ಜಿಂಬಾಬ್ವೆ ವಿಶ್ವಕಪ್ ಕನಸನ್ನು ಛಿದ್ರಗೊಳಿಸಿದ ಸ್ಕಾಟ್ಲೆಂಡ್..! ಪ್ರಧಾನ ಸುತ್ತಿಗೇರುವ 10ನೇ ತಂಡ ಯಾವುದು..?:
ಭಾರತದಲ್ಲಿ ವಿಶ್ವಕಪ್ ಅಡಬೇಕೆನ್ನುವ ಜಿಂಬಾಬ್ವೆ ಕನಸು ಭಗ್ನ
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸೋಲುಂಡ ಜಿಂಬಾಬ್ವೆ
ವಿಶ್ವಕಪ್ ಪ್ರಧಾನ ಸುತ್ತಿಗೇರಲು ಸ್ಕಾಟ್ಲೆಂಡ್-ನೆದರ್‌ಲೆಂಡ್ಸ್ ನಡುವೆ ಫೈಟ್
ಹರಾರೆ(ಜು.05): ಸತತ 2ನೇ ಬಾರಿಗೆ ಏಕದಿನ ವಿಶ್ವಕಪ್‌ಗೆ ಪ್ರವೇಶಿಸಲು ಜಿಂಬಾಬ್ವೆ ವಿಫಲವಾಗಿದೆ. ಅರ್ಹತಾ ಸುತ್ತಿನ ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿದ್ದ ಜಿಂಬಾಬ್ವೆ, ಸೂಪರ್-6 ಹಂತದಲ್ಲಿ ಸತತ 2 ಸೋಲು ಕಂಡ ಪರಿಣಾಮ ಪ್ರಧಾನ ಟೂರ್ನಿಗೇರುವ ಅವಕಾಶ ಕೈಚೆಲ್ಲಿತು.
ಮಂಗಳವಾರ ನಡೆದ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ 31 ರನ್ ಸೋಲು ಕಂಡಿತು. ಸ್ಕಾಟ್ಲೆಂಡ್ 8 ವಿಕೆಟ್‌ಗೆ 234 ರನ್ ಗಳಿಸಿತು. ಸುಲಭ ಗುರಿ ಪಡೆದ ಜಿಂಬಾಬ್ವೆಯನ್ನು ಸ್ಕಾಟ್ಲೆಂಡ್ ವೇಗಿ ಕ್ರಿಸ್ ಸೋಲ್ ಕಟ್ಟಿಹಾಕಿದರು. 37 ರನ್‌ಗೆ 4 ವಿಕೆಟ್ ಕಳೆದುಕೊಂಡ ಜಿಂಬಾಬ್ವೆ, ಸಿಕಂದರ್ ರಾಜಾ(34), ವೆಸ್ಲೆ ಮಧೆವೆರೆ(40), ರ್‍ಯಾನ್ ಬರ್ಲ್(83)ರ ಹೋರಾಟದ ಹೊರತಾಗಿಯೂ 41.1 ಓವರಲ್ಲಿ 203 ರನ್‌ಗೆ ಆಲೌಟ್ ಆಯಿತು.
ಈ ಜಯದೊಂದಿಗೆ ಸ್ಕಾಟ್ಲೆಂಡ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದು, ವಿಶ್ವಕಪ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ. ನೆದರ್‌ಲೆಂಡ್ಸ್ ವಿರುದ್ಧ ಪಂದ್ಯ ಬಾಕಿ ಇದ್ದು, ಆ ಪಂದ್ಯದಲ್ಲಿ ಸೋತರೂ ನೆಟ್ ರನ್‌ರೇಟ್ ಕಾಪಾಡಿಕೊಂಡರೆ ವಿಶ್ವಕಪ್ ಪ್ರವೇಶ ಸಲೀಸಾಗಲಿದೆ.
ಭಾರತೀಯ ಬ್ಯಾಟರ್ಗಳ ಚಿಂತೆ ಹೆಚ್ಚಿಸಿರೋ ಪಾಕ್ ಡೆಲ್ಲಿ ವೇಗಿ ಅಫ್ರಿದಿ ..!
ಸತತ ಎರಡನೇ ಬಾರಿಗೆ ಜಿಂಬಾಬ್ವೆಗೆ ಫೈನಲ್‌ಗೇರುವ ಕನಸು ನುಚ್ಚುನೂರು: 2023ರ ಏಕದಿನ ವಿಶ್ವಕಪ್ ಪ್ರಧಾನ ಸುತ್ತಿಗೆ ಏರಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಜಿಂಬಾಬ್ವೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಈ ಮೊದಲು 2019ರ ಏಕದಿನ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲೂ ಜಿಂಬಾಬ್ವೆ ತಂಡವು ಅದ್ಭುತ ಪ್ರದರ್ಶನ ತೋರಿತ್ತು. ಆದರೆ ಯುಎಇ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೇವಲ 3 ರನ್ ಅಂತರದ ರೋಚಕ ಸೋಲು ಅನುಭವಿಸುವ ಮೂಲಕ ಜಿಂಬಾಬ್ವೆ ತಂಡವು ಇಂಗ್ಲೆಂಡ್‌ನಲ್ಲಿ ನಡೆದ 2019ರ ಏಕದಿನ ವಿಶ್ವಕಪ್ ಪ್ರಧಾನ ಸುತ್ತಿಗೇರಲು ವಿಫಲವಾಗಿತ್ತು. ಇನ್ನು ಇದೀಗ 2023ರ ಏಕದಿನ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಗ್ರೂಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಜಿಂಬಾಬ್ವೆ ಸೂಪರ್ ಸಿಕ್ಸ್ ಹಂತದಲ್ಲಿ ಸೋಲು ಕಾಣುವ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಕೈಚೆಲ್ಲಿದೆ.
ಸ್ಕೋರ್:
ಸ್ಕಾಟ್ಲೆಂಡ್ 50 ಓವರಲ್ಲಿ 234/8(ಲೀಯಾಸ್ಕ್ 48, ಕ್ರಾಸ್ 38, ವಿಲಿಯಮ್ಸ್ 3-41)
ಜಿಂಬಾಬ್ವೆ 41.1 ಓವರಲ್ಲಿ 203/10(ಬರ್ಲ್ 83, ಮಧೆವೆರೆ 40, ಸೋಲ್ 3-33)
ವಿಶ್ವಕಪ್ ಫೈನಲ್‌ಗೇರುವ 10ನೇ ತಂಡ ಯಾವುದು..?:
ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥೇಯ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ಹೀಗೆ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದವು. ಇನ್ನು ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ನೆರೆಯ ಶ್ರೀಲಂಕಾ ಕೂಡಾ ಇದೀಗ ಏಕದಿನ ವಿಶ್ವಕಪ್ ಪ್ರಧಾನ ಸುತ್ತಿಗೇರುವಲ್ಲಿ ಯಶಸ್ವಿಯಾಗಿದೆ. ಇನ್ನೊಂದು ಸ್ಥಾನಕ್ಕಾಗಿ ಸ್ಕಾಟ್ಲೆಂಡ್ ಹಾಗೂ ನೆದರ್‌ಲೆಂಡ್ಸ್ ತಂಡದ ನಡುವೆ ಪೈಪೋಟಿಯಿದೆ. ಸದ್ಯ ಸ್ಕಾಟ್ಲೆಂಡ್ ತಂಡವು ಸೂಪರ್ 6 ಹಂತದಲ್ಲಿ 4 ಪಂದ್ಯಗಳನ್ನಾಡಿ 3 ಗೆಲುವು ಹಾಗೂ ಒಂದು ಸೋಲು ಸಹಿತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ನೆದರ್‌ಲೆಂಡ್ಸ್ ತಂಡವು ಸೂಪರ್ ಸಿಕ್ಸ್ ಹಂತದಲ್ಲಿ 4 ಪಂದ್ಯಗಳನ್ನಾಡಿ 2 ಗೆಲುವು ಹಾಗೂ 2 ಸೋಲು ಕಂಡಿದೆ.
ಇದೀಗ ಜುಲೈ 06ರಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ನೆದರ್‌ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ. ಒಂದು ವೇಳೆ ಸ್ಕಾಟ್ಲೆಂಡ್ ತಂಡವು ಗೆಲುವು ಸಾಧಿಸಿದರೆ ಅನಾಯಾಸವಾಗಿ 10ನೇ ತಂಡವಾಗಿ ವಿಶ್ವಕಪ್ ಪ್ರಧಾನ ಸುತ್ತು ಪ್ರವೇಶಿಸಲಿದೆ. ಇನ್ನು 4 ಅಂಕ ಹೊಂದಿರುವ ನೆದರ್‌ಲೆಂಡ್ಸ್ ತಂಡವು, ಸ್ಕಾಟ್ಲೆಂಡ್ ಎದುರು ದೊಡ್ಡ ಅಂತರದ ಗೆಲುವು ಸಾಧಿಸಿದರೆ ನೆದರ್‌ಲೆಂಡ್ಸ್ ತಂಡವು ಭಾರತದಲ್ಲಿ ಏಕದಿನ ವಿಶ್ವಕಪ್ ಆಡಲು ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಹೀಗಾಗಿ ಜುಲೈ 06ರಂದು ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯದ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.