ಗಿಲ್-ಅಯ್ಯರ್ ತಲಾ ನೂರು, ಆಸೀಸ್‌ಗೆ ಪಂದ್ಯ ಗೆಲ್ಲಲು ಗುರಿ ನಾನೂರು..!
ಆರಂಭದಲ್ಲೇ ಗಾಯಕ್ವಾಡ್ ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ಎರಡನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಶುಭ್‌ಮನ್ ಗಿಲ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಿಂದಲೇ ಈ ಜೋಡಿ ಕಾಂಗರೂ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
ಇಂದೋರ್(ಸೆ.24): ಶ್ರೇಯಸ್ ಅಯ್ಯರ್ ಹಾಗೂ ಶುಭ್‌ಮನ್ ಗಿಲ್ ಬಾರಿಸಿದ ಅಮೋಘ ಶತಕ ಹಾಗೂ ನಾಯಕ ಕೆ ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಬಾರಿಸಿದ ಜವಾಬ್ದಾರಿಯುತ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 399 ರನ್ ಬಾರಿಸಿದ್ದು, ಕಾಂಗರೂ ಪಡೆಗೆ 400 ರನ್‌ಗಳ ಕಠಿಣ ಗುರಿ ನೀಡಿದೆ.
ಇಲ್ಲಿನ ಹೋಳ್ಕರು ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭದಲ್ಲೇ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತು. ಗಾಯಕ್ವಾಡ್ ಕೇವಲ 7 ರನ್ ಗಳಿಸಿ ಜೋಶ್ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಟೀಂ ಇಂಡಿಯಾ ಕೇವಲ 16 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.
ಗಿಲ್-ಅಯ್ಯರ್ ಶತಕದ ಜುಗಲ್ಬಂದಿ: ಆರಂಭದಲ್ಲೇ ಗಾಯಕ್ವಾಡ್ ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ಎರಡನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಶುಭ್‌ಮನ್ ಗಿಲ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಿಂದಲೇ ಈ ಜೋಡಿ ಕಾಂಗರೂ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಆಸೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಒಂದಂಕಿ ಮೊತ್ತಕ್ಕೆ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದ್ದ ಶ್ರೇಯಸ್ ಅಯ್ಯರ್ ಮೇಲೆ ಎರಡನೇ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಬೇಕಾದ ಅನಿವಾರ್ಯತೆ ಅವರ ಮುಂದಿತ್ತು. ಕ್ಲಾಸ್ ಇನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ ಕೇವಲ 86 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್ ವೃತ್ತಿಜೀವನದ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಶ್ರೇಯಸ್ ಅಯ್ಯರ್ 90 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 105 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಕಾಂಗರೂಗಳ ಮೇಲೆ ಗಿಲ್-ಅಯ್ಯರ್ ಸವಾರಿ, ಭರ್ಜರಿ ಶತಕ ಚಚ್ಚಿದ ಕಿಲಾಡಿ ಜೋಡಿ..!
ಇನ್ನೊಂದೆಡೆ ಶ್ರೇಯಸ್ ಅಯ್ಯರ್‌ಗೆ ಹೆಗಲಿಗೆ ಹೆಗಲು ಕೊಟ್ಟವರಂತೆ ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಶುಭ್‌ಮನ್ ಗಿಲ್ ತಮ್ಮ ಖಾತೆಗೆ ಮತ್ತೊಂದು ಶತಕ ಸೇರಿಸಿಕೊಂಡರು. ಆರಂಭದಲ್ಲಿ ಕೊಂಚ ರಕ್ಷಣಾತ್ಮಕ ಆಟಕ್ಕೆ ಮೊರೆಹೋದ ಶುಭ್‌ಮನ್ ಗಿಲ್, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸಿದರು. ಅಂತಿಮವಾಗಿ ಗಿಲ್ 92 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಆಕರ್ಷಕ ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಶುಭ್‌ಮನ್ ಗಿಲ್ 97 ಎಸೆತಗಳನ್ನು ಎದುರಿಸಿ 104 ರನ್ ಗಳಿಸಿ ಕ್ಯಾಮರೋನ್ ಗ್ರೀನ್‌ಗೆ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ 4ನೇ ವಿಕೆಟ್‌ಗೆ ನಾಯಕ ಕೆ ಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಜೋಡಿ ಕೇವಲ 33 ಎಸೆತಗಳಲ್ಲಿ 59 ರನ್‌ಗಳ ಜತೆಯಾಟವಾಡಿದರು. ಇಶಾನ್ ಕಿಶನ್ ಕೇವಲ 18 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ರನ್ ಬಾರಿಸಿ ಜಂಪಾಗೆ ವಿಕೆಟ್ ಒಪ್ಪಿಸಿದರು. ಇನ್ನು ಸಿಕ್ಸರ್ ಮೂಲಕವೇ ಖಾತೆ ತೆರೆದ ನಾಯಕ ಕೆ ಎಲ್ ರಾಹುಲ್ ಕೂಡಾ ಮತ್ತೊಂದು ಆಕರ್ಷಕ ಅರ್ಧಶತಕ ಚಚ್ಚಿದರು. ರಾಹುಲ್ 38 ಎಸೆತಗಳನ್ನು ಎದುರಿಸಿ ತಲಾ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 52 ರನ್ ಬಾರಿಸಿ ಕ್ಯಾಮರೋನ್ ಗ್ರೀನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
Ind vs Aus: ಗಿಲ್-ಅಯ್ಯರ್ ಅಬ್ಬರದ ಬ್ಯಾಟಿಂಗ್‌ಗೆ ಬ್ರೇಕ್ ಹಾಕಿದ ಮಳೆರಾಯ..! ಪಂದ್ಯ ತಾತ್ಕಾಲಿಕ ಸ್ಥಗಿತ
ಮತ್ತೆ ಮಿಂಚಿದ ಸೂರ್ಯ: ಕಳೆದ ಪಂದ್ಯದಲ್ಲಿ ಚುರುಕಿನ ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಇದೀಗ ಮತ್ತೊಂದು ಸ್ಪೋಟಕ ಅರ್ಧಶತಕ ಸಿಡಿಸಿದರು. ಅದರಲ್ಲೂ ಕ್ಯಾಮರೋನ್ ಗ್ರೀನ್ ಒಂದೇ ಓವರ್‌ನಲ್ಲಿ ಸತತ 4 ಸಿಕ್ಸರ್ ಚಚ್ಚಿ ರನ್ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿದರು. ಅಂತಿಮವಾಗಿ ಸೂರ್ಯಕುಮಾರ್ ಯಾದವ್ 37 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 72 ರನ್ ಬಾರಿಸಿದರು.