* ಎರಡನೇ ಏಕದಿನ ಪಂದ್ಯದಲ್ಲೂ ಅಲ್ಪ ಮೊತ್ತಕ್ಕೆ ಜಿಂಬಾಬ್ವೆ ಆಲೌಟ್* ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಕೇವಲ 162 ರನ್‌ಗಳ ಗುರಿ* 3 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಶಾರ್ದೂಲ್ ಠಾಕೂರ್

ಹರಾರೆ(ಆ.20): ಮಧ್ಯಮ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಮಾರಕ ದಾಳಿಗೆ ತತ್ತರಿಸಿದ ಜಿಂಬಾಬ್ವೆ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 161 ರನ್‌ಗಳಿಗೆ ಸರ್ವಪತನ ಕಂಡಿದೆ. ಮಧ್ಯಮ ಕ್ರಮಾಂಕದ ವೇಗಿ ಶಾರ್ದೂಲ್ ಠಾಕೂರ್ ಕೇವಲ 38 ರನ್‌ ನೀಡಿ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಹರಾರೆ ಕ್ರಿಕೆಟ್ ಕ್ಲಬ್‌ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ ಎಲ್ ರಾಹುಲ್ ಮತ್ತೊಮ್ಮೆ ಫೀಲ್ಡಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡರು. ಮೊದಲ ಪಂದ್ಯದಲ್ಲಿ ಕೇವಲ 189 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿದ್ದ ಜಿಂಬಾಬ್ವೆ ತಂಡವು ಎರಡನೇ ಪಂದ್ಯದಲ್ಲಿ ಆರಂಭದಿಂದಲೇ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಮೊದಲ 8.3 ಓವರ್‌ಗಳಲ್ಲಿ ಜಿಂಬಾಬೆ ಆರಂಭಿಕರಿಬ್ಬರು ಸೇರಿ ಗಳಿಸಿದ್ದು ಕೇವಲ 20 ರನ್‌ಗಳು ಮಾತ್ರ. ಜಿಂಬಾಬ್ವೆ ಆರಂಭಿಕ ಬ್ಯಾಟರ್ ಕೈತಾನೋ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು.

ಮೊದಲ ವಿಕೆಟ್ ಪತನದ ಬಳಿಕ ಜಿಂಬಾಬ್ವೆ ತಂಡವು ಮತ್ತೆ ದಿಢೀರ್ ಎನ್ನುವಂತೆ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ವೆಸ್ಲೆ ಮೆಡ್‌ವೆರೆಗೆ ಕನ್ನಡದ ವೇಗಿ ಪ್ರಸಿದ್ದ್ ಕೃಷ್ಣ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ದೀಪಕ್ ಚಹರ್ ಬದಲಿಗೆ ಆಡುವ ಹನ್ನೊಂದರ ಬಳಗ ಕೂಡಿಕೊಂಡ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಜಿಂಬಾಬ್ವೆ ತಂಡದ ಪ್ರಮುಖ ಮೂರು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾದರು.

Scroll to load tweet…

ಇನ್ನು ಕಳೆದ ಪಂದ್ಯದಲ್ಲಿ ವಿಕೆಟ್ ಬರ ಅನುಭವಿಸಿದ್ದ ಅನುಭವಿ ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್, ಕೊನೆಗೂ ಎರಡನೇ ಏಕದಿನ ಪಂದ್ಯದಲ್ಲಿ ವಿಕೆಟ್ ಬೇಟೆಯಾಡುವಲ್ಲಿ ಯಶಸ್ವಿಯಾದರು. 16 ರನ್ ಗಳಿಸಿ ಕ್ರೀಸ್‌ನಲ್ಲಿ ನೆಲೆಯೂರುವ ಮುನ್ಸೂಚನೆ ನೀಡಿದ್ದ ಸಿಕಂದರ ರಾಜಾ ಅವರನ್ನು ಬಲಿ ಪಡೆಯುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಇನ್ನು ಹಂಗಾಮಿ ಸ್ಪಿನ್ನರ್ ದೀಪಕ್ ಹೂಡಾ ಕೂಡಾ ಒಂದು ವಿಕೆಟ್ ಕಬಳಿಸಿ ಜಿಂಬಾಬ್ವೆ ತಂಡಕ್ಕೆ ಶಾಕ್ ನೀಡಿದರು.

Ind vs ZIM: ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಒಂದು ಹಂತದಲ್ಲಿ 72 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದ ಜಿಂಬಾಬ್ವೆ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಸೀನ್ ವಿಲಿಯಮ್ಸ್‌(42) ಹಾಗೂ ರಿಯಾನ್ ಬುರ್ಲ್‌(39) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಸೀನ್ ವಿಲಿಯಮ್ಸ್ ವಿಕೆಟ್ ಪತನವಾಗುತ್ತಿದ್ದಂತೆಯೇ ಮತ್ತೆ ಜಿಂಬಾಬ್ವೆ ನಿರಂತರ ವಿಕೆಟ್ ಕಳೆದುಕೊಂಡಿತು.

ಭಾರತ ಕ್ರಿಕೆಟ್ ತಂಡದ ಪರ ಶಾರ್ದೂಲ್ ಠಾಕೂರ್ 3 ವಿಕೆಟ್‌ ಪಡೆದರೇ, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ದೀಪಕ್ ಹೂಡಾ ತಲಾ ಒಂದೊಂದು ವಿಕೆಟ್‌ ಪಡೆದರು.