Syed Mushtaq Ali Trophy Final: ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮಿಳುನಾಡಿಗೆ ಟ್ರೋಫಿ ಗೆಲ್ಲಿಸಿದ ಶಾರುಖ್ ಖಾನ್..!
* ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತಮಿಳುನಾಡು ಚಾಂಪಿಯನ್
* ಕರ್ನಾಟಕ ವಿರುದ್ದ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ತಮಿಳುನಾಡು
* ಕೊನೆಯ ಎಸೆತದಲ್ಲಿ ಸಿಕ್ಸರ್ ಚಚ್ಚಿ ತಂಡಕ್ಕೆ ಗೆಲುವು ತಂದಕೊಟ್ಟ ಶಾರುಖ್
ದೆಹಲಿ(ನ.22): 2021ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ (Syed Mushtaq Ali Trophy) ಕರ್ನಾಟಕ ಕ್ರಿಕೆಟ್ ತಂಡದ (Karnataka Cricket Team) ವಿರುದ್ದ 4 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ತಮಿಳುನಾಡು ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಯುವ ಬ್ಯಾಟರ್ ಶಾರುಕ್ ಖಾನ್ (Shahrukh Khan) ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮಿಳುನಾಡು ತಂಡದ ಪಾಲಿಗೆ ಹೀರೋ ಎನಿಸಿಕೊಂಡರು. ಇದರೊಂದಿಗೆ ತಮಿಳುನಾಡು ತಂಡವು ದಾಖಲೆಯ ಮೂರನೇ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶಾರುಕ್ ಖಾನ್ ಕೇವಲ 15 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸಿ ತಮಿಳುನಾಡು ತಂಡದ ಗೆಲುವಿನ ರೂವಾರಿ ಎನಿಸಿದರು.
ಕರ್ನಾಟಕ ನೀಡಿದ್ದ 152 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ತಮಿಳುನಾಡು ತಂಡ (Tamil Nadu Cricket Team) ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ 3.5 ಓವರ್‌ಗಳಲ್ಲಿ ತಮಿಳುನಾಡಿನ ಆರಂಭಿಕರಾದ ಹರಿ ನಿಶಾಂತ್ ಹಾಗೂ ಎನ್ ಜಗದೀಶನ್ ಜೋಡಿ 29 ರನ್‌ಗಳ ಜತೆಯಾಟವಾಡಿತು. ಕೇವಲ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 23 ರನ್ ಗಳಿಸಿದ್ದ ಹರಿ ನಿಶಾಂತ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಸಾಯಿ ಸುದರ್ಶನ್ 9 ರನ್ ಬಾರಿಸಿ ಕರುಣ್ ನಾಯರ್‌ಗೆ ವಿಕೆಟ್ ಒಪ್ಪಿಸಿದರು.
ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಜಗದೀಶನ್: ಎರಡು ವಿಕೆಟ್ ಪತನದ ಬಳಿಕ ಮೂರನೇ ವಿಕೆಟ್‌ಗೆ ನಾಯಕ ವಿಜಯ್ ಶಂಕರ್ ಜತೆ ಜಗದೀಶನ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ವಿಜಯ್ ಶಂಕರ್ (Vijay Shankar) 22 ಎಸೆತಗಳನ್ನು ಎದುರಿಸಿ ಒಂದೂ ಬೌಂಡರಿ ಬಾರಿಸದೇ 18 ರನ್ ಬಾರಿಸಿ ಕರಿಯಪ್ಪ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮರು ಎಸೆತದಲ್ಲೇ ಜಗದೀಶನ್ ಕೂಡಾ ಜೆ ಸುಚಿತ್‌ಗೆ (Jagadeesha Suchith) ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಎನ್ ಜಗದೀಶನ್ 46 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 41 ರನ್ ಬಾರಿಸಿ ಕರಿಯಪ್ಪಗೆ ಎರಡನೇ ಬಲಿಯಾದರು. ಕೊನೆಯಲ್ಲಿ ಸಂಜಯ್ ಯಾದವ್ 5 ರನ್ ಬಾರಿಸಿ ಪ್ರತೀಕ್ ಜೈನ್‌ಗೆ ವಿಕೆಟ್ ಒಪ್ಪಿಸಿದರು. ಎಂ ಮೊಹಮ್ಮದ್ ಕೂಡಾ 5 ಎಸೆತಗಳಲ್ಲಿ 5 ರನ್ ಬಾರಿಸಿ ವಿದ್ಯಾಧರ್ ಪಾಟೀಲ್‌ಗೆ ವಿಕೆಟ್ ಒಪ್ಪಿಸಿದರು.
ಕೊನೆಯ ಓವರ್‌ನಲ್ಲಿ ತಮಿಳುನಾಡು ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಪ್ರತೀಕ್ ಜೈನ್ ಎಸೆದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ಇನ್ನು ಮೂರನೇ ಎಸೆತದಲ್ಲಿ ವೈಡ್ ಎಸೆದರು. ಬಳಿಕ ಶಾರುಕ್ ಒಂದು ರನ್ ಗಳಿಸಿದರು. ಕೊನೆಯ 3 ಎಸೆತಗಳಲ್ಲಿ ತಮಿಳುನಾಡು ಗೆಲ್ಲಲು 9 ರನ್‌ಗಳ ಅಗತ್ಯವಿತ್ತು. 4ನೇ ಎಸೆತದಲ್ಲಿ ಸಾಯಿ ಕಿಶೋರ್ (Sai Kishore) ಒಂದು ರನ್ ಗಳಿಸಿದರು. ಕೊನೆಯ ಎರಡು ಎಸೆತಗಳಲ್ಲಿ 8 ರನ್‌ಗಳ ಅಗತ್ಯವಿತ್ತು. ಈ ವೇಳೆ ಪ್ರತೀಕ್ ಜೈನ್ ಮತ್ತೊಂದು ವೈಡ್ ಎಸೆದರು. ಇನ್ನು 5ನೇ ಎಸೆತದಲ್ಲಿ ಶಾರುಕ್ ಎರಡು ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ತಮಿಳುನಾಡು ಗೆಲ್ಲಲು 5 ರನ್‌ಗಳ ಅಗತ್ಯವಿತ್ತು. ಆದರೆ ಶಾರುಕ್ ಸಿಕ್ಸರ್ ಚಚ್ಚುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಉತ್ತಮ ಆರಂಭವನ್ನು ಪಡೆಯಲು ವಿಫಲವಾಯಿತು. ಇನಿಂಗ್ಸ್‌ನ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ರೋಹನ್ ಕದಂ (Rohan Kadam) ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ತಂಡ 32 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಆದರೆ ಅಭಿನವ್ ಮನೋಹರ್ (Abhinav Manohar) ಹಾಗೂ ಶರತ್ 4ನೇ ವಿಕೆಟ್‌ಗೆ 55 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅಭಿನವ್ ಮನೋಹರ್ 37 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 46 ರನ್ ಬಾರಿಸಿದರು.
ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಆಲ್ರೌಂಡರ್ ಪ್ರವೀಣ್ ದುಬೆ (Praveen Dubey) ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಜಗದೀಶ ಸುಚಿತ್ 7 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 18 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.