WPL 2023: ಡೆಲ್ಲಿ ಎದುರಿನ ಪಂದ್ಯಕ್ಕೂ ಮುನ್ನ RCB ಮೆಂಟರ್ ಸಾನಿಯಾ ಮಿರ್ಜಾ ಮಹತ್ವದ ಸಂದೇಶ..!
ಇಂದು ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ ಅಭಿಯಾನ ಆರಂಭ
ಮಹತ್ವದ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡಕ್ಕೆ ಸಾನಿಯಾ ಟಿಪ್ಸ್
ಒತ್ತಡದ ಪರಿಸ್ಥಿತಿ ನಿಭಾಯಿಸಲು ಸಲಹೆ ಕೊಟ್ಟ ತಾರಾ ಅಥ್ಲೀಟ್
ಮುಂಬೈ(ಮಾ.05): ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೆ ಶನಿವಾರ ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಭಾರತದ ತಾರಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಆಗಿ ನೇಮಕವಾಗಿದ್ದು, ತಂಡದ ಮನೋಬಲ ಹೆಚ್ಚಿಸಲು ತಮ್ಮ ಚಿತ್ತ ನೆಟ್ಟಿದ್ದಾರೆ.
ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾನುವಾರವಾದ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ಮೂಗುತಿ ಸುಂದರಿ ಸಾನಿಯಾ ಮಿರ್ಜಾ, ಆರ್‌ಸಿಬಿ ಪಡೆಗೆ ಮಹತ್ವದ ಸಂದೇಶ ನೀಡಿದ್ದಾರೆ.
"ಸಾನಿಯಾ ಮಿರ್ಜಾ, ಆರ್‌ಸಿಬಿ ಹುಡುಗಿಯರ ಜತೆ ಕೆಲಕಾಲ ಅಮೂಲ್ಯ ಸಮಯವನ್ನು ಕಳೆದಿದ್ದಾರೆ. ಈ ಸಂದರ್ಭದಲ್ಲಿ ಪಂದ್ಯದ ವೇಳೆ ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು. ಹೊರಗಿನ ಟೀಕೆ ಟಿಪ್ಪಣಿಗಳನ್ನು ಹೇಗೆ ಎದುರಿಸಬೇಕು ಎನ್ನುವ ಸಲಹೆ ನೀಡಿದ್ದಾರೆ. ಇದಷ್ಟೇ ಅಲ್ಲದೇ ಯಾರು ಬೇಕಾದರೂ, ಯಾವುದೇ ಸಮಯದಲ್ಲಿ ಸಹಾಯಕ್ಕಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಸಾನಿಯಾ ಮಿರ್ಜಾ ಕಿವಿಮಾತು ಹೇಳಿದ್ದಾರೆ. ಅವರನ್ನು ಹೊಂದಿರುವುದು ನಮ್ಮ ಅದೃಷ್ಟವೆಂದು" ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸಾನಿಯಾ ಮಿರ್ಜಾ, ಆಟಗಾರ್ತಿಯರ ಜತೆ ಸಮಾಲೋಚಿಸುತ್ತಿರುವ ವಿಡಿಯೋದೊಂದಿಗೆ ಪೋಸ್ಟ್ ಮಾಡಿದೆ.
ಸಾನಿಯಾ ಮಿರ್ಜಾ, ತಾವು ಟೆನಿಸ್‌ನಿಂದ ನಿವೃತ್ತಿಯಾದ ಬಳಿಕ ಮಹಿಳಾ ಅಥ್ಲೀಟ್‌ಗಳಿಗೆ ತಾವು ಹೇಗೆ ನೆರವಾಗಬಹುದು ಎನ್ನುವುದರ ಬಗ್ಗೆ ಆಲೋಚಿಸುತ್ತಿದ್ದರು. ಪಂದ್ಯದ ವೇಳೆ ಮಹಿಳಾ ಅಥ್ಲೀಟ್‌ಗಳ ಮನೋಬಲವನ್ನು ಹೆಚ್ಚಿಸುವುದರ ಬಗ್ಗೆ ತಾವೇನು ಮಾಡಬಹುದು ಎಂದು ಚಿಂತಿಸಿದ್ದರು. ಕೇವಲ ಪಂದ್ಯದಲ್ಲಿ ಆಡುವುದು ಮಾತ್ರವಲ್ಲದೇ, ಅಥ್ಲೀಟ್‌ಗಳು ಮೀಡಿಯಾ ಗಮನ ಸೆಳೆಯುವ ವಿಚಾರ, ಫೋಟೋಶೋಟ್ ಇಂತಹ ವಿಚಾರಗಳನ್ನು ಅಥ್ಲೀಟ್‌ಗಳು ಹೇಗೆ ನಿಭಾಯಿಸಬೇಕು ಎನ್ನುವ ಅರಿವು ಓರ್ವ ಆಟಗಾರ್ತಿಯಾಗಿ ಸಾನಿಯಾಗೆ ಚೆನ್ನಾಗಿ ಅರಿವಿದೆ. ಇದರ ಕುರಿತಂತೆ ಆಟಗಾರ್ತಿಯರಿಗೆ ಸಾನಿಯಾ ಮಿರ್ಜಾ ಒಳನೋಟ ನೀಡುವುದರಿಂದ ಆಟಗಾರ್ತಿಯರು ಒತ್ತಡದ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲಿದ್ದಾರೆ ಎನ್ನುವ ವಿಶ್ವಾಸವನ್ನು ಆರ್‌ಸಿಬಿ ವ್ಯಕ್ತಪಡಿಸಿದೆ.
WPL 2023: ಡೆಲ್ಲಿ ಕ್ಯಾಪಿಟಲ್ಸ್ ಎದುರು ಇಂದು ಆರ್‌ಸಿಬಿ ಅಭಿಯಾನ ಆರಂಭ
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 20 ಲೀಗ್ ಪಂದ್ಯಗಳು ಹಾಗೂ ಎರಡು ಪ್ಲೇ ಆಫ್ ಪಂದ್ಯಗಳು ಸೇರಿದಂತೆ ಒಟ್ಟು 22 ಪಂದ್ಯಗಳು ಜರುಗಲಿವೆ. 23 ದಿನಗಳ ಕಾಲ ನಡೆಯಲಿರುವ ಈ ಐತಿಹಾಸಿಕ ಮಹಿಳಾ ಟಿ20 ಲೀಗ್ ಟೂರ್ನಿಯಲ್ಲಿ ಒಟ್ಟು 87 ಆಟಗಾರ್ತಿಯರು ಪಾಲ್ಗೊಂಡಿದ್ದು, ಭಾರತ ಸೇರಿದಂತೆ ಏಳು ದೇಶದ ಆಟಗಾರ್ತಿಯರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತ ನಡೆಯಲಿದ್ದು, ಪ್ರತಿ ತಂಡ ಇತರ 4 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಲಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡಗಳು ಎಲಿಮಿನೇಟರ್ನಲ್ಲಿ ಸೆಣಸಲಿವೆ. ನಾಕೌಟ್ ಪಂದ್ಯಕ್ಕೂ ಮುನ್ನ ಪ್ರತಿ ತಂಡವು 8 ಪಂದ್ಯಗಳನ್ನಾಡಲಿದೆ.