುದರ್ಶನ್‌ 41 ರನ್‌ ಜೊತೆಯಾಟದಲ್ಲಿ ಭಾಗಿಯಾದರು.

ಬಹುತೇಕ ಸುಲಭ ಜಯದತ್ತ ಸಾಗುತ್ತಿದ್ದ ಗುಜರಾತ್‌ಗೆ ಕೊನೆ 2 ಓವರಲ್ಲಿ ಗೆಲ್ಲಲು 13 ರನ್‌ ಬೇಕಿತ್ತು. 19ನೇ ಓವರಲ್ಲಿ ಅಶ್‌ರ್‍ದೀಪ್‌ 6 ರನ್‌ ನೀಡಿದರು. ಕೊನೆ 6 ಎಸೆತದಲ್ಲಿ 7 ರನ್‌ ಬೇಕಿದ್ದಾಗ ಗಿಲ್‌(49 ಎಸೆತದಲ್ಲಿ 67 ರನ್‌) ಕರ್ರನ್‌ ಎಸೆತದಲ್ಲಿ ಬೌಲ್ಡ್‌ ಆದರು. 2 ಎಸೆತದಲ್ಲಿ 4 ರನ್‌ ಬೇಕಿದ್ದಾಗ ರಾಹುಲ್‌ ತೆವಾಟಿಯಾ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಟರ್ನಿಂಗ್‌ ಪಾಯಿಂಟ್‌

ಪಂಜಾಬ್‌ ಇನ್ನಿಂಗ್ಸಲ್ಲಿ 56 ಡಾಟ್‌ ಬಾಲ್‌ಗಳಿದ್ದವು. ಆದರೆ ಗುಜರಾತ್‌ ಇನ್ನಿಂಗ್ಸ್‌ 39 ಡಾಟ್‌ ಬಾಲ್‌ಗಳನ್ನಷ್ಟೇ ಒಳಗೊಂಡಿತ್ತು. ಶುಭ್‌ಮನ್‌ ಗಿಲ್‌ ನಿರಂತರವಾಗಿ ಸ್ಟ್ರೈಕ್‌ ಬದಲಿಸುತ್ತಾ, ತಂಡದ ಮೊತ್ತ ಹೆಚ್ಚಿಸುತ್ತಾ ಸಾಗಿದರು. ಇದು ಗುಜರಾತ್‌ ಜಯಕ್ಕೆ ಪ್ರಮುಖ ಕಾರಣ. ಮೊಹಾಲಿಯಲ್ಲಿ ಸರಾಸರಿ ಮೊದಲ ಇನ್ನಿಂಗ್‌್ಸ ಸ್ಕೋರ್‌ 174 ಆಗಿದ್ದು, ಪಂಜಾಬ್‌ 20 ರನ್‌ ಕಡಿಮೆ ದಾಖಲಿಸಿದ್ದು ಹಿನ್ನಡೆ ಉಂಟು ಮಾಡಿತು.