ಕ್ರಿಕೆಟಿಗ ಸಂಜು ಸ್ಯಾಮ್ಸನ್ ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ರಾಜಸ್ಥಾನ ರಾಯಲ್ಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಅವರ ವರ್ಗಾವಣೆಯ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಹುಟ್ಟುಹಬ್ಬದ ದಿನವೇ ಸಿಎಸ್‌ಕೆ ಕಡೆಯಿಂದ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

ತಿರುವನಂತಪುರಂ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಇಂದು 31ನೇ ಹುಟ್ಟುಹಬ್ಬದ ಸಂಭ್ರಮ. ಐಪಿಎಲ್ ಆಟಗಾರರ ವರ್ಗಾವಣೆ ಚರ್ಚೆಗಳ ನಡುವೆಯೇ ಸಂಜು ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ನಾಯಕನಾಗಿರುವ ಸಂಜುವನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಯತ್ನಗಳು ಅಂತಿಮ ಹಂತದಲ್ಲಿರುವಾಗಲೇ, ಕೇರಳ ಮೂಲದ ಕ್ರಿಕೆಟಿಗ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ವಿಶೇಷ. ಸಂಜು ಹುಟ್ಟುಹಬ್ಬದ ದಿನದಂದೇ ಚೆನ್ನೈ ಸೂಪರ್ ಕಿಂಗ್ಸ್ ಆ ದೊಡ್ಡ ಘೋಷಣೆ ಮಾಡುತ್ತದೆಯೇ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಸಂಜು ಸಿಎಸ್‌ಕೆ ಸೇರೋದು ಬಹುತೇಕ ಕನ್ಫರ್ಮ್

ಅನಿಶ್ಚಿತತೆಗಳ ನಂತರ, ಸಂಜು ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರುವುದು ಬಹುತೇಕ ಖಚಿತವಾಗಿದೆ ಮತ್ತು ಆಟಗಾರರ ವರ್ಗಾವಣೆ ಪ್ರಕ್ರಿಯೆಗಳು ಮಾತ್ರ ಬಾಕಿ ಉಳಿದಿವೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್‌ರನ್ನು ಬಿಟ್ಟುಕೊಟ್ಟು ಸಂಜು ಸ್ಯಾಮ್ಸನ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ನಿರ್ಧರಿಸಿದೆ. ಹುಟ್ಟುಹಬ್ಬದ ದಿನದಂದು ಚೆನ್ನೈ ಸೂಪರ್ ಕಿಂಗ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ಸಂಜುಗೆ ಶುಭ ಹಾರೈಸಿದೆ.

Scroll to load tweet…

2015ರಲ್ಲೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿರುವ ಸಂಜು ಸ್ಯಾಮ್ಸನ್

2015ರ ಜುಲೈ 9ರಂದು ಜಿಂಬಾಬ್ವೆ ವಿರುದ್ಧ ಭಾರತ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ ಸಂಜು, 2021ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ತಂಡಕ್ಕೂ ಪಾದಾರ್ಪಣೆ ಮಾಡಿದರು. ಆದರೆ, ಒಂದು ದಶಕದ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಸಂಜುಗೆ ಭಾರತ ಪರ 51 ಟಿ20 ಮತ್ತು 16 ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲು ಅವಕಾಶ ಸಿಕ್ಕಿದೆ. ಗೌತಮ್ ಗಂಭೀರ್ ಕೋಚ್ ಆಗಿ ಬಂದ ನಂತರ ಟಿ20 ತಂಡದ ಓಪನರ್ ಆಟಗಾರನಾಗಿ ಸಂಜು ಮಿಂಚಿದ್ದರು. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಮೂರು ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಸಹ ಮಾಡಿದ್ದರು. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಳಲ್ಲಿ ಸಂಜು ಶತಕಗಳನ್ನು ಬಾರಿಸಿದ್ದರು.

ಓಪನರ್ ಆಗಿ ಸಂಜು ಸ್ಥಾನ ಭದ್ರಪಡಿಸಿಕೊಂಡಿದ್ದಾರೆ ಎಂದು ಭಾವಿಸುತ್ತಿದ್ದಂತೆಯೇ, ಶುಭಮನ್ ಗಿಲ್ ಅವರನ್ನು ಭಾರತದ ಟಿ20 ತಂಡಕ್ಕೆ ಕಮ್‌ಬ್ಯಾಕ್ ಮಾಡಿದರು. ಇದರ ಜತೆಗೆ ಗಿಲ್ ಅವರನ್ನು ಓಪನ್ನರ್ ಆಗಿ ಆಡಿಸಲಾಯಿತು. ಇದರಿಂದಾಗಿ ಮಧ್ಯಮ ಕ್ರಮಾಂಕಕ್ಕೆ ಸಂಜು ಶಿಫ್ಟ್ ಆದರು. ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ತಿಲಕ್ ವರ್ಮಾ ಜೊತೆ ನಿರ್ಣಾಯಕ ಜೊತೆಯಾಟವಾಡಿ ಭಾರತ ಚಾಂಪಿಯನ್ ಆಗುವಲ್ಲಿ ಸಂಜು ದೊಡ್ಡ ಪಾತ್ರ ವಹಿಸಿದರು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜುಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ.

ಸಂಜು ಬದಲಿಗೆ ಓಪನರ್ ಆಗಿ ಕಣಕ್ಕಿಳಿಯುತ್ತಿರುವ ಶುಭಮನ್ ಗಿಲ್ ನಿರಾಸೆ ಮೂಡಿಸಿರುವ ಹಿನ್ನೆಲೆಯಲ್ಲಿ, ಮೂರು ತಿಂಗಳ ನಂತರ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸಂಜು ಮತ್ತೆ ಓಪನರ್ ಆಗಿ ಹಿಂತಿರುಗುತ್ತಾರೆಯೇ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. 2013ರಲ್ಲಿ ಹದಿನೆಂಟನೇ ವಯಸ್ಸಿನಲ್ಲಿ ಐಪಿಎಲ್‌ನಲ್ಲಿ ರಾಜಸ್ಥಾನ ತಂಡಕ್ಕೆ ಸೇರಿದ ಸಂಜು, 19ನೇ ವಯಸ್ಸಿನಲ್ಲಿ ಐಪಿಎಲ್‌ನ ಅತ್ಯುತ್ತಮ ಆಟಗಾರನಾಗಿ ಆಯ್ಕೆಯಾದರು. 2021ರಲ್ಲಿ ತಂಡದ ನಾಯಕರಾಗಿ ಬೆಳೆದ ಸಂಜು, ರಾಜಸ್ಥಾನ ತಂಡವನ್ನು 2022ರಲ್ಲಿ ಫೈನಲ್‌ಗೆ ಮತ್ತು 2024ರಲ್ಲಿ ಪ್ಲೇಆಫ್‌ಗೆ ಕೊಂಡೊಯ್ದಿದ್ದು ಅವರ ಸಾಧನೆಯಾಗಿದೆ. ರಾಜಸ್ಥಾನ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನ್ನುವ ಹೆಗ್ಗಳಿಕೆ ಸಂಜು ಸ್ಯಾಮ್ಸನ್ ಅವರಿಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ಗೆ ವರ್ಗಾವಣೆ ನಿಜವಾದರೆ, ಎಂ.ಎಸ್. ಧೋನಿಯ ಉತ್ತರಾಧಿಕಾರಿ ಎಂಬ ಹೆಗ್ಗಳಿಕೆಗೂ ಸಂಜು ಪಾತ್ರರಾಗಲಿದ್ದಾರೆ.