T20 World Cup: ಬಲಿಷ್ಠ ಟೀಂ ಇಂಡಿಯಾ ವೈಫಲ್ಯಕ್ಕೆ ಕಾರಣವೇನು..?
ಟಿ20 ವಿಶ್ವಕಪ್ ಟೂರ್ನಿಯ ಸೆಮೀಸ್‌ನಿಂದಲೇ ಟೀಂ ಇಂಡಿಯಾ ಔಟ್
ಇಂಗ್ಲೆಂಡ್ ಎದುರು 10 ವಿಕೆಟ್ ಹೀನಾಯ ಸೋಲು ಕಂಡ ರೋಹಿತ್ ಶರ್ಮಾ ಪಡೆ
ಭಾರತ ತಂಡದ ಸೋಲಿಗೆ ಇವೆ ಹಲವು ಕಾರಣ
ಬೆಂಗಳೂರು(ನ.11): ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.1 ತಂಡವಾಗಿ ಶುರುವಾಗಿದ್ದು ಭಾರತದ ಟಿ20 ವಿಶ್ವಕಪ್ ಅಭಿಯಾನ. ಸೂಪರ್-12 ಹಂತದಲ್ಲಿ ‘ಗುಂಪು-2’ರ ಅಗ್ರಸ್ಥಾನಿ. 5 ಪಂದ್ಯಗಳ ಪೈಕಿ 4ರಲ್ಲಿ ಗೆಲುವು. 12 ತಂಡಗಳ ಪೈಕಿ ಗರಿಷ್ಠ ಗೆಲುವು, ಗರಿಷ್ಠ ಅಂಕ ಗಳಿಸಿದ ತಂಡ ಭಾರತ. ಅರೆ! ಅಂಕಿ- ಅಂಶಗಳಲ್ಲಿ ಇಷ್ಟೆಲ್ಲ ಬಲಾಢ್ಯವಾಗಿ ಕಂಡ ತಂಡ ಸೆಮಿಫೈನಲ್‌ನಲ್ಲಿ ದಯನೀಯವಾಗಿ ಸೋತದ್ದೇಕೆ? ತಂಡದ ವೈಫಲ್ಯಕ್ಕೇನು ಕಾರಣ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ.
1 ತಂಡ ಆಯ್ಕೆ ಎಡವಟ್ಟು: ಆಟಗಾರರ ಆಯ್ಕೆಯಲ್ಲೇ ಬಿಸಿಸಿಐ ಎಡವಿತ್ತು. ಲಯದಲ್ಲಿದ್ದ ಶುಭ್‌ಮನ್ ಗಿಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್ ಅಂಥವರನ್ನು ಆರಿಸದೆ ಉಪೇಕ್ಷಿಸಲಾಗಿತ್ತು. ಪದೇ ಪದೇ ವಿಫಲರಾದ ಕೆ.ಎಲ್. ರಾಹುಲ್, ದಿನೇಶ್ ಕಾರ್ತಿಕ್‌ಗೆ ಪರ್ಯಾಯ ಇರಲಿಲ್ಲ. ರಿಷಭ್ ಪಂತ್ ತಂಡದಲ್ಲಿದ್ದರೂ ಆಡಿದ್ದು 6ರಲ್ಲಿ ಕಡೆಯ 2 ಪಂದ್ಯ ಮಾತ್ರ. ಮೊನಚು ಕಳೆದುಕೊಂಡಿದ್ದ ಅಕ್ಷರ್ ಪಟೇಲ್ ಸ್ಥಾನಕ್ಕೆ ಟಿ20 ತಜ್ಞ ಯಜುವೇಂದ್ರ ಚಹಲ್‌ರನ್ನು ತರಲೇ ಇಲ್ಲ. ಭುವನೇಶ್ವರ್ ಕುಮಾರ್, ಮೊಹಮದ್ ಶಮಿ ಬಿಟ್ಟರೆ ಅನನುಭವಿ ಅರ್ಶದೀಪ್ ಮೇಲೆ ಅವಲಂಬನೆ ಹೆಚ್ಚಿತ್ತು. ವೇಗಿಗಳಲ್ಲೂ ಪರ್ಯಾಯ ಆಯ್ಕೆ ಇರಲಿಲ್ಲ.
2 ಆಲ್ರೌಂಡರ್‌ಗಳ ಕೊರತೆ: ಹಾರ್ದಿಕ್ ಪಾಂಡ್ಯ ಹೊರತುಪಡಿಸಿದರೆ, ಭಾರತ ತಂಡದಲ್ಲಿ ನೆಚ್ಚಿಕೊಳ್ಳಬಲ್ಲ ಸವ್ಯಸಾಚಿ ಒಬ್ಬನೂ ಇರಲಿಲ್ಲ. ರವೀಂದ್ರ ಜಡೇಜಾ ಅನುಪಸ್ಥಿತಿ ತಂಡದಲ್ಲಿ ಎದ್ದು ಕಾಣುತ್ತಿತ್ತು. ಆಲ್ರೌಂಡರ್‌ಗಳಿಂದ ತುಂಬಿ ತುಳುಕುತ್ತಿರುವ ಇಂಗ್ಲೆಂಡ್ ತಂಡದ ಅರ್ಧದಷ್ಟಾದರೂ ಸಮತೋಲನ ಭಾರತ ಹೊಂದಿದ್ದರೆ, ತಂಡದ ಸಾಮರ್ಥ್ಯ ಬೇರೆಯೇ ಇರುತ್ತಿತ್ತು. ಆಲ್ರೌಂಡರ್ ಆಗಿ ತಂಡ ಸೇರಿದ ದೀಪಕ್ ಹೂಡಾ ಸಿಕ್ಕ ಒಂದು ಅವಕಾಶದಲ್ಲೂ ಸೊನ್ನೆ ಸುತ್ತಿದ್ದೇ ಬಂತು. ಟಿ20ಯಂಥ ಮಾದರಿಗೆ ತಂಡದಲ್ಲಿ ಕನಿಷ್ಠ 2-3 ಜನ ಸಮರ್ಥ ಆಲ್ರೌಂಡರ್ ಇರಬೇಕು ಎಂಬುದು ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತಕ್ಕೆ ಪಾಠವಾಯಿತು.
3 ಸೂಪರ್ ಅಲ್ಲ ಸೂಪರ್-12: ಸೂಪರ್-12 ಹಂತದಲ್ಲಿ 5 ಪಂದ್ಯಗಳ ಪೈಕಿ ನಾಲ್ಕನ್ನು ಗೆದ್ದು ಗುಂಪು-2ರ ಅಗ್ರಸ್ಥಾನಿಯಾಯಿತಾದರೂ, ಭಾರತದ ಯಾವ ಗೆಲುವೂ ಅಧಿಕಾರಯುತವಾಗಿ ರಲಿಲ್ಲ. ಇನ್ನೂ ಕ್ರಿಕೆಟ್ ಶಿಶುಗಳಾಗಿಯೇ ಇರುವ ನೆದರ್ಲೆಂಡ್‌ಸ್, ಜಿಂಬಾಬ್ವೆ ವಿರುದ್ಧ ದೊಡ್ಡ ಗೆಲುವು ಸಾಧಿಸಿದ್ದು ಹೊರತುಪಡಿಸಿದರೆ, ಇತರೆ ಯಾವ ಪಂದ್ಯದಲ್ಲೂ ಭಾರತ ಸರ್ವಾಂಗೀಣವಾಗಿ ಸಶಕ್ತ, ಸಮರ್ಥ ಎನಿಸುವಂತಿರಲಿಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಕೊನೆ ಎಸೆತದಲ್ಲಿ ಗೆದ್ದು ಸೋಲಿನ ದವಡೆಯಿಂದ ಪಾರಾಗಿದ್ದ ಭಾರತ, ದ. ಆಫ್ರಿಕಾಕ್ಕಂತೂ ಸುಲಭವಾಗಿ ಶರಣಾಗಿತ್ತು.
T20 World Cup ಟೀಂ ಇಂಡಿಯಾ ಸೆಮೀಸ್ ಸೋಲಿಗೆ ಕಾರಣವೇನು?
4 ಆಕ್ರಮಣ, ಅಂತಿಮ ಸ್ಪರ್ಶ ಇಲ್ಲ: ಟಿ20 ಮಾದರಿಗೆ ಬೇಕಿರುವುದೇ ಆಕ್ರಮಣಶೀಲತೆ, ಗೆಲ್ಲಿಸುವ ಅಂತಿಮ ಸ್ಪರ್ಶ. ಟೂರ್ನಿಯುದ್ದಕ್ಕೂ ಅದು ತಂಡದಲ್ಲಿ ಕಾಣಲೇ ಇಲ್ಲ. ಅಂಕಿ-ಅಂಶವೇ ಇದಕ್ಕೆ ಉದಾಹರಣೆ. ವಿಶ್ವಕಪ್‌ಗೂ ಮೊದಲು ಟಿ20 ಪಂದ್ಯಗಳ ಪವರ್ -ಪ್ಲೇನಲ್ಲಿ ಭಾರತದ ರನ್ ರೇಟ್ 8.6 ರನ್ ಇತ್ತು. ಆದರೆ, ಆರಂಭಿಕರ ವೈಫಲ್ಯದಿಂದಾಗಿ ವಿಶ್ವಕಪ್‌ನಲ್ಲಿ ಪವರ್‌ಪ್ಲೇ ರನ್‌ರೇಟ್ 6ಕ್ಕೆ ಕುಸಿಯಿತು. ಇದರಿಂದಾಗಿ ದೊಡ್ಡ ಮೊತ್ತ ಪೇರಿಸುವ ಒತ್ತಡ ಮಧ್ಯಮ ಕ್ರಮಾಂಕಕ್ಕೆ ಬಿತ್ತು. ತಂಡಕ್ಕೆ ಅತ್ಯಂತ ದುಬಾರಿ ಆದದ್ದೇ ಸ್ಫೋಟಕ ಆರಂಭ ಸಿಗದ ಕಾರಣ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗದಿದ್ದದ್ದು.
5 ಮೊನಚು ಇಲ್ಲದ ಬೌಲಿಂಗ್: ಗಾಯಾಳುಗಳಾದ ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ ಅನುಪಸ್ಥಿತಿ ಭಾರತವನ್ನು ಇನ್ನಿಲ್ಲದಂತೆ ಕಾಡಿತು. ಆಸ್ಟ್ರೇಲಿಯಾದ ವೇಗದ ಪಿಚ್‌ಗಳ ಸಂಪೂರ್ಣ ಲಾಭ ಎತ್ತಲು ಭುವನೇಶ್ವರ್, ಶಮಿ, ಅರ್ಶದೀಪ್ ಅಸಮರ್ಥರಾದರು. ಉಮೇಶ್ ಯಾದವ್, ದೀಪಕ್ ಚಹರ್, ಸಿದ್ಧಾರ್ಥ್ ಠಾಕೂರ್‌ರಂತಹ ಒಂದೂ ಪರ್ಯಾಯ ಬೌಲಿಂಗ್ ಆಯ್ಕೆ ಭಾರತದ ಬಳಿ ಇರಲಿಲ್ಲ. ಅಶ್ವಿನ್ ಹೊರತುಪಡಿಸಿದರೆ ಭಾರತದ ಬಳಿ ಸೂಕ್ತ ಸ್ಪಿನ್ ಆಯ್ಕೆಯೇ ಇರಲಿಲ್ಲ. ಇದ್ದರೂ ಎದುರಾಳಿಯನ್ನು ಅಪಾಯಕ್ಕೆ ಸಿಲಕಿಸುವಷ್ಟು ಮೊನಚು ಕಾಣಲಿಲ್ಲ.