* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಮನರಂಜನೆ* ಟ್ರೆಂಡಿ ಹೇರ್‌ಸ್ಟೈಲ್ ಮೂಲಕ ಗಮನ ಸೆಳೆದ ಸ್ಟಾರ್ ಆಟಗಾರರು* ಆಟದ ಜತೆಗೆ ಹೇರ್‌ಸ್ಟೈಲ್‌ನಲ್ಲೂ ಕೆರಿಬಿಯನ್ ಆಟಗಾರರು ಶೈನಿಂಗ್
ಮುಂಬೈ(ಏ.14): ಮನರಂಜನೆಗೆ ಇನ್ನೊಂದು ಹೆಸರೇ ಐಪಿಎಲ್. ಈ ಬಾರಿಯ ಕ್ರಿಕೆಟ್ ಪ್ರಿಯರು ಭರ್ಜರಿ ಮನರಂಜನೆ ಸವಿಯುತ್ತಿದ್ದಾರೆ. ಎಲ್ಲಾ 10 ತಂಡಗಳು ಜಿದ್ದಿನ ಪೈಪೋಟಿ ನೀಡಿವೆ. ಈ ಸೋಲು-ಗೆಲುವಿನಾಚೆ ಆಟಗಾರರು ವಿಶಿಷ್ಟ ಹೇರ್ಸ್ಟೈಲ್ನಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಪ್ಲೇಯರ್ಸ್ ಹೇರ್‌ಸ್ಟೈಲ್ ಬದಲಾಗಿದೆ. ಇವರ ಕೇಶವಿನ್ಯಾಸದ ಆಸಕ್ತಿ ಅಭಿಮಾನಿಗಳ ಮೇಲೂ ಪ್ರಭಾವ ಬೀರಿದ್ದು, ಇವರಂತೆ ಹೇರ್‌ಸ್ಟೈಲ್ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಹಾಗಂತ ಈ ಪ್ಲೇಯರ್ಸ್ ಆಟದಲ್ಲಿ ಹಿಂದೆ ಬಿದ್ದಿಲ್ಲ. ನ್ಯೂ ಟ್ರೆಂಡ್ ಹೇರ್ಸ್ಟೈಲ್ಗೂ ಸೈ, ಆಟಕ್ಕೂ ಸೈ ಅನ್ನಿಸಿಕೊಂಡಿದ್ದಾರೆ.
ಗುಲಾಬಿ ಬಣ್ಣದ ಹೇರ್ಸ್ಟೈಲ್ನಿಂದ ಹೆಟ್ಮೇಯರ್ ಶೈನಿಂಗ್:
ಡೆಲ್ಲಿ ಕ್ಯಾಪಿಟಲ್ಸ್ ನಿಂದ ಹೊರಬಿದ್ದು ರಾಜಸ್ಥಾನ ರಾಯಲ್ಸ್ (Rajasthan Royals) ಸೇರಿಕೊಂಡಿರೋ ಶಿಮ್ರೊನ್ ಹೆಟ್ಮೇಯರ್ (Shimron Hetmyer) ಈ ಬಾರಿ ಟೂರ್ನಿ ಆರಂಭದಿಂದಲೇ ಕೇಶವಿನ್ಯಾಸದಿಂದ ಸುದ್ದಿಯಲ್ಲಿದ್ರು. ಪ್ರತಿ ಬಾರಿ ತಂಡದ ಜೆರ್ಸಿ ಬಣ್ಣವನ್ನು ತಮ್ಮ ಹೇರ್ ಕಲರ್ ಆಗಿಸಿಕೊಳ್ತಾರೆ. ಅದರಂತೆ ಈ ಸಲ ಕೂದಲಿಗೆ ಗುಲಾಬಿ ಬಣ್ಣವನ್ನ ಹಚ್ಚಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಇನ್ನು ಹೇರ್ಸ್ಟೈಲ್ನಷ್ಟೇ ಆಟದಲ್ಲೂ ಅಬ್ಬರಿಸ್ತಿರೋ ಹೆಟ್ಮೇಯರ್ 4 ಪಂದ್ಯಗಳಿಂದ 168 ರನ್ ಬಾರಿಸಿ ಮಿಂಚಿದ್ದಾರೆ. ಇದೀಗ ಬಲಿಷ್ಠ ಗುಜರಾತ್ ಟೈಟಾನ್ಸ್ ಎದುರು ರನ್ ಮಳೆ ಹರಿಸಲು ಶಿಮ್ರೊನ್ ಹೆಟ್ಮೇಯರ್ ಸಜ್ಜಾಗಿದ್ದಾರೆ.
ಗೋಲ್ಡ್ ಮತ್ತು ಪರ್ಪಲ್ ಕಲರ್ನಲ್ಲಿ ಆಂಡ್ರೆ ರಸೆಲ್:
ಹೊಡಿ ಬಡಿ ಆಟಕ್ಕೆ ಎತ್ತಿದ ಕೈ ಅನ್ನಿಸಿಕೊಂಡಿರೋ ಕೋಲ್ಕತಾ ನೈಟ್ ರೈಡರ್ಸ್‌ನ (Kolkata Knight Riders) ಆಂಡ್ರೆ ರಸೆಲ್ (Andre Russell), ಫಂಕಿ ಹೇರ್‌ಸ್ಟೈಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಫ್ರಾಂಚೈಸಿಯ ಗೌರವಾರ್ಥವಾಗಿ ಕೂದಲಿಗೆ ಗೋಲ್ಡ್ ಮತ್ತು ಪರ್ಪಲ್ ಅಂದ್ರೆ ಕೆಕೆಆರ್ ಜೆರ್ಸಿ ಬಣ್ಣವನ್ನು ಹಚ್ಚಿದ್ದಾರೆ. ಈ ಸಲ ಲಯ ಕಂಡುಕೊಂಡಿರೋ ಮಸೆಲ್ಮ್ಯಾನ್ 130 ರನ್ ಜೊತೆ 3 ವಿಕೆಟ್ ಕಬಳಿಸಿದ್ದಾರೆ.
ಬ್ರಾವೋ ಕೂದಲಿಗೆ ಚೆನ್ನೈ ತಂಡದ ಜೆರ್ಸಿ ಬಣ್ಣ:
ಇನ್ನು ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ತಂಡದ (Chennai Super Kings) ಜೆರ್ಸಿ ಕಲರ್ ಹೋಲುವ ಬಣ್ಣವನ್ನ ತಮ್ಮ ಕೂದಲಿಗೆ ಹಚ್ಚಿಕೊಂಡಿದ್ದಾರೆ. ಆದ್ರೆ ಡ್ವೇನ್ ಬ್ರಾವೋ (Dwayne Bravo) ಈ ಸಲ ಹೇರ್ಸ್ಟೈಲ್ನಿಂದ ಸುದ್ದಿಯಲ್ಲಿರುವಷ್ಟು ಫಾರ್ಮ್ನಲ್ಲಿ ಇಲ್ಲ. ಬೌಲಿಂಗ್ನಲ್ಲಿ ಮೊನಚಿಲ್ಲ. ಬ್ಯಾಟಿಂಗ್ನಲ್ಲಿ ಮೊದಲಿನಂತೆ ರನ್ ಹರಿದು ಬರ್ತಿಲ್ಲ. ಮುಂಬರುವ ದಿನಗಳಲ್ಲಿ ಫಾರ್ಮ್‌ಗೆ ಮರಳಲು ಚಾಂಪಿಯನ್ ಬೌಲರ್ ಎದುರು ನೋಡುತ್ತಿದ್ದಾರೆ.
IPL 2022: ಅಗ್ರಸ್ಥಾನಕ್ಕಾಗಿಂದು ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟಾನ್ಸ್ ಪೈಪೋಟಿ
ಗೋಲ್ಡ್ ಬಣ್ಣದಲ್ಲಿ ಅಲೆನ್ :
ವೆಸ್ಟ್ಇಂಡೀಸ್ ತಂಡದ ಮತ್ತೋರ್ವ ಆಟಗಾರ ಫ್ಯಾಬಿಯನ್ ಅಲೆನ್ ಕೂಡ ಗೋಲ್ಡ್ ಹೇರ್ಸ್ಟೈಲ್ನಿಂದ ಕಲರ್ನಿಂದ ಗಮನ ಸೆಳೆದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಅಲೆನ್ಗೆ ಇನ್ನೂ ಅವಕಾಶ ಸಿಕ್ಕಿಲ್ಲ. ನೀಲಿ ಜೆರ್ಸಿಯಲ್ಲಿ ಆರ್ಭಟ ಎದುರು ನೋಡ್ತಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆಯನ್ನ ಅಲ್ಲಗಳೆಯುವಂತಿಲ್ಲ.
ಇದಿಷ್ಟೇ ಅಲ್ಲದೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿತೀಶ್ ರಾಣಾ ಹೇರ್‌ಸ್ಟೈಲ್ ಕೂಡ ಟ್ರೆಂಡ್ ಸೃಷ್ಟಿಸಿದೆ. ಇವರು ಕೂದಲಿಗೆ ನೇರಳೆ ಮತ್ತು ಚಿನ್ನದ ಬಣ್ಣವನ್ನು ಹಚ್ಚಿಕೊಂಡು ಮಿಂಚುತ್ತಿದ್ದಾರೆ. ಒಟ್ಟಿನಲ್ಲಿ ದೇಶಿಗಿಂತ ವಿದೇಶಿ ಪ್ಲೇಯರ್ಸ್ ಪ್ರಸಕ್ತ ಐಪಿಎಲ್ನಲ್ಲಿ ಹೇರ್‌ಸ್ಟೈಲ್ ಮೂಲಕ ಟ್ರೆಂಡ್ ಸೃಷ್ಟಿಸಿರೋದಂತೂ ಸುಳ್ಳಲ್ಲ.
