ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಸಂಜು ಸ್ಯಾಮ್ಸನ್ ಅವರ ಟ್ರೇಡ್ ಒಪ್ಪಂದದ ವದಂತಿಗಳು ಹಬ್ಬಿವೆ. ಸಂಜುಗೆ ಬದಲಾಗಿ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರ್ರನ್‌ರನ್ನು ಬಿಟ್ಟುಕೊಡಲು ಸಿಎಸ್‌ಕೆ ಸಿದ್ಧವಿದೆ ಎಂದು ವರದಿಯಾಗಿದೆ.  

ಚೆನ್ನೈ: ಸಂಜು ಸ್ಯಾಮ್ಸನ್ ಅವರ ಟ್ರೇಡ್‌ಗೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಒಪ್ಪಂದವಾಗಿದೆ ಎಂದು ವರದಿಯಾಗಿದೆ. ಇದೀಗ ಸಂಜು ಸ್ಯಾಮ್ಸನ್ ಟ್ರೇಡಿಂಗ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಪ್ರಮುಖ ಕ್ರೀಡಾ ವೆಬ್‌ಸೈಟ್ ಇಎಸ್‌ಪಿಎನ್ ಕ್ರಿಕ್‌ಇನ್ಫೋ ಈ ವಿಷಯವನ್ನು ವರದಿ ಮಾಡಿದೆ. ರಾಜಸ್ಥಾನದ ನಾಯಕ ಸಂಜು ಚೆನ್ನೈಗೆ ಬಂದರೆ, ಬದಲಿಗೆ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರ್ರನ್‌ರನ್ನು ಚೆನ್ನೈ ಬಿಟ್ಟುಕೊಡಲಿದೆ ಎಂದು ತಿಳಿದುಬಂದಿದೆ. ಎರಡೂ ಫ್ರಾಂಚೈಸಿಗಳು ಟ್ರೇಡ್‌ನಲ್ಲಿ ಭಾಗಿಯಾಗಿರುವ ಮೂವರು ಆಟಗಾರರೊಂದಿಗೆ ಮಾತನಾಡಿದ್ದು, ಆದರೆ, ಅಧಿಕೃತವಾಗಿ ಇನ್ನೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಐಪಿಎಲ್ ಟ್ರೇಡ್‌ ರೂಲ್ಸ್ ಏನು?

ಟ್ರೇಡ್‌ನಲ್ಲಿರುವ ಮೂವರು ಆಟಗಾರರ ಹೆಸರನ್ನು ರಾಜಸ್ಥಾನ ಮತ್ತು ಸಿಎಸ್‌ಕೆ ಐಪಿಎಲ್ ಆಡಳಿತ ಮಂಡಳಿಯ ಮುಂದೆ ಇಡಬೇಕು. ಟ್ರೇಡಿಂಗ್ ನಿಯಮಗಳ ಪ್ರಕಾರ, ಆಟಗಾರರಿಂದ ಲಿಖಿತ ಒಪ್ಪಿಗೆ ಪಡೆದ ನಂತರ, ಫ್ರಾಂಚೈಸಿಗಳು ಅಂತಿಮ ಒಪ್ಪಂದಕ್ಕಾಗಿ ಹೆಚ್ಚಿನ ಮಾತುಕತೆಗಳನ್ನು ನಡೆಸಬಹುದು. ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜಾ ಬಹಳ ಸಮಯದಿಂದ ತಮ್ಮ ತಮ್ಮ ಫ್ರಾಂಚೈಸಿಗಳಲ್ಲಿದ್ದಾರೆ. ಸಂಜು 11 ಸೀಸನ್‌ಗಳಲ್ಲಿ ರಾಜಸ್ಥಾನ ಪರ ಆಡಿದ್ದಾರೆ. ಇದೇ ವೇಳೆ ರವೀಂದ್ರ ಜಡೇಜಾ 2012 ರಿಂದ ಸಿಎಸ್‌ಕೆ ಪರ ಆಡುತ್ತಿದ್ದಾರೆ. ಸಿಎಸ್‌ಕೆ ನಿಷೇಧಕ್ಕೊಳಗಾದಾಗ 2016 ಮತ್ತು 2017 ರ ಸೀಸನ್‌ಗಳಲ್ಲಿ ಗುಜರಾತ್ ಲಯನ್ಸ್‌ ಪರ ಆಡಿದ್ದರು. ಈ ಸಮಯದಲ್ಲಿ ಸಂಜು ದೆಹಲಿ ಕ್ಯಾಪಿಟಲ್ಸ್‌ನಲ್ಲಿದ್ದರು.

ರಾಜಸ್ಥಾನ ಮೂಲಕವೇ ಐಪಿಎಲ್ ಆರಂಭಿಸಿದ್ದ ಜಡೇಜಾ

ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ರವೀಂದ್ರ ಜಡೇಜಾ ಸದಸ್ಯರಾಗಿದ್ದರು. ಅಲ್ಲಿ ಇನ್ನೊಂದು ವರ್ಷ ಮುಂದುವರೆದರು. ಮುಂದಿನ ಸೀಸನ್‌ನಲ್ಲಿ, ರಾಯಲ್ಸ್ ತಂಡದ ಅಧಿಕಾರಿಗಳಿಗೆ ತಿಳಿಸದೆ ಜಡೇಜಾ ಮುಂಬೈ ಇಂಡಿಯನ್ಸ್‌ನ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು. ಒಪ್ಪಂದ ಉಲ್ಲಂಘಿಸಿದ ಆಟಗಾರನ ವಿರುದ್ಧ ರಾಯಲ್ಸ್ ಬಿಸಿಸಿಐಗೆ ದೂರು ನೀಡಿತ್ತು. ಬಿಸಿಸಿಐ, ಜಡೇಜಾಗೆ ಐಪಿಎಲ್ ಆಡುವುದರಿಂದ ಒಂದು ವರ್ಷ ನಿಷೇಧ ಹೇರಿತ್ತು. 2011ರ ಸೀಸನ್‌ನಲ್ಲಿ ಜಡೇಜಾ ಕೊಚ್ಚಿ ಟಸ್ಕರ್ಸ್‌ಗೆ ಸೇರಿದರು. ಇದಾದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಿಕೊಂಡರು. ಸದ್ಯ ರವೀಂದ್ರ ಜಡೇಜಾ ಸಿಎಸ್‌ಕೆ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಇಂಗ್ಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರ್ರನ್ 2019 ರಲ್ಲಿ ಪಂಜಾಬ್ ಕಿಂಗ್ಸ್‌ನಿಂದ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 2023 ಮತ್ತು 2024 ರ ಸೀಸನ್‌ಗಳಲ್ಲಿಯೂ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2020 ಮತ್ತು 2021 ರ ಸೀಸನ್‌ಗಳಲ್ಲಿ ಸಿಎಸ್‌ಕೆ ಪರ ಆಡಿದ್ದರು. 2025 ರ ಸೀಸನ್‌ಗೆ 2.4 ಕೋಟಿ ರೂಪಾಯಿಗೆ ಕರ್ರನ್‌ರನ್ನು ಸಿಎಸ್‌ಕೆ ಮರಳಿ ಖರೀದಿಸಿತು, ಅವರು ಐದು ಪಂದ್ಯಗಳಿಂದ ಕೇವಲ 114 ರನ್ ಮತ್ತು ಒಂದು ವಿಕೆಟ್ ಗಳಿಸಿದರು.

ಈ ಹಿಂದೆ ಸಂಜು ಸ್ಯಾಮ್ಸನ್ ಬೇಕಿದ್ದರೇ ನಮಗೆ ಬದಲಿಯಾಗಿ ರವೀಂದ್ರ ಜಡೇಜಾ ಜತೆಗೆ ದಕ್ಷಿಣ ಆಫ್ರಿಕಾ ಮೂಲದ ಸ್ಪೋಟಕ ಬ್ಯಾಟರ್ ಡೆವಾಲ್ಡ್ ಬ್ರೆವೀಸ್ ಅವರನ್ನು ನೀಡಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ಬಳಿ ರಾಜಸ್ಥಾನ ರಾಯಲ್ಸ್ ಡಿಮ್ಯಾಂಡ್ ಇಟ್ಟಿದೆ ಎಂದು ವರದಿಯಾಗಿತ್ತು.