ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ನಾಯಕ ಸಂಜು ಸ್ಯಾಮ್ಸನ್‌ ಹಾಗೂ ರಿಯಾನ್‌ ಪರಾಗ್‌ ಅವರ ಅದ್ಭುತ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ ಗುಜರಾತ್‌ ಟೈಟಾನ್ಸ್‌ ಗೆಲುವಿಗೆ ದೊಡ್ಡ ಮೊತ್ತದ ಗುರಿ ನೀಡಿದೆ. 

ಜೈಪುರ (ಏ.10): ನಾಯಕ ಸಂಜು ಸ್ಯಾಮ್ಸನ್‌ ಹಾಗೂ ರಿಯಾನ್‌ ಪರಾಗ್‌ ಅವರ ಸ್ಫೋಟಕ ಅರ್ಧಶತಕಗಳ ಸಹಾಯದಿಂದ ರಾಜಸ್ಥಾನ ರಾಯಲ್ಸ್‌ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ ದೊಡ್ಡ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದು ಅದ್ಭುತ ಇನ್ನಿಂಗ್ಸ್‌ ಆಡಿದ ರಿಯಾನ್‌ ಪರಾಗ್‌ ಕೇವಲ 48 ಎಸೆತಗಳಲ್ಲಿ3 ಬೌಂಡರಿ, 5 ಸಿಕ್ಸರ್‌ ಇದ್ದ 76 ರನ್‌ ಚಚ್ಚಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ನಾಯಕ ಸಂಜು ಸ್ಯಾಮ್ಸನ್‌ 38 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ ಇದ್ದ ಅಜೇಯ 68 ರನ್‌ ಸಿಡಿಸಿದ್ದರಿಂದ ರಾಜಸ್ಥಾನ ರಾಯಲ್ಸ್‌ ತಂಡ 3 ವಿಕೆಟ್‌ಗೆ 196 ರನ್‌ಗಳ ಬೃಹತ್‌ ಮೊತ್ತ ಪೇರಿಸಿದೆ. ಆರಂಭಿಕ ಆಟಗಾರರಾದ ಜೋಸ್‌ ಬಟ್ಲರ್‌ ಹಾಗೂ ಯಶಸ್ವಿ ಜೈಸ್ವಾಲ್‌ ಪವರ್‌ ಪ್ಲೇ ಮುಗಿಯುವ ಮುನ್ನವೇ ಡಗ್‌ಔಟ್‌ ಸೇರಿದ್ದಾಗ ರಾಜಸ್ಥಾನ ತಂಡ ಆಘಾತ ಕಂಡಿತ್ತು. ಈ ಹಂತದಲ್ಲಿ ಜೊತೆಯಾದ ಸಂಜು ಸ್ಯಾಮ್ಸನ್‌ ಹಾಗೂ ರಿಯಾನ್‌ ಪರಾಗ್‌ ಆಕರ್ಷಕ 130 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು.

ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ತಂಡದ ಆರಂಭವೇನೂ ಉತ್ತಮವಾಗಿರಲಿಲ್ಲ. 42 ರನ್‌ ಬಾರಿಸುವ ವೇಳೆ ತಂಡ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಸಂಜು ಸ್ಯಾಮ್ಸನ್‌ ಹಾಗೂ ರಿಯಾನ್‌ ಪರಾಗ್‌ಗೆ ಆರಂಭದಲ್ಲಿ ಅದೃಷ್ಟವೂ ಸಿಕ್ಕಿತ್ತು. ರಶೀದ್‌ ಖಾನ್‌ ಓವರ್‌ನಲ್ಲಿ ರಿಯಾನ್‌ ಪರಾಗ್‌ಗೆ ಎರಡು ಜೀವದಾನ ಸಿಕ್ಕಿದ್ದು ಗುಜರಾತ್‌ ತಂಡದ ಮೇಲೆ ಭಾರೀ ಪರಿಣಾಮ ಬೀರಿತು. ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ ಜೋಡಿ, ಸಮಯ ಕಳೆದಂತೆ ಆಕ್ರಮಣಕಾರಿ ಆಟವಾಡಲು ಮುಂದಾಯಿತು. 

ಕೇವಲ 78 ಎಸೆತಗಳಲ್ಲಿ 130 ರನ್‌ ಜೊತೆಯಾಟವಾಡಿದ ಈ ಜೋಡಿಯ ಪೈಕಿ ರಿಯಾನ್‌ ಪರಾಗ್‌, ನೂರ್‌ ಅಹ್ಮದ್‌ರನ್ನು ಮನಬಂದಂತೆ ದಂಡಿಸಿದರು. ಲೆಗ್‌ಸೈಡ್‌ನಲ್ಲಿ ಇವರಿಗೆ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಶಿಮ್ರೋನ್‌ ಹೆಟ್ಮೆಯರ್‌ 5 ಎಸೆತಗಳಲ್ಲಿ ತಲಾ 1 ಬೌಂಡರಿ ಹಾಗೂ ಸಿಕ್ಸರ್‌ನೊಂದಿಗೆ 13 ರನ್‌ ಬಾರಿಸಿ ತಂಡದ ಮೊತ್ತ 190ರ ಗಡಿ ದಾಟುವಲ್ಲಿ ನೆರವಾದರು. ಸಂಜು ಸ್ಯಾಮ್ಸನ್‌ ಪಾಲಿಗೆ ಇದು ಕಳೆದ ಐದು ಪಂದ್ಯಗಳಲ್ಲಿ ಮೂರನೇ ಅರ್ಧಶತಕ ಇದಾಗಿದೆ.

ಕಿಡ್ನಿ ಕಾಯಿಲೆಯ ನಡುವೆಯೂ ಕ್ರಿಕೆಟ್‌ ಕನಸನ್ನು ಸಾಕಾರ ಮಾಡಿಕೊಂಡ ಆಟಗಾರ, ಈತ ಆರ್‌ಸಿಬಿ ಪ್ಲೇಯರ್‌!

ಇದು ಸಂಜು ಸ್ಯಾಮ್ಸನ್‌ಗೆ ಐಪಿಎಲ್‌ನಲ್ಲಿ ರಾಜಸ್ಥಾನ ತಂಡದ ನಾಯಕರಾಗಿ 50ನೇ ಪಂದ್ಯ. ಐಪಿಎಲ್‌ನಲ್ಲಿ 50ನೇ ಪಂದ್ಯದಲ್ಲಿ ನಾಯಕರಾಗಿ ಗರಿಷ್ಠ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎನ್ನುವ ಕೀರ್ತಿಗೂ ಸಂಜು ಸ್ಯಾಮ್ಸನ್‌ ಪಾತ್ರರಾದರು. ಇದಕ್ಕೂ ಮುನ್ನ 2013ರಲ್ಲಿ ಆರ್‌ಸಿಬಿ ವಿರುದ್ಧ ಕೆಕೆಆರ್‌ ತಂಡದ ನಾಯಕ ಗೌತಮ್‌ ಗಂಭೀರ್‌ ತಮ್ಮ ನಾಯಕತ್ವದ 50ನೇ ಪಂದ್ಯದಲ್ಲಿ 46 ಎಸೆತಗಳಲ್ಲಿ 59 ರನ್‌ ಬಾರಿಸಿದ್ದು ದಾಖಲೆ ಎನಿಸಿತ್ತು.

ಮುಂದಿನ 10 ವರ್ಷದಲ್ಲಿ 3 ಬಾರಿ ಫೈನಲ್‌ ಆಡಲಿದೆ ಆರ್‌ಸಿಬಿ, ಒಮ್ಮೆ ಚಾಂಪಿಯನ್‌, ಪ್ರೆಡಿಕ್ಟ್‌ ಮಾಡಿದ AI