ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ಅದ್ಭುತ ಶತಕ ಸಿಡಿಸಿದರೆ, ಕೆ.ಎಲ್ ರಾಹುಲ್ 90 ರನ್‌ಗಳಿಗೆ ಔಟಾದರು. ಗಿಲ್ ತವರಿನಿಂದ ಹೊರಗೆ ನಾಲ್ಕು ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಆಕರ್ಷಕ ಸಿಡಿಸಿ ಮಿಂಚಿದ್ದಾರೆ. ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ಶುಭ್‌ಮನ್ ಗಿಲ್ ನಾಲ್ಕನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅದರೆ ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಆಡುತ್ತಿದ್ದ ಕನ್ನಡಿಗ ಕೆ ಎಲ್ ರಾಹುಲ್ ನರ್ವಸ್ 90ಗೆ ಬಲಿಯಾಗಿದ್ದಾರೆ. ರಾಹುಲ್ 90 ರನ್ ಗಳಿಸಿದ್ದಾಗ ಕೆಳಪುಟಿತ ಕಂಡ ಬೆನ್ ಸ್ಟೋಕ್ಸ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬೀಳುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು.
ನಾಲ್ಕನೇ ದಿನದಾಟದಂತ್ಯಕ್ಕೆ 210 ಎಸೆತಗಳನ್ನು ಎದುರಿಸಿ 87 ರನ್ ಗಳಿಸಿದ್ದ ರಾಹುಲ್ ತನ್ನ ಖಾತೆಗೆ ಕೇವಲ ಮೂರು ಸೇರಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಮೂರನೇ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ಕೆ ಎಲ್ ರಾಹುಲ್ ನಡುವಿನ 188 ರನ್‌ಗಳ ಜತೆಯಾಟಕ್ಕೆ ಬ್ರೇಕ್ ಬಿದ್ದಿತು.
ಶುಭ್‌ಮನ್ ಗಿಲ್ ಆಕರ್ಷಕ ಶತಕ: ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ ಮೂರನೇ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ಕೆ ಎಲ್ ರಾಹುಲ್ 188 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಇನ್ನು ನಾಯಕನಾಗಿ ಅತ್ಯಂತ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಶುಭ್‌ಮನ್ ಗಿಲ್ 228 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ ಆಕರ್ಷಕ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು.
ಇದೀಗ ಶುಭ್‌ಮನ್ ಗಿಲ್ ಈ ಶತಕದೊಂದಿಗೆ ತವರಿನಾಚೆ ಟೆಸ್ಟ್ ಸರಣಿಯೊಂದರಲ್ಲಿ 4 ಶತಕ ಸಿಡಸಿದ ಭಾರತದ ಎರಡನೇ ಹಾಗೂ ಒಟ್ಟಾರೆ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೊದಲು ಸುನಿಲ್ ಗವಾಸ್ಕರ್ 1971ರಲ್ಲಿ(ತವರಿನಾಚೆ) ಹಾಗೂ 1978-79ರಲ್ಲಿ(ತವರಿನಲ್ಲಿ) ವೆಸ್ಟ್ ಇಂಡೀಸ್ ವಿರುದ್ದ ಟೆಸ್ಟ್ ಸರಣಿಯಲ್ಲಿ 4 ಶತಕ ಸಿಡಿಸಿದ್ದರು. ಇನ್ನು ವಿರಾಟ್ ಕೊಹ್ಲಿ 2014-15ರಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿಯೊಂದರಲ್ಲಿ 4 ಶತಕ ಸಿಡಿಸಿದ್ದರು. ಇದೀಗ ಈ ದಿಗ್ಗಜರ ಸಾಲಿಗೆ ಶುಭ್‌ಮನ್ ಗಿಲ್ ಸೇರ್ಪಡೆಯಾಗಿದ್ದಾರೆ.
ಇನ್ನು ಇದಷ್ಟೇ ಅಲ್ಲದೇ ತವರಿನಾಚೆ ಟೆಸ್ಟ್ ಸರಣಿಯೊಂದರಲ್ಲಿ 4 ಶತಕ ಸಿಡಿಸಿದ ಮೊದಲ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೂ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1947-48ರಲ್ಲಿ ಭಾರತ ವಿರುದ್ದ ತವರಿನಲ್ಲಿ ಆಸ್ಟ್ರೇಲಿಯಾ ಪರ 4 ಶತಕ ಸಿಡಿಸಿದ್ದರು. ಇನ್ನು 1978-79ರಲ್ಲಿ(ತವರಿನಲ್ಲಿ) ವೆಸ್ಟ್ ಇಂಡೀಸ್ ವಿರುದ್ದ ಸುನಿಲ್ ಗವಾಸ್ಕರ್ ನಾಯಕನಾಗಿ ಟೆಸ್ಟ್ ಸರಣಿಯೊಂದರಲ್ಲಿ 4 ಶತಕ ಸಿಡಿಸಿದ್ದರು.
