ಬೆಂಗಳೂರು[ನ.20]: ಕೆಪಿಎಲ್‌ನಲ್ಲಿ ನಡೆದಿದೆ ಎನ್ನಲಾಗಿರುವ ಬೆಟ್ಟಿಂಗ್‌ ಮತ್ತು ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ), ಎಲ್ಲಾ ಕೆಪಿಎಲ್‌ ತಂಡದ ಮಾಲಿಕರು, ಕೆಲ ಆಟಗಾರರು ಹಾಗೂ ಮ್ಯಾನೇಜರ್‌ಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಬುಲಾವ್‌ ನೀಡಿದೆ.

"

ಈ ಪ್ರಕರಣದಲ್ಲಿ ನಾಲ್ವರು ಆಟಗಾರರು ಸೇರಿದಂತೆ ಎಂಟು ಮಂದಿ ಬಂಧನವಾಗಿದ್ದು, ತಲೆಮರೆಸಿಕೊಂಡಿರುವ ಬಳ್ಳಾರಿ ತಂಡದ ಮಾಲಿಕನಿಗೆ ತನಿಖಾಧಿಕಾರಿಗಳು ಲುಕ್‌ಔಟ್‌ ನೋಟಿಸ್‌ ಸಹ ಜಾರಿಗೊಳಿಸಿದ್ದಾರೆ. ಇತ್ತ ಬೆಟ್ಟಿಂಗ್‌ ಜಾಲದ ಶೋಧ ಕಾರ್ಯ ಮುಂದುವರೆಸಿರುವ ಪೊಲೀಸರು, ಶಂಕೆ ಮೇರೆಗೆ ವಿಚಾರಣೆಗೆ ಬರುವಂತೆ ಕೆಲವು ಆಟಗಾರರಿಗೆ ನೋಟಿಸ್‌ ಕೊಟ್ಟಿದ್ದಾರೆ.

IPL 2020 ಅರ್ಧಕ್ಕರ್ಧ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ RCB..!

ಕೆಪಿಎಲ್‌ ನಿರ್ವಹಣೆ ಕುರಿತು ಮಾಹಿತಿ ಪಡೆಯಲು ರಾಜ್ಯ ಕ್ರಿಕೆಟ್‌ ಸಂಸ್ಥೆ, ಕೆಪಿಎಲ್‌ ತಂಡಗಳ ಮಾಲಿಕರು ಹಾಗೂ ವ್ಯವಸ್ಥಾಪಕರಿಗೆ ವಿಚಾರಣೆಗೆ ಬರುವಂತೆ ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ 18 ಅಂಶಗಳನ್ನು ಉಲ್ಲೇಖಿಸಿರುವ ಸಿಸಿಬಿ, ಇವುಗಳಿಗೆ ಲಿಖಿತವಾಗಿ ಉತ್ತರ ನೀಡುವಂತೆ ಸಹ ಕೆಎಸ್‌ಸಿಎ ಮತ್ತು ಕೆಪಿಎಲ್‌ ತಂಡದ ಮಾಲಿಕರಿಗೆ ನೋಟಿಸ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ವಿಚಾರಣೆ ಬಳಿಕ ಮ್ಯಾಚ್‌ ಫಿಕ್ಸಿಂಗ್‌ ಕೃತ್ಯಕ್ಕೆ ಮತ್ತಷ್ಟುಮಹತ್ವದ ಸಂಗತಿಗಳು ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಸಿಸಿಬಿ ಡಿಸಿಪಿ ಕುಲದೀಪ್‌.ಆರ್‌.ಕುಮಾರ್‌ ಜೈನ್‌ ಅವರು, ‘ತನಿಖೆಗೆ ಅಗತ್ಯವಿರುವ ಕೆಪಿಎಲ್‌ ತಂಡಗಳ ಆಟಗಾರರು ಹಾಗೂ ಮ್ಯಾನೇಜರ್‌ ಸೇರಿದಂತೆ ಕೆಲವರಿಗೆ ನೋಟಿಸ್‌ ನೀಡಲಾಗಿದೆ. ಆದರೆ ತನಿಖೆ ದೃಷ್ಟಿಯಿಂದ ಅವರ ಹೆಸರು ಬಹಿರಂಗಪಡಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ನೋಟಿಸ್‌ ಮೇರೆಗೆ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಅಗತ್ಯಬಿದ್ದರೆ ಮುಂದಿನ ಕಾನೂನು ಪ್ರಕ್ರಿಯೆಗೂ ಸಹ ಒಳಪಡಿಸಲಾಗುತ್ತದೆ ಎಂದು ಅವರು ಹೇಳಿದರು.

KPL ಫಿಕ್ಸಿಂಗ್: ಸಿಸಿಬಿಯಿಂದ ಅಂತಾರಾಷ್ಟ್ರೀಯ ಬುಕ್ಕಿಯ ಬಂಧನ

ತಂಡಗಳು, ಖರ್ಚು-ವೆಚ್ಚದ ಮಾಹಿತಿ ಕೇಳಿದ್ದಾರೆ: ಕೆಎಸ್‌ಸಿಎ

ನೋಟಿಸ್‌ ಬಂದಿರುವ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿರುವ ಕೆಎಸ್‌ಸಿಎ ಖಜಾಂಚಿ ವಿನಯ್‌ ಮೃತ್ಯುಂಜಯ, ‘ಕೆಪಿಎಲ್‌ನಲ್ಲಿ ನಡೆದಿರುವ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಪ್ರಕರಣದ ತನಿಖೆಗಾಗಿ ಟೂರ್ನಿಯಲ್ಲಿ ಎಷ್ಟುತಂಡಗಳು ಆಡಿದ್ದವು, ಯಾವೆಲ್ಲಾ ಆಟಗಾರರು ಭಾಗವಹಿಸಿದ್ದರು, ಟೂರ್ನಿಯ ಖರ್ಚು-ವೆಚ್ಚ ಸೇರಿದಂತೆ ಇತರೆ ಅಂಶಗಳನ್ನು ಒಳಗೊಂಡಿರುವ ಮಾಹಿತಿಯನ್ನು ಸಿಸಿಬಿ ಪೊಲೀಸರು ಕೇಳಿದ್ದಾರೆ.

ಈಗಾಗಲೇ ಮಂಗಳವಾರ ಕೆಲ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿದೆ. ಬುಧವಾರದೊಳಗೆ ಪೊಲೀಸರಿಗೆ ಬೇಕಿರುವ ಎಲ್ಲಾ ಮಾಹಿತಿಯನ್ನು ನೀಡಲಾಗುವುದು’ ಎಂದು ಹೇಳಿದ್ದಾರೆ. ಪ್ರಕರಣದ ತನಿಖೆಗೆ ಸಿಸಿಬಿ ಪೊಲೀಸರಿಗೆ ಕೆಎಸ್‌ಸಿಎ ಸಂಪೂರ್ಣ ನೆರವು ನೀಡಲಿದೆ ಎಂದೂ ಅವರು ತಿಳಿಸಿದ್ದಾರೆ.