Asianet Suvarna News Asianet Suvarna News

T20 World Cup: ವಿಮಾನ ಮಿಸ್‌ ಮಾಡಿಕೊಂಡ ಹೆಟ್ಮೆಯರ್‌ ವಿಶ್ವಕಪ್‌ ತಂಡದಿಂದಲೇ ಔಟ್‌!

ಫ್ಲೈಟ್‌ ಮಿಸ್‌ ಮಾಡಿಕೊಂಡ ಕಾರಣಕ್ಕೆ ವೆಸ್ಟ್‌ ಇಂಡೀಸ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಶಿಮ್ರೋನ್‌ ಹೆಟ್ಮೆಯರ್‌ರನ್ನು ಟಿ20 ವಿಶ್ವಕಪ್‌ ತಂಡದಿಂದಲೇ ಕೈಬಿಡುವ ದೊಡ್ಡ ಶಿಕ್ಷೆಯನ್ನು ಅಲ್ಲಿನ ಕ್ರಿಕೆಟ್‌ ಮಂಡಳಿ ನೀಡಿದೆ. ಅವರ ಬದಲು ಶಮರಾಹ್‌ ಬ್ರೂಕ್ಸ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

Shimron Hetmyer is out of T20 World Cup 2022 as he misses his flight to Australia san
Author
First Published Oct 4, 2022, 11:13 AM IST

ಜಮೈಕಾ (ಅ.4): ಸಾಮಾನ್ಯವಾಗಿ ಪ್ಲೇಯರ್‌ಗಳು ಗಾಯ, ಕಳಪೆ ಫಾರ್ಮ್‌ ಅಥವಾ ಅನಾರೋಗ್ಯದ ಕಾರಣಕ್ಕಾಗಿ ಪ್ರಮುಖ ಟೂರ್ನಿಯಿಂದ ಹೊರಬೀಳುತ್ತಾರೆ. ಆದರೆ, ವೆಸ್ಟ್‌ ಇಂಡೀಸ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಶಿಮ್ರೋನ್‌ ಹೆಟ್ಮೆಯರ್‌ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿರುವ ವಿಮಾನವನ್ನು ತಪ್ಪಿಸಿಕೊಂಡ ಕಾರಣಕ್ಕಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಶಮರಾಹ್‌ ಬ್ರೂಕ್ಸ್‌ ಅವರನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ವಿಶ್ವಕಪ್‌ ತಂಡಕ್ಕೆ ಅಯ್ಕೆ ಮಾಡಿದೆ. ಎವಿನ್‌ ಲೂಯಿಸ್‌ ಹಾಗೂ ನಿಕೋಲಸ್‌ ಪೂರನ್‌ ಅವರಂತೆ ಹೆಟ್ಮೆಯರ್‌ ಕೂಡ ವೆಸ್ಟ್‌ ಇಂಡೀಸ್‌ ತಂಡದ ಅತ್ಯುತ್ತಮ ಆಟಗಾರ. ಆದರೆ, ಅವರ ಅಶಿಸ್ತನ್ನು ಒಪ್ಪಿಕೊಳ್ಳೋದಿಲ್ಲ ಎಂದಿರುವ ಕ್ರಿಕೆಟ್‌ ಮಂಡಳಿ ತಂಡದಿಂದಲೇ ಕೈಬಿಡುವ ದೊಡ್ಡ ನಿರ್ಧಾರ ಮಾಡಿದೆ. ಹೆಟ್ಮೆಯರ್‌ ಅನುಪಸ್ಥಿತಿಯಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಬ್ಯಾಟಿಂಗ್‌ ವಿಭಾಗ ಇನ್ನಷ್ಟು ದುರ್ಬಲವಾಗುವುದು ಖಂಡಿತ. ಆಸ್ಟ್ರೇಲಿಯಾಕ್ಕೆ ತೆರಳಲಿರುವ ಪರಿಷ್ಕೃತ ವಿಮಾನವನ್ನೂ ಹೆಟ್ಮೆಯರ್‌ ತಪ್ಪಿಸಿಕೊಂಡಿದ್ದರು. ನಿಗದಿಯಂತೆ ಹೆಟ್ಮೆಯರ್‌ ಶನಿವಾರ ಅಂದರೆ ಅಕ್ಟೋಬರ್‌ 1 ರಂದು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಅವರ ಮನವಿಯ ಮೇರೆಗೆ ಅದನ್ನು ಸೋಮವಾರ ಪರಿಷ್ಕೃತ ಮಾಡಲಾಗಿತ್ತು. ಆದರೆ, ಕೌಟುಂಬಿಕ ಕಾರಣದಿಂದಾಗಿ 25 ವರ್ಷದ ಹೆಟ್ಮೆಯರ್‌ ಆಸ್ಟ್ರೇಲಿಯಾಕ್ಕೆ ತೆರಳಲಿರುವ ಸೋಮವಾರದ ವಿಮಾನವನ್ನೂ ತಪ್ಪಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯ ಅಕ್ಟೋಬರ್‌ 5 ರಂದು ನಿಗದಿಯಾಗಿದೆ. ಇನ್ನು ಟಿ20 ವಿಶ್ವಕಪ್‌ (T20 World Cup 2022) ಅಕ್ಟೋಬರ್‌ 16ರಿಂದ ಆರಂಭವಾಗಲಿದೆ. ಹೆಟ್ಮೆಯರ್‌ ಅಶಿಸ್ತಿನ ಕಾರಣಕ್ಕಾಗಿ ಅವರ ಬದಲು ಶಮರಾಹ್‌ ಬ್ರೂಕ್ಸ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ (Cricket West Indies) ತಿಳಿಸಿದೆ. ಇತ್ತಿಚೆಗೆ ನಡೆದ ಸಿಪಿಎಲ್‌ ಟೂರ್ನಿಯಲ್ಲಿ ಜಮೈಕಾ ಟಲ್ಲವಾಸ್‌ ತಂಡದ ನಾಕೌಟ್‌ ಪಂದ್ಯಗಳಲ್ಲಿ 34 ವರ್ಷದ ಬ್ರೂಕ್ಸ್‌ ಅದ್ಭುತವಾಗಿ ಆಟವಾಡಿದ್ದರು. ಎಲಿಮಿನೇಟರ್‌ ಪಂದ್ಯದಲ್ಲಿ 47 ರನ್‌ ಬಾರಿಸಿದ್ದ ಬ್ರೂಕ್ಸ್‌, 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಅಜೇಯ 109 ಹಾಗೂ ಫೈನಲ್‌ ಪಂದ್ಯದಲ್ಲಿ 47 ರನ್‌ ಸಿಡಿಸಿದ್ದರು.

ಕೌಟುಂಬಿಕ ಕಾರಣವನ್ನು ನೀಡಿ ಶಿಮ್ರೋನ್‌ ಹೆಟ್ಮೆಯರ್‌ (Shimron Hetmyer) ಆಸ್ಟ್ರೇಲಿಯಾಕ್ಕೆ (Australia) ತೆರಳಲಿರುವ ವಿಮಾನವನ್ನು ಶನಿವಾರದಿಂದ ಸೋಮವಾರಕ್ಕೆ ಮುಂದೂಡುವಂತೆ ಮನವಿ ಮಾಡಿದ್ದ. ಈ ವೇಳೆಯೇ ಅವರಿಗೆ ಎಚ್ಚರಿಕೆಯನ್ನು ನೀಡಿದ್ದೆವು. ಹಾಗೇನಾದರೂ ಸಮಸ್ಯೆಗಳಾಗಿ ಸೋಮವಾರದ ವಿಮಾನವನ್ನೂ ತಪ್ಪಿಸಿಕೊಂಡಲ್ಲಿ ಖಂಡಾಖಂಡಿತವಾಗಿ ತಂಡದಿಂದ ಹೊರಹಾಕುತ್ತೇವೆ ಎಂದು ತಿಳಿಸಿದ್ದೆವು. ನಾವು ತಂಡದ ಶಿಸ್ತಿನ ವಿಚಾರದಲ್ಲಿ ರಾಜಿಯಾಗೋದಿಲ್ಲ. ಟಿ20 ವಿಶ್ವಕಪ್‌ ಎನ್ನುವುದು ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಜಾಗತಿಕ ಟೂರ್ನಿ ಎಂದು ತಂಡದ ಕ್ರಿಕೆಟ್‌ ನಿರ್ದೇಶಕ ಜಿಮ್ಮಿ ಆಡಮ್ಸ್‌ (Jimmy Adams) ಹೇಳಿದ್ದಾರೆ.

ತಮ್ಮ ದೇಶವನ್ನೇ ಬಿಟ್ಟು, ಈ ಬಾರಿ T20 World Cup ಗೆಲ್ಲಬಲ್ಲ 2 ನೆಚ್ಚಿನ ತಂಡಗಳನ್ನು ಹೆಸರಿಸಿದ ಮೋಯಿನ್ ಅಲಿ..!

ಇನ್ನು ಶಮರಾಹ್‌ ಬ್ರೂಕ್ಸ್‌ (Shamarh Brooks) ನಮ್ಮ ಇತ್ತೀಚಿನ ಟಿ20 ತಂಡಗಳಲ್ಲಿ (T20I) ಸ್ಥಾನ ಪಡೆದಿದ್ದರು. ಅಲ್ಲದೆ, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನ ನಾಕೌಟ್‌ ಹಂತಗಳಲ್ಲಿ ಗಮನಾರ್ಹವಾದ ನಿವರ್ಹಣೆಯನ್ನು ತೋರಿ ಗಮನಸೆಳೆದಿದ್ದರು. ಅವರು ಬಹುಶಃ ಈ ವಾರದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅವರು ಉತ್ತಮ ನಿರ್ವಹಣೆ ತೋರಲಿ ಎಂದು ಹಾರೈಸುತ್ತೇನೆ ಎಂದು ಆಡಮ್ಸ್‌ ಹೇಳಿದ್ದಾರೆ.

T20 World cup 2022 ಟೂರ್ನಿಯಿಂದ ಬುಮ್ರಾ ಅಧಿಕೃತವಾಗಿ ಔಟ್, ಖಚಿತಪಡಿಸಿದ ಬಿಸಿಸಿಐ!

ಅಕ್ಟೋಬರ್‌ 7 ರಂದು ಆಸ್ಟ್ರೇಲಿಯಾ ತಂಡದ ವಿರುದ್ಧ ಇನ್ನೊಂದು ಟಿ20 ಪಂದ್ಯವನ್ನು ವೆಸ್ಟ್‌ ಇಂಡೀಸ್‌ ಆಡಲಿದೆ. ಆ ಬಳಿಕ ಸ್ಕಾಟ್ಲೆಂಡ್‌, ಜಿಂಬಾಬ್ವೆ ಹಾಗೂ ಐರ್ಲೆಂಡ್‌ ತಂಡಗಳನ್ನು ಟಿ20 ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯಗಳಲ್ಲಿ ಎದುರಿಸಲಿದೆ. ಅಕ್ಟೋಬರ್‌ 17 ರಂದು ಸ್ಕಾಟ್ಲೆಂಡ್‌, 19 ರಂದು ಜಿಂಬಾಬ್ವೆ ಹಾಗೂ 21 ರಂದು ಐರ್ಲೆಂಡ್‌ ತಂಡವನ್ನು ಎದುರಿಸಲಿದೆ.

Follow Us:
Download App:
  • android
  • ios