ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ತಮ್ಮ ಮೇಲಿನ ಟೀಕೆಗಳೇ ಯಶಸ್ಸಿಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಬೌನ್ಸರ್‌ಗಳನ್ನು ಎದುರಿಸುವ ದೌರ್ಬಲ್ಯದ ಬಗ್ಗೆ ಮಾತನಾಡಿದ ಅವರು, ಕಠಿಣ ಅಭ್ಯಾಸದಿಂದ ಆ ಟೀಕೆಗಳಿಗೆ ಉತ್ತರ ನೀಡಿರುವುದಾಗಿ ತಿಳಿಸಿದ್ದು, ಅವರ ಪ್ರದರ್ಶನವು ಭಾರತ ಟಿ20 ತಂಡದ ನಾಯಕತ್ವದ ಚರ್ಚೆಯನ್ನು ಹುಟ್ಟುಹಾಕಿದೆ.

ಮುಂಬೈ: ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸತತ ಗೆಲುವಿನತ್ತ ಮುನ್ನಡೆಸುತ್ತಿರುವ ನಾಯಕ ಶ್ರೇಯಸ್ ಅಯ್ಯರ್, ತಮ್ಮ ವೃತ್ತಿಜೀವನದ ದೊಡ್ಡ ಬದಲಾವಣೆಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಜಿಯೋ ಹಾಟ್‌ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ, ತನ್ನನ್ನು ಕುಗ್ಗಿಸಲು ಯತ್ನಿಸಿದವರ ಟೀಕೆಗಳೇ ತನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ ಎಂದು ಶ್ರೇಯಸ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಲವು ವರ್ಷಗಳಿಂದ ಶ್ರೇಯಸ್ ಅಯ್ಯರ್ ಎದುರಿಸುತ್ತಿದ್ದ ಪ್ರಮುಖ ಟೀಕೆಯೆಂದರೆ ಬೌನ್ಸರ್‌ಗಳನ್ನು ಎದುರಿಸುವಲ್ಲಿನ ದೌರ್ಬಲ್ಯ. ಆದರೆ ಈ ಬಾರಿ, ವಿಶ್ವದ ಅತ್ಯುತ್ತಮ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿ, ಅಯ್ಯರ್ ಆ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ಬ್ಯಾಟ್‌ನಿಂದಲೇ ಟೀಕಾಕಾರರ ಬಾಯಿ ಮುಚ್ಚಿಸಿದ ಶ್ರೇಯಸ್ ಅಯ್ಯರ್

"ಕೆಲವು ಎಸೆತಗಳನ್ನು ಆಡಲು ನನಗೆ ಬರುವುದಿಲ್ಲ ಎಂದು ಕೆಲವರು ಹೇಳುವುದನ್ನು ನಾನು ಕೇಳಿದ್ದೆ. ಅದರಲ್ಲೂ ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವ ಸಮಸ್ಯೆಯನ್ನು ನಾನು ಎಂದಿಗೂ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಟೀಕೆ ನನ್ನನ್ನು ಸಿಕ್ಕಾಪಟ್ಟೆ ಕೆರಳಿಸಿತು. ಯಾಕೆಂದರೆ, 'ಅಸಾಧ್ಯ' ಎಂಬ ಪದ ಕೇಳಲು ನನಗೆ ಇಷ್ಟವಿಲ್ಲ. ಹಾಗಾಗಿ, ಹಾಗೆ ಹೇಳಿದವರ ಮಾತು ತಪ್ಪು ಎಂದು ಸಾಬೀತು ಮಾಡಲೇಬೇಕೆಂದು ನಾನು ನಿರ್ಧರಿಸಿದೆ. ಅದಕ್ಕಾಗಿ ಕಠಿಣ ಅಭ್ಯಾಸ ಮಾಡಿದೆ. ಮೊದಲೆಲ್ಲಾ ಶಾರ್ಟ್ ಬಾಲ್‌ಗಳಿಗೆ ಡಿಫೆಂಡ್ ಮಾಡಲು ಅಥವಾ ಸಿಂಗಲ್ಸ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆದರೆ ಈಗ, ನನ್ನ ಜೋನ್‌ಗೆ ಬಾಲ್ ಬಂದರೆ ನೇರವಾಗಿ ಸಿಕ್ಸರ್‌ಗೆ ಅಟ್ಟುತ್ತೇನೆ" ಎಂದು ಅಯ್ಯರ್ ಹೇಳಿದ್ದಾರೆ.

ಬೆನ್ನುನೋವಿನ ಗಾಯದ ನಂತರ ಶ್ರೇಯಸ್ ಅಯ್ಯರ್ ಮೊದಲಿನಂತೆ ಬ್ಯಾಟಿಂಗ್ ಮಾಡಲಾರರು ಎಂದವರಿಗೂ ಅವರು ತಮ್ಮ ಆಟದ ಮೂಲಕವೇ ಉತ್ತರ ಕೊಟ್ಟಿದ್ದಾರೆ. "ಗಾಯದ ನಂತರ ಮಾನಸಿಕವಾಗಿ ಹೇಗೆ ಕಮ್‌ಬ್ಯಾಕ್ ಮಾಡುತ್ತೇವೆ ಎಂಬುದು ಮುಖ್ಯ. ಅನಗತ್ಯ ಟೀಕೆಗಳನ್ನು ಕಡೆಗಣಿಸುವುದನ್ನು ನಾನು ಕಲಿತಿದ್ದೇನೆ" ಎಂದು ಅವರು ಸ್ಪಷ್ಟಪಡಿಸಿದರು. ತಮ್ಮ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು, ಒಂದು ತರಬೇತಿ ಸೆಷನ್‌ನಲ್ಲಿ ಸುಮಾರು 50 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿ, 300ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸುತ್ತೇನೆ ಎಂದು ಶ್ರೇಯಸ್ ಹೇಳಿದರು.

"ನನ್ನ ತರಬೇತಿ ಒಂದೇ ರೀತಿ ಇರುವುದಿಲ್ಲ. ಸೈಡ್-ಆರ್ಮ್ ಥ್ರೋಗಳ ಬದಲು, ನಿಜವಾದ ಬೌಲರ್‌ಗಳನ್ನು ಎದುರಿಸಿ ಲಯ ಕಂಡುಕೊಳ್ಳುತ್ತೇನೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಎಬಿ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ಲಯವನ್ನು ನಾನು ಗಮನಿಸುತ್ತೇನೆ. ಅದನ್ನು ನನ್ನದೇ ಶೈಲಿಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ" ಎಂದರು. ಕೋಚ್‌ಗಳಾದ ಪ್ರವೀಣ್ ಆಮ್ರೆ ಮತ್ತು ಅಭಿಷೇಕ್ ನಾಯರ್ ಅವರ ಬೆಂಬಲ ನನ್ನ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಭಾರತ ಟಿ20 ತಂಡದ ಭವಿಷ್ಯದ ನಾಯಕ ಶ್ರೇಯಸ್ ಅಯ್ಯರ್?

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್, ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು. ಇದೀಗ 2026ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಶ್ರೇಯಸ್ ಅಯ್ಯರ್ ನಾಯಕನಾಗಿ ಹಾಗೂ ಬ್ಯಾಟರ್ ಆಗಿ ಗಮನ ಸೆಳೆಯುತ್ತಿದ್ದಾರೆ. ಸದ್ಯ ಅಯ್ಯರ್ ಏಳು ಪಂದ್ಯಗಳ ಆರು ಇನ್ನಿಂಗ್ಸ್‌ಗಳಿಂದ 69.75ರ ಬ್ಯಾಟಿಂಗ್ ಸರಾಸರಿಯಲ್ಲಿ 279 ರನ್ ಸಿಡಿಸಿ ಮಿಂಚಿದ್ದಾರೆ. ಇದೇ ವೇಳೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಶ್ರೇಯಸ್ ಅಯ್ಯರ್‌ಗೆ ಭಾರತ ಟಿ20 ತಂಡದ ನಾಯಕತ್ವ ಪಟ್ಟ ಒಲಿದು ಬರುವ ಸಾಧ್ಯತೆಯಿದೆ ಎನ್ನುವ ಚರ್ಚೆ ಜೋರಾಗಿದೆ.