IPL 2023 ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೇಟಿಯಾಗೋಣ: RCB ಫ್ಯಾನ್ಸ್ಗೆ ಮ್ಯಾಕ್ಸ್‌ವೆಲ್ ಸ್ಪೆಷಲ್ ಮೆಸೇಜ್..!
16ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 31ರಿಂದ ಆರಂಭ
ಐಪಿಎಲ್‌ಗೆ ಭರ್ಜರಿ ತಯಾರಿ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರ್‌ಸಿಬಿ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
ಬೆಂಗಳೂರು(ಮಾ.25): 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಎಲ್ಲಾ 10 ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇನ್ನು ಅದೇ ರೀತಿ ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೂಡಾ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯಲು ರೆಡಿಯಾಗಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ತಮ್ಮ ಅಭಿಮಾನಿಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೇಟಿಯಾಗೋಣ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್‌ಬಾಕ್ಸಿಂಗ್ ಕಾರ್ಯಕ್ರಮವು ಮಾರ್ಚ್ 26ರಂದು ನಡೆಯಲಿದೆ. ಈ ವಿಶೇಷ ದಿನಕ್ಕೂ ಮುನ್ನ ಆರ್‌ಸಿಬಿ ತಂಡವನ್ನು ಕೂಡಿಕೊಂಡಿರುವ ಮ್ಯಾಕ್ಸ್‌ವೆಲ್, ತಮ್ಮ ಗಾಯದ ಸಮಸ್ಯೆಯು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಕೂಡಿಕೊಂಡ ಬಳಿಕ ಮಾತನಾಡಿರುವ ಗ್ಲೆನ್ ಮ್ಯಾಕ್ಸ್‌ವೆಲ್, "ಕಳೆದ ಕೆಲ ವರ್ಷಗಳ ಬಳಿಕ ಎಲ್ಲರೂ ಮಾತನಾಡಿಕೊಳ್ಳುತ್ತಿದ ಘಳಿಗೆ ಕೊನೆಗೂ ಬಂದಿದೆ. ಇದೀಗ ತವರಿನಲ್ಲಿ ಮೊದಲ ಪಂದ್ಯವನ್ನಾಡಲು ಉತ್ಸುಕರಾಗಿದ್ದೇವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತುಂಬಿದ ಪ್ರೇಕ್ಷಕರ ಸಮ್ಮುಖದಲ್ಲಿ ಕೊನೆಗೂ ಪಂದ್ಯವನ್ನಾಡುವ ಕಾಲ ಬಂದಿದೆ. ನಾವೆಲ್ಲರೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೇಟಿಯಾಗೋಣ" ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
IPL 2023 'ಎಂಟರ್‌ಟೈನ್‌ಮೆಂಟ್ ಅಧಿಕೃತ ಆರಂಭ': ಆರ್‌ಸಿಬಿ ಕೂಡಿಕೊಂಡ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್..!
ಇನ್ನು ತಮ್ಮ ಗಾಯದ ಸಮಸ್ಯೆಯ ಬಗ್ಗೆ ಮಾತನಾಡಿರುವ ಮ್ಯಾಕ್ಸಿ, " ಸದ್ಯ ನನ್ನ ಕಾಲು ಈಗ ಸರಿಯಾಗಿದೆ. ನಾನು 100% ಫಿಟ್ ಆಗಲು ಇನ್ನು ಕೆಲಕಾಲ ಸಮಯ ಬೇಕಾಗಬಹುದು. ಈ ಟೂರ್ನಿಮೆಂಟ್‌ಗೆ ಸಾಕಾಗುವಷ್ಟು ಫಿಟ್ನೆಸ್ ನನ್ನಲ್ಲಿ ಇದೆ ಎನ್ನುವ ವಿಶ್ವಾಸದಲ್ಲಿದ್ದೇನೆ" ಎಂದು ತಾರಾ ಆಲ್ರೌಂಡರ್ ಹೇಳಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್, ಇದೀಗ ಮುಂಬರುವ ಐಪಿಎಲ್ ಟೂರ್ನಿಗೆ ಈಗಾಗಲೇ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಆರ್‌ಸಿಬಿ ಫ್ರಾಂಚೈಸಿಯು ಮ್ಯಾಕ್ಸ್‌ವೆಲ್ ಅವರಿಂದ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. 2021ರಲ್ಲಿ ಆರ್‌ಸಿಬಿ ತಂಡ ಕೂಡಿಕೊಂಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, ತಂಡದ ಪರ 43ರ ಬ್ಯಾಟಿಂಗ್ ಸರಾಸರಿಯಲ್ಲಿ 521 ರನ್ ಸಿಡಿಸಿ ಅಬ್ಬರಿಸಿದ್ದರು. ಇನ್ನು ಉಪಯುಕ್ತ ಆಫ್‌ಸ್ಪಿನ್ನರ್ ಆಗಿರುವ ಮ್ಯಾಕ್ಸ್‌ವೆಲ್, ಈಗಾಗಲೇ ಐಪಿಎಲ್‌ನಲ್ಲಿ 28 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್‌ಗೇರುವಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮಹತ್ತರ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಬಾರಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಟ್ರೋಫಿ ಬರವನ್ನು ನೀಗಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕಳೆದ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಆಟಗಾರರ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು, ರೀಸೆ ಟೋಪ್ಲೆ, ವಿಲ್ ಜ್ಯಾಕ್ಸ್ ಅವರಂತಹ ತಾರಾ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸಿತ್ತು. ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ವಿಲ್ ಜ್ಯಾಕ್ಸ್, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ವಿಲ್ ಜ್ಯಾಕ್ಸ್ ಬದಲಿಗೆ ನ್ಯೂಜಿಲೆಂಡ್ ತಾರಾ ಆಲ್ರೌಂಡರ್ ಮಿಚೆಲ್ ಬ್ರೇಸ್‌ವೆಲ್‌ಗೆ ಆರ್‌ಸಿಬಿ ತಂಡದಲ್ಲಿ ಮಣೆಹಾಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಪ್ರಿಲ್ 02ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಐಪಿಎಲ್ ಅಭಿಯಾನವನ್ನು ಆರಂಭಿಸಲಿದೆ.