ತಾವು ಸಂಪೂರ್ಣ ಫಿಟ್ ಎಂದು ಘೋಷಿಸಿಕೊಂಡ ಸಂಜು ಸ್ಯಾಮ್ಸನ್..! ಎಲ್ಲರ ಚಿತ್ತ ಕೇರಳ ಕ್ರಿಕೆಟಿಗನತ್ತ
ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡ ಸಂಜು ಸ್ಯಾಮ್ಸನ್
ಲಂಕಾ ಎದುರಿನ ಸರಣಿಯ ವೇಳೆ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದ ವಿಕೆಟ್ ಕೀಪರ್ ಬ್ಯಾಟರ್
ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿರುವ ಸಂಜು ಸ್ಯಾಮ್ಸನ್

ಬೆಂಗಳೂರು(ಜ.28): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಇದೀಗ ತಾವು ಸಂಪೂರ್ಣ ಫಿಟ್ ಆಗಿದ್ದು, ಮೈದಾನಕ್ಕಿಳಿಯಲು ರೆಡಿಯಾಗಿರುವ ಸೂಚನೆ ನೀಡಿದ್ದಾರೆ. ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್, ಮೊಣಕಾಲು ಗಾಯಕ್ಕೊಳಗಾಗಿದ್ದರು. ಸದ್ಯ ಸಂಜು ಸ್ಯಾಮ್ಸನ್, ಇಲ್ಲಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತಾವು ಫಿಟ್ ಆಗಿರುವ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಆಲ್ ಸೆಟ್ ಅಂಡ್ ರೆಡಿ ಟು ಗೋ(ಎಲ್ಲಾ ಸಿದ್ದವಾಗಿದ್ದು, ತಾವು ರೆಡಿ) ಎಂದು ಎನ್‌ಸಿಎ ಹೊರಗೆ ನಿಂತು ಸಂಜು ಸ್ಯಾಮ್ಸನ್ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಪ್ರತಿಭಾಮನ್ವಿತ ಬ್ಯಾಟರ್ ಸಂಜು ಸ್ಯಾಮ್ಸನ್, ಶ್ರೀಲಂಕಾ ಎದುರಿನ ಟಿ20 ಸರಣಿಯ ಮೊದಲ ಪಂದ್ಯದ ಸಂದರ್ಭದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿ ಭಾರತ ತಂಡದಿಂದ ಹೊರಬಿದ್ದಿದ್ದರು. ಇದಾದ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಸಮಿತಿಯು ನ್ಯೂಜಿಲೆಂಡ್ ಎದುರಿನ ಏಕದಿನ ಹಾಗೂ ಟಿ20 ಸರಣಿಯಿಂದ ಕೈಬಿಟ್ಟಿತ್ತು.
ಲಂಕಾ ಎದುರಿನ ಸರಣಿಯಿಂದ ಸಂಜು ಸ್ಯಾಮ್ಸನ್ ಹೊರಬೀಳುತ್ತಿದ್ದಂತೆಯೇ, ಅವರ ಬದಲಿಗೆ ವಿದರ್ಭ ಮೂಲದ ಬ್ಯಾಟರ್ ಜಿತೇಶ್ ಶರ್ಮಾ ಅವರಿಗೆ ತಂಡದಲ್ಲಿ ಮಣೆ ಹಾಕಲಾಗಿತ್ತಾದರೂ, ಇನ್ನೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಇನ್ನು ಕೇರಳ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರದ ಹಿನ್ನೆಲೆಯಲ್ಲಿ, ಸಂಜು ಸ್ಯಾಮ್ಸನ್, ಮುಂಬರುವ ಐಪಿಎಲ್‌ವರೆಗೆ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ. 28 ವರ್ಷದ ಬ್ಯಾಟರ್ ಸಂಜು ಸ್ಯಾಮ್ಸನ್, 2023ರ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
Ind vs NZ ನಾವು ಸೋತಿದ್ದೇ ಈ ಕಾರಣದಿಂದ..! ಕಿವೀಸ್ ಸೋಲಿಗೆ ನೆಪ ಹೇಳಿದ ಹಾರ್ದಿಕ್ ಪಾಂಡ್ಯ..!
ಸಂಜು ಸ್ಯಾಮ್ಸನ್, ಸದ್ಯ ಸಂಪೂರ್ಣ ಫಿಟ್ ಆಗಿದ್ದರೂ ಸಹಾ, ನ್ಯೂಜಿಲೆಂಡ್ ಎದುರಿನ ಕೊನೆಯ ಎರಡು ಪಂದ್ಯಗಳಿಗೆ ಟೀಂ ಇಂಡಿಯಾ ಕೂಡಿಕೊಳ್ಳಲು ಬುಲಾವ್ ಬರುವ ಸಾಧ್ಯತೆ ಕಡಿಮೆ ಎನಿಸಿದೆ. ಯಾಕೆಂದರೇ, ತಂಡದಲ್ಲಿ ಇಶಾನ್ ಕಿಶನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಜಿತೇಶ್ ಶರ್ಮಾ ಕೂಡಾ ತಂಡದಲ್ಲಿರುವುದರಿಂದ ಸಂಜು ಸ್ಯಾಮ್ಸನ್, ಮತ್ತಷ್ಟು ಕಾಲ ಭಾರತ ತಂಡ ಕೂಡಿಕೊಳ್ಳಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯಲ್ಲಿ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ಕಿವೀಸ್ ತಂಡವು ರೋಚಕ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಪಂದ್ಯವು ಜನವರಿ 29ರಂದು ಲಖನೌದಲ್ಲಿ ಜರುಗಲಿದ್ದು, ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇನ್ನು ಕೊನೆಯ ಟಿ20 ಪಂದ್ಯವು ಫೆಬ್ರವರಿ 01ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.