ನವದೆಹಲಿ(ಜ.19): ಇಂಗ್ಲೆಂಡ್‌ ವಿರುದ್ಧದ 4 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಿಗೆ ಮಂಗಳವಾರ ಭಾರತ ತಂಡದ ಆಯ್ಕೆ ನಡೆಯಲಿದೆ. ಐವರು ಆಯ್ಕೆ ಸಮಿತಿ ಸದಸ್ಯರು, ನಾಯಕ ವಿರಾಟ್‌ ಕೊಹ್ಲಿ ಆನ್‌ಲೈನ್‌ ಮೂಲಕ ಸಭೆ ನಡೆಸಿ ತಂಡದ ಆಯ್ಕೆ ನಡೆಸಲಿದ್ದಾರೆ. 

ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಚೇತನ್‌ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಇಂದು(ಜ.19) ಸಂಜೆ 5 ಗಂಟೆಗೆ ಸಭೆ ಸೇರಲು ಸಮಯ ನಿಗದಿಯಾಗಿದೆ. ಇನ್ನು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಅನುಭವಿ ಬೌಲರ್‌ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ಜಸ್ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಆಯ್ಕೆ ಸಮಿತಿ ಚರ್ಚೆ ನಡೆಸಲಿದೆ ಎನ್ನಲಾಗಿದೆ. ಈ ಇಬ್ಬರು ಬೌಲರ್‌ಗಳು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

ಬ್ರಿಸ್ಬೇನ್‌ ಟೆಸ್ಟ್‌: ಗಿಲ್ ಆಕರ್ಷಕ ಫಿಫ್ಟಿ, ಆಸೀಸ್‌ಗೆ ಟೀಂ ಇಂಡಿಯಾ ತಿರುಗೇಟು

ಇನ್ನುಳಿದಂತೆ ಆಸೀಸ್ ಪ್ರವಾಸದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿರುವ ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ ಫಿಟ್ನೆಸ್‌ ವರದಿಯನ್ನು ಬಿಸಿಸಿಐ ಆಯ್ಕೆ ಸಮಿತಿ ಎದುರು ನೋಡುತ್ತಿದೆ. ಬೌಲಿಂಗ್‌ ವಿಭಾಗದಲ್ಲಿ ಸಹಜವಾಗಿಯೇ ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್‌ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಆದರೆ ಆಸೀಸ್‌ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿರುವ ಮೊಹಮ್ಮದ್ ಸಿರಾಜ್, ಟಿ. ನಟರಾಜನ್ ಹಾಗೂ ಶಾರ್ದೂಲ್‌ ಠಾಕೂರ್‌ ಅವರನ್ನು ಏನು ಮಾಡಬೇಕು ಎನ್ನುವ ತಲೆನೋವು ಆಯ್ಕೆಗಾರರಿಗೆ ಶುರುವಾಗಿದೆ. 

ಫೆ.5ರಿಂದ 9ರವರೆಗೆ ಚೆನ್ನೈನಲ್ಲಿ ಮೊದಲ ಟೆಸ್ಟ್‌ ನಡೆಯಲಿದೆ, ಇನ್ನು ಎರಡನೇ ಟೆಸ್ಟ್ ಪಂದ್ಯ ಕೂಡಾ ಚೆನ್ನೈನಲ್ಲೇ  ಫೆಬ್ರವರಿ 13 ರಿಂದ 17ರವರೆಗೆ ಜರುಗಲಿದೆ.