ಕಟಕ್‌(ಮಾ.03): ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಸತತ 7 ಗೆಲುವುಗಳನ್ನು ಕಂಡಿದೆ. ಶನಿವಾರ ಇಲ್ಲಿ ನಡೆದ ‘ಡಿ’ ಗುಂಪಿನ ಅಂತಿಮ ಪಂದ್ಯದಲ್ಲಿ ರಾಜ್ಯ ತಂಡ ಹರ್ಯಾಣ ವಿರುದ್ಧ 14 ರನ್‌ಗಳ ರೋಚಕ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಒಟ್ಟು 28 ಅಂಕಗಳನ್ನು ಕಲೆಹಾಕಿದ ಕರ್ನಾಟಕ, ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಜತೆಗೆ ಟೂರ್ನಿಯಲ್ಲಿ ಆಡುತ್ತಿರುವ 37 ತಂಡಗಳ ಪೈಕಿ ಗುಂಪು ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದ ಏಕೈಕ ತಂಡ ಎನ್ನುವ ಹಿರಿಮೆಗೆ ಪಾತ್ರವಾಯಿತು.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 42 ರನ್‌ ಜೊತೆಯಾಟ ಪಡೆದರೂ, ಬೃಹತ್‌ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ 3 ಅರ್ಧಶತಕ ಬಾರಿಸಿರುವ ರೋಹನ್‌ ಕದಂ (25) ಮೊದಲನೆಯವರಾಗಿ ಔಟಾದರು. ಬಿ.ಆರ್‌.ಶರತ್‌ (16), ಮಯಾಂಕ್‌ ಅಗರ್‌ವಾಲ್‌ (20), ಕರುಣ್‌ ನಾಯರ್‌ (18), ಮನೀಶ್‌ ಪಾಂಡೆ(25) ಉತ್ತಮ ಆರಂಭ ಪಡೆದರೂ ದೊಡ್ಡ ಇನ್ನಿಂಗ್ಸ್‌ ಆಡಲಿಲ್ಲ. 20 ಓವರ್‌ಗಳಲ್ಲಿ ಕರ್ನಾಟಕ 9 ವಿಕೆಟ್‌ ನಷ್ಟಕ್ಕೆ 138 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.

ಸುಲಭ ಗುರಿ ಬೆನ್ನತ್ತಿದ ಹರ್ಯಾಣ, ಕರ್ನಾಟಕದ ದಾಳಿಗೆ ತತ್ತರಿಸಿ ಹೋಯಿತು. 58 ರನ್‌ ಗಳಿಸುವಷ್ಟರಲ್ಲಿ 8 ವಿಕೆಟ್‌ ಕಳೆದುಕೊಂಡ ಹೀನಾಯ ಸೋಲಿನತ್ತ ಮುಖ ಮಾಡಿತು. ಈ ನಡುವೆ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಶ್ರೇಯಸ್‌ ಗೋಪಾಲ್‌ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಸಹ ಮಾಡಿದರು.

ಸುಮಿತ್‌ ಕುಮಾರ್‌ ಏಕಾಂಗಿ ಹೋರಾಟ, ಹರ್ಯಾಣ ಗೆಲುವಿನ ಆಸೆಯನ್ನು ಕೈಬಿಡದಂತೆ ನೋಡಿಕೊಂಡಿತು. ಕೊನೆ ಓವರ್‌ನಲ್ಲಿ ಹರ್ಯಾಣ ಗೆಲುವಿಗೆ 15 ರನ್‌ಗಳು ಬೇಕಿದ್ದವು. ಆದರೆ ಮೊದಲ ಎಸೆತದಲ್ಲೇ ಪ್ರಸಿದ್ಧ್ ಕೃಷ್ಣ, ಸುಮಿತ್‌ ವಿಕೆಟ್‌ ಕಿತ್ತರು. 40 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್‌ನೊಂದಿಗೆ ಸುಮಿತ್‌ 63 ರನ್‌ ಸಿಡಿಸಿದರು. ಹರ್ಯಾಣ 19.1 ಓವರ್‌ಗಳಲ್ಲಿ 124 ರನ್‌ಗಳಿಗೆ ಆಲೌಟ್‌ ಆಯಿತು. ಕರ್ನಾಟಕ ಪರ ಪ್ರಸಿದ್ಧ್, ಶ್ರೇಯಸ್‌ ತಲಾ 3 ವಿಕೆಟ್‌ ಕಿತ್ತರು.

ಸ್ಕೋರ್‌: ಕರ್ನಾಟಕ 20 ಓವರ್‌ಗಳಲ್ಲಿ 138/9 (ರೋಹನ್‌ 25, ಮನೀಶ್‌ 25, ಮಿಶ್ರಾ 3-26),

ಹರ್ಯಾಣ 19.1 ಓವರ್‌ಗಳಲ್ಲಿ 124/10 (ಸುಮಿತ್‌ 63, ಪ್ರಸಿದ್ಧ್ 3-25, ಶ್ರೇಯಸ್‌ 3-16)

ಶ್ರೇಯಸ್‌ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ!

ಕರ್ನಾಟಕದ ತಾರಾ ಸ್ಪಿನ್‌ ಬೌಲರ್‌ ಶ್ರೇಯಸ್‌ ಗೋಪಾಲ್‌, ಹರ್ಯಾಣ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದರು. ಓವರ್‌ನ 3ನೇ ಎಸೆತದಲ್ಲಿ ನಿತಿನ್‌ ಸೈನಿಯನ್ನು ಬೌಲ್ಡ್‌ ಮಾಡಿದ ಶ್ರೇಯಸ್‌, 4ನೇ ಎಸೆತದಲ್ಲಿ ಜಯಂತ್‌ ಯಾದವ್‌ರನ್ನು ಎಲ್‌ಬಿ ಬಲೆಗೆ ಕೆಡವಿದರು. 5ನೇ ಎಸೆತದಲ್ಲಿ ನಾಯಕ ಅಮಿತ್‌ ಮಿಶ್ರಾರನ್ನು ಬೌಲ್ಡ್‌ ಮಾಡಿ ಶ್ರೇಯಸ್‌ ಹ್ಯಾಟ್ರಿಕ್‌ ವಿಕೆಟ್‌ ಸಾಧಿಸಿದರು.

ಸೂಪರ್‌ ಲೀಗ್‌: ಕರ್ನಾಟಕಕ್ಕೆ ‘ಬಿ’ ಗುಂಪಿನಲ್ಲಿ ಸ್ಥಾನ

‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಕರ್ನಾಟಕ ಸೂಪರ್‌ ಲೀಗ್‌ ಹಂತದಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ಮುಂಬೈ, ಉತ್ತರ ಪ್ರದೇಶ, ದೆಹಲಿ ಹಾಗೂ ವಿದರ್ಭ ತಂಡಗಳಿವೆ. ‘ಎ’ ಗುಂಪಿನಲ್ಲಿ ಜಾರ್ಖಂಡ್‌, ರೈಲ್ವೇಸ್‌, ಬಂಗಾಳ, ಮಹಾರಾಷ್ಟ್ರ ಹಾಗೂ ಗುಜರಾತ್‌ ತಂಡಗಳು ಸ್ಥಾನ ಪಡೆದಿವೆ. ಈ ಹಂತದಲ್ಲಿ ಪ್ರತಿ ತಂಡ ತನ್ನ ಗುಂಪಿನಲ್ಲಿರುವ ಇತರ ತಂಡಗಳನ್ನು ಎದುರಿಸಲಿದೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಫೈನಲ್‌ ಪ್ರವೇಶಿಸಲಿವೆ. ಮಾ.8ರಿಂದ ಸೂಪರ್‌ ಲೀಗ್‌ ಪಂದ್ಯಗಳು ಆರಂಭಗೊಳ್ಳಲಿದ್ದು, ಎಲ್ಲಾ ಪಂದ್ಯಗಳು ಇಂದೋರ್‌ನಲ್ಲಿ ನಡೆಯಲಿವೆ.

ರಾಜ್ಯದ ಸೂಪರ್‌ ಲೀಗ್‌ ವೇಳಾಪಟ್ಟಿ

ದಿನಾಂಕ    ಎದುರಾಳಿ

ಮಾ.8    ಮುಂಬೈ

ಮಾ.9    ಉ.ಪ್ರದೇಶ

ಮಾ.10    ದೆಹಲಿ

ಮಾ.12    ವಿದರ್ಭ