ಸರ್ಫ್ರಾಜ್ ಖಾನ್ ತಂದೆಗೆ ಥಾರ್ ಕಾರ್ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ
ಮಹೀಂದ್ರಾ & ಮಹೀಂದ್ರಾ ಗ್ರೂಪ್‌ನ ಚೇರ್ಮನ್ ಆನಂದ್ ಮಹೀಂದ್ರಾ ಕೊಟ್ಟ ಮಾತಿನಂತೆ ಟೀಮ್ ಇಂಡಿಯಾ ಆಟಗಾರ ಸರ್ಫ್ರಾಜ್ ಖಾನ್ ಅವರ ತಂದೆಗೆ ಮಹೀಂದ್ರಾ ಥಾರ್ ಕಾರ್‌ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ನವದೆಹಲಿ (ಮಾ.22): ಕಳೆದ ತಿಂಗಳು ಸರ್ಫ್ರಾಜ್ ಖಾನ್ ಟೀಮ್ ಇಂಡಿಯಾ ಪರವಾಗಿ ಪಾದಾರ್ಪಣೆ ಮಾಡಿದ್ದರು. ಈ ವೇಳೆ ಸರ್ಫ್ರಾಜ್ ಖಾನ್ ಅವರ ತಂದೆ ನೌಶಾದ್ ಖಾನ್ ಅವರು ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ಶ್ರಮ ವಹಿಸಿದ ಕಥೆಯನ್ನು ತಿಳಿದ ಆನಂದ್ ಮಹೀಂದ್ರಾ ಅವರಿಗೆ ಮಹೀಂದ್ರಾ ಥಾರ್ ಕಾರ್‌ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು. ಇತ್ತೀಚೆಗೆ ಮಹೀಂದ್ರಾ & ಮಹೀಂದ್ರಾ ಕಂಪನಿಯ ಚೇರ್ಮನ್ ಆನಂದ್ ಮಹೀಂದ್ರಾ ತಾವು ನೀಡಿದ ಮಾತನ್ನು ಉಳಿಸಿಕೊಂಡಿದ್ದು ನೌಶಾದ್ ಖಾನ್‌ಗೆ ಥಾರ್ ಕಾರ್‌ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸರ್ಫ್ರಾಜ್ ಖಾನ್ ಫೆಬ್ರವರಿ 15 ರಂದು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸರ್ಫರಾಜ್ ಅವರ ಕ್ರಿಕೆಟ್ ಪಯಣದಲ್ಲಿ ತಂದೆಯ ಪ್ರಮುಖ ಪಾತ್ರವನ್ನು ಗುರುತಿಸಿ ಆನಂದ್ ಮಹೀಂದ್ರಾ ಅವರು ನೌಶಾದ್‌ಗೆ ಮಹೀಂದ್ರ ಥಾರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ವಾಗ್ದಾನ ಮಾಡಿದ್ದರು.
ತಮ್ಮ ಮಕ್ಕಳಾದ ಸರ್ಫ್ರಾಜ್ ಹಾಗೂ ಮುಶೀರ್ ಅವರೊಂದಿಗೆ ನೌಶಾದ್, ಥಾರ್ ಕಾರ್‌ಅನ್ನು ಸ್ವೀಕರಿಸಿದ್ದು ಇದರ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಸರ್ಫ್ರಾಜ್ ಖಾನ್, ತಮ್ಮ ಇನ್ಸ್‌ಟಾಗ್ರಾಮ್ ಅಕೌಂಟ್‌ನಲ್ಲಿ ಕಾರ್ ಪಡೆದುಕೊಂಡಿರುವ ಫೋಟೋ ಹಾಗೂ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ನೌಶಾದ್ ಅವರ ಭಾವುಕ ಕ್ರಿಕೆಟ್ ವಿಶ್ಲೇಷಣೆಯನ್ನೂ ಕೂಡ ಆನಂದ್ ಮಹೀಂದ್ರಾ ಕೇಳಿದ್ದರು. ಇದರ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದ ಅವರು, 'ಕಠಿಣ ಪರಿಶ್ರಮ, ಧೈರ್ಯ, ತಾಳ್ಮೆ. ತನ್ನ ಮಗುವಿಗೆ ಸ್ಫೂರ್ತಿ ನೀಡಲು ತಂದೆಯೊಬ್ಬನಿಗೆ ಇದಕ್ಕಿಂತ ಹೆಚ್ಚಿನ ಗುಣಗಳು ಯಾಕೆ ಬೇಕು? ಸ್ಪೂರ್ತಿದಾಯಕ ಪೋಷಕನಾಗಿರುವ ಕಾರಣಕ್ಕೆ, ಅವರಿಗೆ ಥಾರ್ ಕಾರ್‌ಅನ್ನು ಗಿಫ್ಡ್ ಮಾಡುವುದು ನನ್ನ ಹೆಮ್ಮೆ ಎಂದು ಭಾವಿಸುತ್ತೇನೆ' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದರು.
ಅನಿಲ್ ಕುಂಬ್ಳೆ ಅವರಿಂದ ಟೆಸ್ಟ್ ಕ್ಯಾಪ್ ಸ್ವೀಕಾರ ಮಾಡುವ ವೇಳೆ ಸರ್ಫ್ರಾಜ್ ಖಾನ್ ಭಾವುಕರಾಗಿದ್ದರು. ಸರ್ಫ್ರಾಜ್ ಮಾತ್ರವಲ್ಲದೆ ಅವರ ಪತ್ನಿ, ಸಹೋದರ, ಕುಟುಂಬ ಹಾಗೂ ಅವರ ತಂದೆ ನೌಶಾದ್ ಕೂಡ ಭಾವುಕರಾಗಿದ್ದರು. ಮಗ ಟೀಮ್ ಇಂಡಿಯಾ ಕ್ರಿಕೆಟ್ ಕ್ಯಾಪ್ ಪಡೆಯವ ವೇಳೆ ನೌಶಾದ್ ಖಾನ್ ಕಣ್ಣೀರಿಟ್ಟಿದ್ದರು. ಟೆಸ್ಟ್ ಕ್ಯಾಪ್ ಪಡೆದ ಬಳಿಕ ತನ್ನ ತಂದೆಯ ಬಳಿ ತೆರಳಿದ್ದ ಸರ್ಫ್ರಾಜ್ ಖಾನ್, ಗೌರವ ಎನ್ನುವಂತೆ ಆ ಕ್ಯಾಪ್‌ಅನ್ನು ಅವರಿಗೆ ನೀಡಿದ್ದರು.
ರೋಹಿತ್ ಶರ್ಮಾ ವಾರ್ನಿಂಗ್ ನೀಡಿದ್ದರಿಂದಲೇ ಉಳಿಯಿತು ಟೀಂ ಇಂಡಿಯಾ ಕ್ರಿಕೆಟಿಗನ ಪ್ರಾಣ..!
ಭಾರತದ ಪರವಾಗಿ ಆಡಿದ ಮೊಟ್ಟಮೊದಲ ಪಂದ್ಯದಲ್ಲಿಯೇ ಸರ್ಫ್ರಾಜ್ ಖಾನ್ ಗಮನಸೆಳೆದಿದ್ದರು. ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ ಭಾರತದ ಆಟಗಾರ ಎನಿಸಿದ್ದರು. ಆದರೆ, ಅವರ ಇನ್ನಿಂಗ್ಸ್ ರವೀಂದ್ರ ಜಡೇಜಾ ಅವರೊಂದಿಗಿನ ರನೌಟ್‌ನ ಕಾರಣದಿಂದಾಗಿ ಕೊನೆಗೊಂಡಿತು. 2ನೇ ಇನ್ನಿಂಗ್ಸ್‌ನಲ್ಲೂ ಅಮೂಲ್ಯ 68 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಈ ಪಂದ್ಯವನ್ನು ಭಾರತ 434 ರನ್‌ನಿಂದ ಗೆದ್ದಿತ್ತು. ಇದೇ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲೂ ಸರ್ಫ್ರಾಜ್ ಅರ್ಧಶತಕ ಬಾರಿಸಿದ್ದರು. ಸರ್ಫರಾಜ್ ಐಪಿಎಲ್ 2024 ರ ಋತುವಿನಲ್ಲಿ ಯಾವುದೇ ತಂಡದ ಪರವಾಗಿ ಆಡುತ್ತಿಲ್ಲ. ಡಿಸೆಂಬರ್ 2023 ರಲ್ಲಿ ದುಬೈನಲ್ಲಿ ನಡೆದ ಹರಾಜಿನಲ್ಲಿ ಸರ್ಫರಾಜ್ ಅವರನ್ನು ಯಾವ ತಂಡವೂ ಖರೀದಿ ಮಾಡಿರಲಿಲ್ಲ.
ಟೆಸ್ಟ್‌ಗೆ ಡೆಬ್ಯೂ ಮಾಡಿದ ಸರ್ಫರಾಜ್ ಖಾನ್ ತಂದೆಗೆ ಥಾರ್ ಗಿಫ್ಟ್ ಘೋಷಿಸಿದ ಆನಂದ್ ಮಹೀಂದ್ರ!