* ರಿಂಕು ಸಿಂಗ್ ಎದುರು 5 ಸಿಕ್ಸರ್ ಚಚ್ಚಿಸಿಕೊಂಡಿದ್ದ ಯಶ್‌ ದಯಾಳ್* ಗುಜರಾತ್ ಟೈಟಾನ್ಸ್ ವೇಗಿಗೆ ಸಮಾಧಾನ ಮಾಡಿದ ರಾಹುಲ್ ತೆವಾಟಿಯಾ* ಗೆಲುವಿನ ಹಳಿಗೆ ಮರಳಿದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್

ಮೊಹಾಲಿ(ಏ.14): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ರಿಂಕು ಸಿಂಗ್ ಎದುರು ಸತತ 5 ಸಿಕ್ಸರ್‌ ಚಚ್ಚಿಸಿಕೊಂಡಿದ್ದ ಗುಜರಾತ್ ಟೈಟಾನ್ಸ್ ವೇಗಿ ಯಶ್‌ ದಯಾಳ್ ಜತೆಗೆ ಮಾತುಕತೆ ನಡೆಸಿದ ವಿಚಾರವನ್ನು ಸ್ಟಾರ್ ಆಲ್ರೌಂಡರ್‌ ರಾಹುಲ್ ತೆವಾಟಿಯಾ ಅನಾವರಣ ಮಾಡಿದ್ದಾರೆ.

ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಕೊನೆಯ ಓವರ್‌ನಲ್ಲಿ ಗೆಲ್ಲಲು 29 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲಿ ಉಮೇಶ್‌ ಯಾದವ್ ಒಂದು ರನ್ ಗಳಿಸಿ, ರಿಂಕು ಸಿಂಗ್‌ಗೆ ಸ್ಟ್ರೈಕ್‌ ನೀಡಿದ್ದರು. ಇದಾದ ಬಳಿಕ ರಿಂಕು ಸಿಂಗ್ ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಇನ್ನು ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದ ವೇಳೆ ಗೆಲುವಿನ ರನ್‌ ಬಾರಿಸಿದ ಗುಜರಾತ್ ಟೈಟಾನ್ಸ್‌ನ ಆಲ್ರೌಂಡರ್ ರಾಹುಲ್ ತೆವಾಟಿಯಾ, ಯಶ್‌ ದಯಾಳ್ ಜತೆ ಮಾತುಕತೆ ನಡೆಸಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಯಾವುದನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲವೋ ಅದರ ಕುರಿತಂತೆ ಹೆಚ್ಚಿನ ಅಭ್ಯಾಸ ನಡೆಸು ಹಾಗೂ ಮತ್ತೆ ಸಿಗುವ ಅವಕಾಶಕ್ಕೆ ರೆಡಿ ಇರಿ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಯಶ್ ದಯಾಳ್ ಅವರನ್ನು ಪಂಜಾಬ್ ಕಿಂಗ್ಸ್‌ ಎದುರಿನ ಪಂದ್ಯದ ವೇಳೆ ಕೈಬಿಡಲಾಗಿತ್ತು.

ಒಂದು ಪಂದ್ಯದಲ್ಲಿ ಕೆಟ್ಟ ಪ್ರದರ್ಶನ ಮೂಡಿ ಬಂದಿದೆಯಷ್ಟೇ. ಸತತವಾಗಿ ಅಭ್ಯಾಸ ಮಾಡುತ್ತಿರಿ. ನಿಮ್ಮಿಂದ ಯಾವುದನ್ನು ಸರಿಯಾಗಿ ಕಾರ್ಯಗೊಳಿಸಲು ಸಾಧ್ಯವಿಲ್ಲವೋ ಆ ಕಡೆ ಹೆಚ್ಚು ಗಮನ ಹರಿಸಿ. ನಿಮ್ಮ ಅವಕಾಶಕ್ಕಾಗಿ ಕಾಯುತ್ತಿರಿ. ಈಗ ಅನುಭವಿಸಿದ್ದೇ ಕೆಟ್ಟ ಪರಿಸ್ಥಿತಿ, ಇದಕ್ಕಿಂತಲೂ ಕೆಳ ಹಂತ ತಲುಪಲು ಸಾಧ್ಯವಿಲ್ಲ' ಎಂದು ಯಶ್ ದಯಾಳ್ ಅವರನ್ನು ಸಮಾಧಾನ ಪಡಿಸಿದ್ದಾಗಿ ರಾಹುಲ್ ತೆವಾಟಿಯಾ ಹೇಳಿದ್ದಾರೆ. 

IPL 2023 ಕೆಕೆಆರ್‌ ಓಟಕ್ಕೆ ಬ್ರೇಕ್‌ ಹಾಕುತ್ತಾ ಸನ್‌ರೈಸ​ರ್ಸ್‌ ಹೈದರಾಬಾದ್‌?

ಇನ್ನು ಇದೇ ವೇಳೆ ಒಂದು ಕೆಟ್ಟ ಇನಿಂಗ್ಸ್‌ ಒಬ್ಬ ಬೌಲರ್‌ ಭವಿಷ್ಯವನ್ನು ನಿರ್ಧರಿಸುವುದಿಲ್ಲ, ಯಶ್‌ ದಯಾಳ್, ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ ಎಂದು ರಾಹುಲ್ ತೆವಾಟಿಯಾ ಹೇಳಿದ್ದಾರೆ. 

"ಯಶ್‌ ದಯಾಳ್ ಅವರು ನಮ್ಮ ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಕಳೆದ ವರ್ಷ ನಾವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶ್ ಕೂಡಾ ಮಹತ್ತರ ಪಾತ್ರವನ್ನು ವಹಿಸಿದ್ದರು. ಕಳೆದ ವರ್ಷ ಅವರು ಹೊಸ ಚೆಂಡಿನೊಂದಿಗೆ ಹಾಗೂ ಡೆತ್ ಓವರ್‌ನಲ್ಲಿಯೂ ಚೆನ್ನಾಗಿಯೇ ಬೌಲಿಂಗ್ ಮಾಡಿದ್ದರು. ಒಂದು ಕೆಟ್ಟ ಪಂದ್ಯವು ಈ ಹಿಂದೆ ಅವರು ತಂಡಕ್ಕೆ ಯಾವ ರೀತಿ ಸೇವೆ ಸಲ್ಲಿಸಿದ್ದರು ಎನ್ನುವುದನ್ನು ಮರೆಮಾಚಲು ಸಾಧ್ಯವಿಲ್ಲ. ಅವರ ಮೇಲೆ ನಮ್ಮ ತಂಡದ ಯಾವೊಬ್ಬ ಆಟಗಾರ ಕೂಡಾ ಅನುಕಂಪ ತೋರಿಸುತ್ತಿಲ್ಲ ಎಂದು ಹೇಳಿದ್ದಾರೆ.