ಜೂನ್ 20 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಶುಭ್‌ಮನ್ ಗಿಲ್ ನಾಯಕರಾಗಿ ಮತ್ತು ರಿಷಭ್ ಪಂತ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಮೂವರು ಕನ್ನಡಿಗರು ತಂಡದಲ್ಲಿ ಸ್ಥಾನ ಪಡೆದಿದ್ದು, ಕರುಣ್ ನಾಯರ್ ವಾಪಸಾತಿ ಮಾಡಿದ್ದಾರೆ.
ಮುಂಬೈ: ಮುಂಬರುವ ಜೂನ್ 20ರಿಂದ ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಇದೀಗ ಪ್ರಕಟಿಸಲಾಗಿದ್ದು, ಪ್ರತಿಭಾನ್ವಿತ ಯುವ ಬ್ಯಾಟರ್ ಶುಭ್‌ಮನ್ ಗಿಲ್‌ಗೆ ಭಾರತ ಟೆಸ್ಟ್ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಇನ್ನು ಟೆಸ್ಟ್ ಸರಣಿಗೆ ಮೂವರು ಕನ್ನಡಿಗರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಹಲವು ವರ್ಷಗಳ ಬಳಿಕ ಕರುಣ್ ನಾಯರ್ ಭಾರತ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡಕ್ಕೆ ವಿದಾಯ ಘೋಷಿಸಿದ್ದರು. ಹೀಗಾಗಿ ಭಾರತ ಟೆಸ್ಟ್ ತಂಡದ ನೂತನ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿತ್ತು. ಜಸ್ಪ್ರೀತ್ ಬುಮ್ರಾ, ಕೆ ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಭಾರತ ಟೆಸ್ಟ್ ತಂಡದ ನಾಯಕರಾಗುವ ರೇಸ್‌ನಲ್ಲಿದ್ದರು. ಆದರೆ ಈ ಮೂವರನ್ನು ಹಿಂದಿಕ್ಕಿ ಶುಭ್‌ಮನ್ ಗಿಲ್ ಭಾರತ ಟೆಸ್ಟ್ ತಂಡದ ನೂತನ ನಾಯಕರಾಗಿ ನೇಮಕವಾಗಿದ್ದಾರೆ. ಆಯ್ಕೆ ಸಮಿತಿಯ ಮನಗೆಲ್ಲುವಲ್ಲಿ ಶುಭ್‌ಮನ್ ಗಿಲ್ ಯಶಸ್ವಿಯಾಗಿದ್ದಾರೆ. ಇನ್ನು ಸದ್ಯ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿರುವ ರಿಷಭ್ ಪಂತ್, ಭಾರತ ಟೆಸ್ಟ್ ತಂಡದ ನೂತನ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ 18 ಆಟಗಾರರನ್ನೊಳಗೊಂಡ ತಂಡವನ್ನು ಅಜಿತ್ ಅಗರ್‌ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. 25 ವರ್ಷದ ಶುಭ್‌ಮನ್ ಗಿಲ್ ಭಾರತ ಟೆಸ್ಟ್ ತಂಡದ 37ನೇ ನಾಯಕನಾಗಿ ನೇಮಕಗೊಂಡಿದ್ದಾರೆ. ಇನ್ನು ಸಾಯಿ ಸುದರ್ಶನ್ ಹಾಗೂ ಅರ್ಶದೀಪ್ ಸಿಂಗ್ ಇದೇ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫಿಟ್ನೆಸ್ ಕಾರಣದಿಂದಾಗಿ ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡದಿಂದ ಹೊರಬಿದ್ದಿದ್ದು, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಂಡ ಕೂಡಿಕೊಂಡಿದ್ದಾರೆ.
ಇನ್ನು 2017ರಲ್ಲಿ ಕೊನೆಯ ಬಾರಿಗೆ ಭಾರತ ಟೆಸ್ಟ್ ತಂಡವನ್ನು ಪ್ರತಿನಿಧಿಸಿದ್ದ ಕನ್ನಡಿಗ ಕರುಣ್ ನಾಯರ್ 8 ವರ್ಷಗಳ ಬಳಿಕ ತಂಡ ಕೂಡಿಕೊಂಡಿದ್ದಾರೆ. ಇನ್ನುಳಿದಂತೆ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ನೀಳಕಾಯದ ವೇಗಿ ಪ್ರಸಿದ್ದ್ ಕೃಷ್ಣ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ಎದುರಿನ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ವೈಟ್‌ವಾಷ್ ಅನುಭವಿಸಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲುವ ಮೂಲಕ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ಕೈಚೆಲ್ಲಿತ್ತು. ಹೀಗಾಗಿ ಇದೀಗ ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್, ಮುಂಬರುವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಗಮನದಲ್ಲಿಟ್ಟುಕೊಂಡು ಹೊಸ ತಂಡ ಕಟ್ಟಲು ರೆಡಿಯಾಗಿದ್ದಾರೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.
