'ಸುನಿಲ್ ಚೆಟ್ರಿ ಭಾರತ ಫುಟ್ಬಾಲ್ ತಂಡದ ವಿರಾಟ್ ಕೊಹ್ಲಿ': ನೆಟ್ಟಿಗರ ಬಣ್ಣನೆ
* ಸ್ಯಾಪ್ ಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಸುನಿಲ್ ಚೆಟ್ರಿ ಪಡೆ
* ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ ನಾಯಕ ಸುನಿಲ್ ಚೆಟ್ರಿ
* ವಿರಾಟ್ ಕೊಹ್ಲಿ ಜತೆ ಸುನಿಲ್ ಚೆಟ್ರಿಯನ್ನು ಹೋಲಿಸಿದ ನೆಟ್ಟಿಗರು
ಬೆಂಗಳೂರು(ಜೂ.22): 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡವು 4-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಇಲ್ಲಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ಸುಮಾರು 22 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಎದುರು ಅಮೋಘ ಪ್ರದರ್ಶನ ತೋರಿದ ನಾಯಕ ಸುನಿಲ್ ಚೆಟ್ರಿ ಆಕರ್ಷಕ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸುನಿಲ್ ಚೆಟ್ರಿಯನ್ನು ಭಾರತ ಫುಟ್ಬಾಲ್ ತಂಡದ ವಿರಾಟ್ ಕೊಹ್ಲಿ ಎನ್ನುವಂತೆ ಬಿಂಬಿಸಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಬಹುನಿರೀಕ್ಷಿತ ಪಂದ್ಯದಲ್ಲಿ ಆರಂಭದಲ್ಲೇ ಭಾರತ ತಂಡವು ಮುನ್ನಡೆ ಗಳಿಸಿತು. ಪಂದ್ಯದ 10ನೇ ನಿಮಿಷದಲ್ಲಿ ಪಾಕಿಸ್ತಾನದ ಗೋಲು ಕೀಪರ್ ಸಕೀಬ್ ಮಾಡಿದ ಎಡವಟ್ಟಿನ ಲಾಭ ಬಳಸಿಕೊಂಡ ಸುನಿಲ್ ಚೆಟ್ರಿ, ತಮ್ಮ ಅದ್ಭುತ ಕಾಲ್ಚಳಕದ ಮೂಲಕ ಚೆಂಡನ್ನು ಗೋಲು ಪಟ್ಟಿಯೊಳಗೆ ಸೇರಿಸುವಲ್ಲಿ ಯಶಸ್ವಿಯಾದರು.
ಇದಾದ ಬಳಿಕ 15ನೇ ನಿಮಿಷದಲ್ಲಿ ಪಾಕ್ ನಾಯಕ ಸುಲೈಮಾನ್ ಗೋಲು ಪಟ್ಟಿಗೆಯ ಮುಂದೆ ಚೆಂಡನ್ನು ರಕ್ಷಿಸುವ ಯತ್ನದಲ್ಲಿ 'ವಾಲಿಬಾಲ್' ರೀತಿಯಲ್ಲಿ ಚೆಂಡನ್ನು ಕೈಯಲ್ಲಿ ತಳ್ಳಿದ ಪರಿಣಾಮ ಭಾರತಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ಮರುನಿಮಿಷದಲ್ಲೇ ಸುನಿಲ್ ಚೆಟ್ರಿ ಆಕರ್ಷಕ ಗೋಲು ಬಾರಿಸುವ ಮೂಲಕ ಭಾರತದ ಮುನ್ನಡೆಯನ್ನು 2-0 ಗೆ ಹೆಚ್ಚಿಸಿದರು. ಮೊದಲಾರ್ಧದ ಅಂತ್ಯದವರೆಗೂ ಭಾರತ ಇದೇ ಮುನ್ನಡೆ ಕಾಯ್ದುಕೊಂಡಿತು.
ಇನ್ನು ದ್ವಿತಿಯಾರ್ಧದಲ್ಲಿ ಕೊಂಚ ಎಚ್ಚೆತ್ತುಕೊಂಡಂತೆ ಕಂಡುಬಂದ ಪಾಕಿಸ್ತಾನ ತಂಡವು ಆಕ್ರಮಣಕಾರಿ ಆಟದ ಜತೆಗೆ ರಕ್ಷಣಾತ್ಮಕ ವಿಭಾಗ ಕೂಡಾ ಸಂಘಟಿತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು. ಹೀಗಾಗಿ ದ್ವಿತಿಯಾರ್ಧದ ಆರಂಭದಲ್ಲಿ ಭಾರತ ಗೋಲು ಬಾರಿಸಲು ಸಫಲವಾಗಲಿಲ್ಲ. ಆದರೆ 74 ನಿಮಿಷದಲ್ಲಿ ಸಿಕ್ಕ ಮತ್ತೊಂದು ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ನಾಯಕ ಸುನಿಲ್ ಚೆಟ್ರಿ ಯಶಸ್ವಿಯಾದರು. ಈ ಮೂಲಕ ಚೆಟ್ರಿ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಗೋಲು ಸಿಡಿಸಿ ಸಂಭ್ರಮಿಸಿದರು. ಇನ್ನು 81ನೇ ನಿಮಿಷದಲ್ಲಿ ಉದಾಂತ್ ಸಿಂಗ್ ಆಕರ್ಷಕ ಗೋಲು ಬಾರಿಸಿ ಭಾರತದ ಗೆಲುವಿನ ಅಂತರವನ್ನು 4-0ಗೆ ಹಿಗ್ಗಿಸಿದರು.
ಇನ್ನು ಸುನಿಲ್ ಚೆಟ್ರಿಯ ಅದ್ಭುತ ಕಾಲ್ಚಳಕದಾಟಕ್ಕೆ ನೆಟ್ಟಿಗರು ಮನಸೋತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುನಿಲ್ ಚೆಟ್ರಿಯನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಜತೆ ಹೋಲಿಸಲಾರಂಭಿಸಿದ್ದಾರೆ. ಪಾಕಿಸ್ತಾನ ಎದುರು ಕಣಕ್ಕಿಳಿದಾಗಲೆಲ್ಲಾ ಭಾರತ ಕ್ರಿಕೆಟ್ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಸ್ಪೋಟಕ ಆಟದ ಮೂಲಕ ಬದ್ದ ಎದುರಾಳಿ ತಂಡಕ್ಕೆ ಚಳಿಜ್ವರ ಬರುವಂತೆ ಮಾಡುತ್ತಾರೆ. ಅದೇ ರೀತಿ ಇದೀಗ ಚೆಟ್ರಿ ಕೂಡಾ ಪಾಕ್ ತಂಡವು ಬೆಚ್ಚಿ ಬೀಳುವಂತಹ ಪ್ರದರ್ಶನ ತೋರಿದ್ದಾರೆ.
90ನೇ ಗೋಲು: ಸಕ್ರಿಯ ಫುಟ್ಬಾಲಿಗರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಚೆಟ್ರಿ!
ಈ ಕುರಿತಂತೆ ಟ್ವೀಟ್ ಮಾಡಿರುವ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಡೆಲ್ಲಿ ಹುಡುಗ, ಬೆಂಗಳೂರು ಪರ ಆಡುವಾತ, ಪಾಕಿಸ್ತಾನ ವಿರುದ್ದ ಅದ್ಭುತ ಆಟಗಾರ. G.O.A.T ಎಂದು ಟ್ವೀಟ್ ಮಾಡಿದೆ.
ಡೆಲ್ಲಿ ಮೂಲದ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕ್ ವಿರುದ್ದ ವಿರಾಟ್ ಕೊಹ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಕಳೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಪಾಕಿಸ್ತಾನ ಎದುರು ಏಕಾಂಗಿ ಹೋರಾಟದ ಮೂಲಕ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಸದ್ಯಕ್ಕೆ ಮರೆಯಲು ಸಾಧ್ಯವಿಲ್ಲ.
ಇನ್ನೊಂದೆಡೆ ಸುನಿಲ್ ಚೆಟ್ರಿ ತೆಲಂಗಾಣದ ಸಿಖಂದರಾಬಾದ್‌ನಲ್ಲಿ ಜನಿಸಿದರೂ, ಸದ್ಯ ಡೆಲ್ಲಿ ನಿವಾಸಿಯಾಗಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದು, ಇದೀಗ ಪಾಕ್ ಎದುರು ಅಮೋಘ ಪ್ರದರ್ಶನ ತೋರಿದ್ದಾರೆ. ಈ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ ಜತೆಗೆ ಸುನಿಲ್ ಚೆಟ್ರಿಯನ್ನು ಹೋಲಿಸಲಾಗುತ್ತಿದೆ.
ಇನ್ನೋರ್ವ ನೆಟ್ಟಿಗ ಸುನಿಲ್ ಚೆಟ್ರಿ ಭಾರತ ಫುಟ್ಬಾಲ್ ತಂಡದ ವಿರಾಟ್ ಕೊಹ್ಲಿ ಎಂದು ಬಣ್ಣಿಸಿದ್ದಾರೆ. ವಿರಾಟ್-ಚೆಟ್ರಿ ಹೋಲಿಕೆ ಕುರಿತಾದ ಮತ್ತಷ್ಟು ಟ್ವೀಟ್‌ಗಳು ಇಲ್ಲಿವೆ ನೋಡಿ.