ಬ್ರಿಸ್ಬೇನ್ ಟೆಸ್ಟ್: ಗಿಲ್ ಆಕರ್ಷಕ ಫಿಫ್ಟಿ, ಆಸೀಸ್‌ಗೆ ಟೀಂ ಇಂಡಿಯಾ ತಿರುಗೇಟು
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಕೊನೆಯ ದಿನದಾಟ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬ್ರಿಸ್ಬೇನ್(ಜ.19): ಭಾರತ-ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಪಂದ್ಯ ಮತ್ತಷ್ಟು ರೋಚಕ ಘಟ್ಟದತ್ತ ಸಮೀಪಿಸಿದ್ದು, ಫಲಿತಾಂಶ ಏನೂ ಬೇಕಾದರೂ ಆಗಬಹುದು ಎನ್ನುವಷ್ಟರ ಮಟ್ಟಿಗೆ ರೋಚಕತೆ ಹೆಚ್ಚಾಗಿದೆ. ಐದನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು 83 ರನ್ ಬಾರಿಸಿದ್ದು, ಇನ್ನೂ ಗೆಲ್ಲಲು 245 ರನ್‌ಗಳ ಅಗತ್ಯವಿದೆ.
ಹೌದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾ ತಂಡವು ಭಾರತಕ್ಕೆ 328 ರನ್‌ಗಳ ಗುರಿ ನೀಡಿತ್ತು. ನಾಲ್ಕನೇ ದಿನದಾಟದಂತ್ಯದ ವೇಳೆಗೆ ಮಳೆ ಅಡ್ಡಿಪಡಿಸಿದ್ದರಿಂದ ಭಾರತ ವಿಕೆಟ್ ನಷ್ಟವಿಲ್ಲದೇ ಕೇವಲ 4 ರನ್ ಬಾರಿಸಿತ್ತು. 5ನೇ ದಿನದಾಟದ ಆರಂಭದಲ್ಲೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೇವಲ 7 ರನ್ ಬಾರಿಸಿ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಟೀಂ ಇಂಡಿಯಾ ಆತಂಕಕ್ಕೆ ಒಳಗಾಗಿತ್ತು.
ಗಿಲ್-ಪೂಜಾರ ಜುಗಲ್ಬಂದಿ: ಕೇವಲ 18 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದ ಟೀಂ ಇಂಡಿಯಾಗೆ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಎರಡನೇ ವಿಕೆಟ್‌ಗೆ ಮುರಿಯದ 65 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲ ಸರಣಿ ಆಡುತ್ತಿರುವ ಪಂಜಾಬ್ ಮೂಲದ ಗಿಲ್ ಎರಡನೇ ಅರ್ಧಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಸದ್ಯ ಗಿಲ್ 117 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 64 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದರೆ, ಪೂಜಾರ 90 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸಿರಾಜ್ ಬಿರುಗಾಳಿ; ಬ್ರಿಸ್ಬೇನ್ ಟೆಸ್ಟ್ ಗೆಲ್ಲಲು ಟೀಂ ಇಂಡಿಯಾಗೆ 328 ರನ್ ಗುರಿ
ಕೊನೆಯ ದಿನದಾಟದ ಇನ್ನೆರಡು ಸೆಷನ್‌ಗಳಲ್ಲಿ 62 ಓವರ್‌ಗಳು ಬಾಕಿಯಿದ್ದು, ಭಾರತ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳಲು ಇನ್ನೂ 245 ರನ್‌ಗಳ ಅಗತ್ಯವಿದೆ. ಪ್ರತಿ ಓವರ್‌ನಲ್ಲಿ 4ರ ಸರಾಸರಿಯಲ್ಲಿ ರನ್ ಗಳಿಸಿದರೆ ಟೀಂ ಇಂಡಿಯಾ ಅನಾಯಾಸವಾಗಿ ಗೆಲುವು ದಾಖಲಿಸಬಹುದಾಗಿದೆ. ಈಗಾಗಲೇ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದು, ಸಿಡ್ನಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಬ್ರಿಸ್ಬೇನ್ ಟೆಸ್ಟ್ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 369&294
ಭಾರತ: 336&83/1
ಶುಭ್‌ಮನ್ ಗಿಲ್: 64*
ಪ್ಯಾಟ್ ಕಮಿನ್ಸ್: 7/1
(* 5ನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ)