ಮುಂಬೈ(ಅ.18): ಬ್ರೆಟ್‌ ಲೀ ಎಸೆತಕ್ಕೆ ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹ್ವಾಗ್‌ ಮತ್ತೆ ಬೌಂಡರಿ, ಸಿಕ್ಸರ್‌ ಸಿಡಿಸಲಿದ್ದಾರೆ. ಬ್ರಿಯಾನ್‌ ಲಾರಾ, ತಿಲಕರತ್ನೆ ದಿಲ್ಶಾನ್‌ರ ಬ್ಯಾಟಿಂಗ್‌ ವೈಭವವನ್ನು ಅಭಿಮಾನಿಗಳು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ. ಜಾಂಟಿ ರೋಡ್ಸ್‌ರ ಫೀಲ್ಡಿಂಗ್‌ ರೋಚಕತೆ ಹುಟ್ಟಿಹಾಕಲಿದೆ. ಈ ದಿಗ್ಗಜರ ಜತೆ ಇನ್ನೂ ಹಲವು ಕ್ರಿಕೆಟ್‌ ತಾರೆಯರು 2020ರ ಫೆಬ್ರವರಿಯಲ್ಲಿ ಒಟ್ಟಾಗಿ ಮೈದಾನಕ್ಕಿಳಿಯಲಿದ್ದಾರೆ. ಇದು ಸಾಮಾನ್ಯ ಟೂರ್ನಿಯಲ್ಲ, ಬದಲಿಗೆ ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಲು ಆಯೋಜಿಸುತ್ತಿರುವ ವಿಶ್ವ ಸೀರೀಸ್‌.

ಗುರುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಿತು. ಫೆ.4ರಿಂದ 16ರ ವರೆಗೂ ಮುಂಬೈ, ಪುಣೆಯಲ್ಲಿ ಮೊದಲ ಆವೃತ್ತಿ ನಡೆಯಲಿದ್ದು, ಪ್ರತಿ ವರ್ಷ ಈ ಟೂರ್ನಿ ಆಯೋಜಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.

ಇಂಡೋ-ಪಾಕ್ ಸರಣಿ ಬಗ್ಗೆ ಮೋದಿ, ಇಮ್ರಾನ್ ಕೇಳಿ

ಟೂರ್ನಿ ಉದ್ದೇಶ?: ಭಾರತದಲ್ಲಿ ಪ್ರತಿ 4 ನಿಮಿಷಕ್ಕೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಅಪಘಾತದಿಂದ ಜೀವ ಕಳೆದುಕೊಳ್ಳುತ್ತಾರೆ. ಕ್ರಿಕೆಟ್‌ ಆಟವನ್ನು ಧರ್ಮವಾಗಿ ಪಾಲಿಸುವ ದೇಶದಲ್ಲಿ, ಕ್ರಿಕೆಟಿಗರಿಂದ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಸುನಿಲ್‌ ಗವಾಸ್ಕರ್‌ ಸಹ ಮಾಲಿಕತ್ವದ ಪಿಎಂಜಿ ಸಂಸ್ಥೆ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳು ಮುಂದಾಗಿವೆ. ಸ್ವತಃ ಗವಾಸ್ಕರ್‌ ಈ ಲೀಗ್‌ನ ಆಯುಕ್ತರಾಗಿದ್ದು, ಸಚಿನ್‌ ಪ್ರಚಾರ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಟೂರ್ನಿಯಿಂದ ಸಂಗ್ರಹವಾಗುವ ಹಣವನ್ನು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ, ರಸ್ತೆ ಸುರಕ್ಷತೆ ಹೆಚ್ಚಿಸಲು ಶ್ರಮಿಸುತ್ತಿರುವ ಸಂಸ್ಥೆಗಳಿಗೆ ದೇಣಿಗೆ ರೂಪದಲ್ಲಿ ನೀಡಲಾಗುತ್ತದೆ ಎಂದು ಟೂರ್ನಿ ಆಯೋಜಕರಲ್ಲಿ ಪ್ರಮುಖರಾದ ಥಾಣೆಯ ಆರ್‌ಟಿಒ ಮುಖ್ಯಸ್ಥ ರವಿ ಗಾಯಕ್ವಾಡ್‌ ತಿಳಿಸಿದರು.

ಟೂರ್ನಿ ಮಾದರಿ ಹೇಗೆ?

ಭಾರತ, ಆಸ್ಪ್ರೇಲಿಯಾ, ವೆಸ್ಟ್‌ಇಂಡೀಸ್‌, ದ.ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳ ಒಟ್ಟು 75ಕ್ಕೂ ಹೆಚ್ಚು ದಿಗ್ಗಜ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ತಂಡವನ್ನು ಸೆಹ್ವಾಗ್‌, ವಿಂಡೀಸ್‌ ತಂಡವನ್ನು ಲಾರಾ, ದ.ಆಫ್ರಿಕಾವನ್ನು ರೋಡ್ಸ್‌, ಲಂಕಾವನ್ನು ದಿಲ್ಶಾನ್‌ ಹಾಗೂ ಆಸ್ಪ್ರೇಲಿಯಾವನ್ನು ಬ್ರೆಟ್‌ ಲೀ ಮುನ್ನಡೆಸಲಿದ್ದಾರೆ. 5 ತಂಡಗಳನ್ನು ವಿವಿಧ ಸಂಸ್ಥೆಗಳು ಖರೀದಿಸಿದ್ದು ಖರ್ಚು,ವೆಚ್ಚ ನಿಭಾಯಿಸಲಿವೆ.

70ರ ವಿಂಡೀಸ್‌, 90 ಆಸೀಸ್‌ನಷ್ಟೇ ಭಾರತ ಟೆಸ್ಟ್‌ ತಂಡ ಬಲಿಷ್ಠ

ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ರತಿ ತಂಡ ಉಳಿದ ತಂಡದ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದ್ದು, ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ. ಒಟ್ಟು 11 ಪಂದ್ಯಗಳು ನಡೆಯಲಿವೆ.

ದೇಶದ ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮತ್ತೊಮ್ಮೆ ಮೈದಾನಕ್ಕಿಳಿಯಲು ಕಾತರಿಸುತ್ತಿದ್ದೇನೆ. ಜಹೀರ್‌ ಖಾನ್‌, ಆರ್‌.ಪಿ.ಸಿಂಗ್‌, ಅಜಿತ್‌ ಅಗರ್ಕರ್‌ ಸೇರಿದಂತೆ ಇನ್ನೂ ಅನೇಕರು ಭಾರತ ತಂಡದಲ್ಲಿ ಆಡಲಿದ್ದಾರೆ.

- ಸಚಿನ್‌ ತೆಂಡುಲ್ಕರ್‌, ಟೂರ್ನಿ ರಾಯಭಾರಿ

ಜನರು ಜವಾಬ್ದಾರಿ ಮರೆತು ಚಾಲನೆ ಮಾಡುತ್ತಿದ್ದಾರೆ. ಶಿಸ್ತು ಎನ್ನುವುದು ಇಲ್ಲವೇ ಇಲ್ಲ. ಇಷ್ಟೊಂದು ಕ್ರಿಕೆಟಿಗರು ಒಟ್ಟಿಗೆ ಸೇರಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗುತ್ತಿರುವುದು ಸಂತಸದ ವಿಚಾರ.

- ಸುನಿಲ್‌ ಗವಾಸ್ಕರ್‌, ಟೂರ್ನಿ ಆಯುಕ್ತ