ಚೆನ್ನೈ(ಏ.22): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ನಡುವಿನ ಪಂದ್ಯ ರೋಚಕ ಅಂತ್ಯ ಕಂಡಿದ್ದು, ಎಂ. ಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡ 18 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮತ್ತೊಂದೆಡೆ ಪಂದ್ಯ ಸೋತರೂ ವಿರೋಚಿತ ಗೆಲುವು ಸಾಧಿಸಿದೆ.

ಸಿಎಸ್‌ಕೆ ನೀಡಿದ್ದ 221 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ ನೈಟ್‌ ರೈಡರ್ಸ್‌ ಒಂದು ಹಂತದಲ್ಲಿ 5.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 31 ರನ್‌ಗಳಿಸಿ ಹೀನಾಯ ಸೋಲಿನತ್ತ ಮುಖಮಾಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಂಡ್ರೆ ರಸೆಲ್‌ ಸಿಡಿಲಬ್ಬರದ ಅರ್ಧಶತಕ(22 ಎಸೆತಗಳಲ್ಲಿ 54 ರನ್), ದಿನೇಶ್ ಕಾರ್ತಿಕ್‌(24 ಎಸೆತಗಳಲ್ಲಿ 40 ರನ್‌) ಹಾಗೂ ಪ್ಯಾಟ್ ಕಮಿನ್ಸ್‌ ಅಜೇಯ(34 ಎಸೆತಗಳಲ್ಲಿ 66 ರನ್‌) ಅರ್ಧಶತಕದ ನೆರವಿನಿಂದ ಕೆಕೆಆರ್‌ ತಂಡ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತು. ಈ ಮೂವರು ಬ್ಯಾಟ್ಸ್‌ಮನ್‌ಗಳು ಒಟ್ಟು 11 ಬೌಂಡರಿ ಹಾಗೂ 14 ಮುಗಿಲೆತ್ತರದ ಸಿಕ್ಸರ್‌ ಬಾರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. 

ಪ್ಯಾಟ್ ಕಮಿನ್ಸ್ ಹೋರಾಟ ವ್ಯರ್ಥ; ಚೆನ್ನೈ ಸೂಪರ್‌ಕಿಂಗ್ಸ್‌ಗೆ ಹ್ಯಾಟ್ರಿಕ್ ಗೆಲುವು!

ಕೆಕೆಆರ್ ತಂಡದ ಪ್ರದರ್ಶನ ಸಹ ಮಾಲೀಕ ಶಾರುಕ್ ಖಾನ್‌ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಟ್ವೀಟ್‌ ಮೂಲಕ ರಸೆಲ್‌, ಕಮಿನ್ಸ್‌ ಹಾಗೂ ಕಾರ್ತಿಕ್‌ ಆಟಕ್ಕೆ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ಬ್ಯಾಟಿಂಗ್ ಪವರ್‌ ಪ್ಲೇ ಹೊರತುಪಡಿಸಿ ನಮ್ಮ ಹುಡುಗರು ಅತ್ಯುತ್ತಮವಾಗಿ ಆಡಿದರು. ರಸೆಲ್‌, ಕಮಿನ್ಸ್‌, ಕಾರ್ತಿಕ್‌ ಇದೇ ರೀತಿಯ ಪ್ರದರ್ಶನ ಮುಂದುವರೆಸಿ. ನಾವು ಕಮ್‌ ಬ್ಯಾಕ್‌ ಮಾಡುತ್ತೇವೆ ಎಂದು ಶಾರುಕ್ ಟ್ವೀಟ್‌ ಮಾಡಿದ್ದಾರೆ.

ಕೋಲ್ಕತ ನೈಟ್ ರೈಡರ್ಸ್ ತಂಡವು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಇದೀಗ ಹ್ಯಾಟ್ರಿಕ್ ಸೋಲು ಕಂಡಿದೆ. ಇಯಾನ್‌ ಮಾರ್ಗನ್ ನೇತೃತ್ವದ ಕೆಕೆಆರ್ ತಂಡವು ಮಾರ್ಚ್‌ 24ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.