ಢಾಕಾ(ಮೇ.19): 14ನೇ ಆವೃತ್ತಿಯ ಐಪಿಎಲ್ ಮುಗಿಸಿ ತವರಿಗೆ ವಾಪಾಸಾಗಿರುವ ಬಾಂಗ್ಲಾದೇಶ ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್‌ ಮೀರ್‌ಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ಯಾಪ್ ಕೂಡಿಕೊಂಡಿದ್ದಾರೆ.

ಭಾರತದಿಂದ ತವರಿಗೆ ಬಂದ ಬಳಿಕ ಕಡ್ಡಾಯ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ಶಕೀಬ್‌ ಇದೀಗ ಬಾಂಗ್ಲಾದೇಶ ತಂಡ ಕೂಡಿಕೊಂಡಿದ್ದಾರೆ. ದ ಡೈಲಿ ಸ್ಟಾರ್ ವರದಿಯ ಪ್ರಕಾರ, 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ನಡೆಸಲಾದ ಕೋವಿಡ್ ಟೆಸ್ಟ್‌ನಲ್ಲಿ ಮುಷ್ತಾಫಿಜುರ್ ರೆಹಮಾನ್‌ ಹಾಗೂ ಶಕೀಬ್‌ ಅಲ್‌ ಹಸನ್ ಅವರ ವರದಿ ನೆಗೆಟಿವ್ ಬಂದಿದೆ. ನ್ಯಾಷನಲ್ ಕ್ಯಾಂಪ್ ಕೂಡಿಕೊಳ್ಳುವ ಮುನ್ನ ಈ ಇಬ್ಬರು ಕ್ರಿಕೆಟಿಗರು ಪ್ರತ್ಯೇಕ ಹೋಟೆಲ್‌ನಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದರು.

ಇದೀಗ ಮೇ 23ರಿಂದ ಶ್ರೀಲಂಕಾ ವಿರುದ್ದ ಆರಂಭವಾಗಲಿರುವ ಐಸಿಸಿ ಕ್ರಿಕೆಟ್‌ ವಿಶ್ವಕಪ್ ಸೂಪರ್‌ ಲೀಗ್ ಸೀರಿಸ್‌ನಲ್ಲಿ ಪಾಲ್ಗೊಳ್ಳಲು ವೇಗಿ ಮುಷ್ತಾಫಿಜುರ್ ರೆಹಮಾನ್ ಹಾಗೂ ಶಕೀಬ್ ಅಲ್ ಹಸನ್ ಲಭ್ಯವಿರುವುದು ಖಚಿತವಾದಂತೆ ಆಗಿದೆ.

ಇದೀಗ ಶಕೀಬ್ ಅಲ್ ಹಸನ್ ಆಗಮನ ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತಷ್ಟು ಬಲಾಢ್ಯವನ್ನಾಗಿಸಿದೆ. ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಶಕೀಬ್ ಅಲ್ ಹಸನ್‌ ಬಹುತೇಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿಳಿಯುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಪರ ಮೂರನೇ ಕ್ರಮಾಂಕದಲ್ಲಿ ಶಕೀಬ್ 23 ಇನಿಂಗ್ಸ್‌ಗಳನ್ನಾಡಿ 58.85ರ ಸರಾಸರಿಯಲ್ಲಿ ಒಂದು ಶತಕ ಹಾಗೂ 11 ಅರ್ಧಶತಕ ಸಹಿತ 1,177 ರನ್ ಸಿಡಿಸಿದ್ದಾರೆ. 

ಬಾಂಗ್ಲಾದೇಶ ಸರಣಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ

ಲಂಕಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮೇ 23ರಿಂದ ಆರಂಭವಾಗಲಿದೆ. ಇದಾದ ಬಳಿಕ ಮೇ 25 ಹಾಗೂ 28ರಂದು ಉಳಿದೆರಡು ಪಂದ್ಯಗಳು ನಡೆಯಲಿದ್ದು, ಈ ಮೂರು ಏಕದಿನ ಪಂದ್ಯಗಳಿಗೆ ಢಾಕಾ ಮೈದಾನ ಆತಿಥ್ಯವನ್ನು ವಹಿಸಲಿದೆ.