Asianet Suvarna News Asianet Suvarna News

IPL 2022: ಅಗ್ರಸ್ಥಾನಕ್ಕಾಗಿಂದು ರಾಜಸ್ಥಾನ ರಾಯಲ್ಸ್‌-ಗುಜರಾತ್ ಟೈಟಾನ್ಸ್ ಪೈಪೋಟಿ

* ರಾಜಸ್ಥಾನ ರಾಯಲ್ಸ್‌ ತಂಡಕ್ಕಿಂದು ಬಲಿಷ್ಠ ಗುಜರಾತ್ ಟೈಟಾನ್ಸ್ ಸವಾಲು

* ಅಗ್ರಸ್ಥಾನಕ್ಕೇರಲು ಎರಡು ಬಲಿಷ್ಠ ತಂಡಗಳ ನಡುವೆ ಪೈಪೋಟಿ

* ಟೂರ್ನಿಯಲ್ಲಿ ತಲಾ 3 ಪಂದ್ಯಗಳನ್ನು ಜಯಿಸಿರುವ ಉಭಯ ತಂಡಗಳು

IPL 2022 Rajasthan Royals take on Gujarat Titans in Navi Mumbai kvn
Author
Bengaluru, First Published Apr 14, 2022, 8:31 AM IST | Last Updated Apr 14, 2022, 8:31 AM IST

ನವಿ ಮುಂಬೈ(ಏ.14): ಹಾರ್ದಿಕ್‌ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್‌ ಟೈಟಾನ್ಸ್‌ (Gujarat Titans) ಹಾಗೂ ಸಂಜು ಸ್ಯಾಮ್ಸನ್‌ (Sanju Samson) ಮುಂದಾಳತ್ವದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡಗಳು ಗುರುವಾರ ಸೆಣಸಲಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 24ನೇ ಪಂದ್ಯಕ್ಕೆ ಡಿವೈ ಪಾಟೀಲ್ ಮೈದಾನ ಆತಿಥ್ಯ ವಹಿಸಿದ್ದು, ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ

ರಾಜಸ್ಥಾನ ರಾಯಲ್ಸ್‌ ತಂಡವು ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್‌ ಸಹ 4 ಪಂದ್ಯಗಳಲ್ಲಿ 3ರಲ್ಲಿ ಜಯಿಸಿ 6 ಅಂಕ ಗಳಿಸಿದೆ. ಆದರೆ ಎರಡೂ ತಂಡಗಳ ನೆಟ್‌ ರನ್‌ರೇಟ್‌ನಲ್ಲಿ ದೊಡ್ಡ ಅಂತರವಿದೆ. ಈ ಪಂದ್ಯದಲ್ಲಿ ಗೆದ್ದು ಅಗ್ರಸ್ಥಾನದಲ್ಲೇ ಉಳಿಯಲು ರಾಜಸ್ಥಾನ ರಾಯಲ್ಸ್‌ ಎದುರು ನೋಡುತ್ತಿದ್ದರೆ, ಜಯ ಸಾಧಿಸುವುದರ ಜೊತೆಗೆ ನೆಟ್‌ ರನ್‌ರೇಟ್‌ ಉತ್ತಮಪಡಿಸಿಕೊಳ್ಳಲು ಗುಜರಾತ್ ಟೈಟಾನ್ಸ್‌ ಕಾತರಿಸುತ್ತಿದೆ. ಒಟ್ಟಿನಲ್ಲಿ ಎರಡೂ ತಂಡಗಳು ಹೊಸ ಹುರುಪಿನೊಂದಿಗೆ ಸಜ್ಜಾಗಿದ್ದು, ಅಗ್ರಸ್ಥಾನಕ್ಕೇರಲು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ

ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟರ್‌ಗಳಿದ್ದು, ದೊಡ್ಡ ಮೊತ್ತ ನಿರೀಕ್ಷೆ ಮಾಡಬಹುದಾಗಿದೆ. ಎರಡೂ ತಂಡಗಳ ಬೌಲಿಂಗ್‌ ಪಡೆಯೂ ಉತ್ತಮವಾಗಿರುವ ಕಾರಣ, ನೇರಾನೇರ ಪೈಪೋಟಿ ಏರ್ಪಡಬಹುದು. ಇದರ ಜತೆಗೆ ಎರಡೂ ತಂಡಗಳಲ್ಲೂ ಮಾರಕ ಬೌಲರ್‌ಗಳಿದ್ದು, ಪವರ್ ಪ್ಲೇ ಓವರ್‌ಗಳಲ್ಲೇ ಎದುರಾಳಿ ತಂಡಕ್ಕೆ ಆಘಾತ ನೀಡುವಂತಹ ಸಾಮರ್ಥ್ಯ ಎರಡೂ ತಂಡಗಳಲ್ಲಿವೆ. ರಾಯಲ್ಸ್ ಪರ ಟ್ರೆಂಟ್ ಬೌಲ್ಟ್‌, ಪ್ರಸಿದ್ಧ್ ಕೃಷ್ಣ ಅವರಂತಹ ಮಾರಕ ವೇಗಿಗಳಿದ್ದರೆ, ಗುಜರಾತ್ ತಂಡದ ಪರ ಮೊಹಮ್ಮದ್ ಶಮಿ, ಲಾಕಿ ಫರ್ಗ್ಯೂಸನ್ ಅವರಂತಹ ಟಿ20 ಸ್ಪೆಷಲಿಸ್ಟ್ ಬೌಲರ್‌ಗಳಿದ್ದಾರೆ. ಇದಷ್ಟೇ ಅಲ್ಲದೇ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಗುಜರಾತ್ ತಂಡದ ರಶೀದ್ ಖಾನ್ ಹಾಗೂ ರಾಯಲ್ಸ್‌ನ ಯುಜುವೇಂದ್ರ ಚಹಲ್ ತುದಿಗಾಲಿನಲ್ಲಿ ನಿಂತಿದ್ದಾರೆ.

IPL 2022: ಸಿಎಸ್‌ಕೆ ಭಾರತದ ಅತಿ ಜನಪ್ರಿಯ ಕ್ರೀಡಾ ತಂಡ..!

ಗುಜರಾತ್ ತಂಡದ ಪರ ಇಂದಿನ ಪಂದ್ಯದಲ್ಲಿ ಮ್ಯಾಥ್ಯೂ ವೇಡ್ ಬದಲಿಗೆ ರೆಹಮನುಲ್ಲಾ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಶುಭ್‌ಮನ್ ಗಿಲ್ (Shubman Gill), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಹಾರ್ದಿಕ್ ಪಾಂಡ್ಯ, ಅಭಿನವ್ ಮನೋಹರ್ ಜವಾಬ್ದಾರಿಯುತ ಪ್ರದರ್ಶನ ತೋರಿದರೆ, ಬಲಿಷ್ಠ ರಾಜಸ್ಥಾನ ರಾಯಲ್ಸ್‌ಗೆ ಕಠಿಣ ಸವಾಲು ಮುಂದಿಡಲು ಸಾಧ್ಯ. ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಶಿಮ್ರೊನ್ ಹೆಟ್ಮೇಯರ್ ಅವರಂತಹ ತಜ್ಞ ಬ್ಯಾಟರ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ,

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್‌, ದೇವದತ್ ಪಡಿಕ್ಕಲ್‌, ಸಂಜು ಸ್ಯಾಮ್ಸನ್‌(ನಾಯಕ), ವ್ಯಾನ್ ಡರ್ ಡುಸ್ಸೆನ್‌, ಶಿಮ್ರೊನ್ ಹೆಟ್ಮೇಯರ್‌, ರವಿಚಂದ್ರನ್ ಅಶ್ವಿನ್‌, ರಿಯಾನ್‌ ಪರಾಗ್, ಟ್ರೆಂಟ್‌ ಬೌಲ್ಟ್‌, ಯುಜುವೇಂದ್ರ ಚಹಲ್‌, ಕುಲ್ದೀಪ್‌ ಸೆನ್‌, ಪ್ರಸಿದ್ಧ್  ಕೃಷ್ಣ.

ಗುಜರಾತ್‌ ಟೈಟಾನ್ಸ್: ರಹಮಾನುಲ್ಲಾ ಗುರ್ಬಾಜ್, ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್‌, ಹಾರ್ದಿಕ್ ಪಾಂಡ್ಯ‌(ನಾಯಕ), ಡೇವಿಡ್ ಮಿಲ್ಲರ್‌, ಅಭಿನವ್ ಮನೋಹರ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ದರ್ಶನ್ ನಾಲ್ಕಂಡೆ‌, ಮೊಹಮ್ಮದ್ ಶಮಿ, ಲಾಕಿ ಫಗ್ರ್ಯೂಸನ್‌.

ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್‌ ಸ್ಟೇಡಿಯಂ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Latest Videos
Follow Us:
Download App:
  • android
  • ios