* ಐಪಿಎಲ್‌ನಲ್ಲಿ ಮೂರನೇ ಶತಕ ಚಚ್ಚಿದ ಶುಭ್‌ಮನ್ ಗಿಲ್‌* ಶುಭ್‌ಮನ್ ಗಿಲ್ ಆಟ ಮೆಚ್ಚಿಕೊಂಡ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್* ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿರುವ ಗಿಲ್ 

ಅಹಮದಾಬಾದ್‌(ಮೇ.29): 2023ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಬ್ಯಾಟರ್‌ ಶುಭ್‌ಮನ್‌ ಗಿಲ್ ತಮ್ಮ ಅಮೋಘ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಮಿಂಚುತ್ತಿದ್ದು, ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸುವ ಮೂಲಕ ಆರೆಂಜ್‌ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡುಲ್ಕರ್‌, ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಅವರ ಗುಣಗಾನ ಮಾಡಿದ್ದಾರೆ.

16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯವು ಮೇ 28ರಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಆದರೆ ನಿರಂತರವಾಗಿ ಮಳೆ ಸುರಿದಿದ್ದರಿಂದಾಗಿ ಐಪಿಎಲ್ ಪೈನಲ್‌ ಪಂದ್ಯವು ಮೀಸಲಿ ದಿನವಾದ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. 

ಇನ್ನು ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟ್‌ ದಂತಕಥೆ ತೆಂಡುಲ್ಕರ್, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶುಭ್‌ಮನ್ ಗಿಲ್ ಅವರ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಶುಭ್‌ಮನ್‌ ಗಿಲ್ ಅವರ ಈ ಆವೃತ್ತಿಯಲ್ಲಿನ ಪ್ರದರ್ಶನವನ್ನು ಮರೆಯಲು ಸಾಧ್ಯವಿಲ್ಲ. ಅವರು ಬಾರಿಸಿದ ಎರಡು ಶತಕಗಳು ಫಲಿತಾಂಶದ ಮೇಲೆ ಮಹತ್ತರ ಪರಿಣಾಮ ಬೀರಿದೆ. ಒಂದು ಶತಕವು ಮುಂಬೈ ಇಂಡಿಯನ್ಸ್ ತಂಡದ ಕನಸನ್ನು ಭಗ್ನಗೊಳಿಸಿದರೆ, ಇನ್ನೊಂದು ಶತಕ ಇತರ ತಂಡಗಳ ಕನಸನ್ನು ನುಚ್ಚುನೂರು ಮಾಡಿತು. 

Scroll to load tweet…

ನನಗೆ ಶುಭ್‌ಮನ್‌ ಗಿಲ್ ಅವರಿಂದ ಪ್ರಭಾವಿತವಾಗಿದ್ದೇನೆಂದರೆ, ಅವರ ಬ್ಯಾಟಿಂಗ್ ಕೌಶಲ್ಯ ಅನನ್ಯವಾಗಿತ್ತು. ರನ್‌ ಗಳಿಸುವ ಹಸಿವು, ವಿಕೆಟ್‌ಗಳ ಮಧ್ಯ ಓಡುವ ರೀತಿ ನಿಜಕ್ಕೂ ನನಗೂ ಆಶ್ಚರ್ಯಚಕಿತವನ್ನಾಗಿಸಿದೆ ಎಂದು ತೆಂಡುಲ್ಕರ್ ಹೇಳಿದ್ದಾರೆ.

ಶೀಘ್ರ ಕ್ರಿಕೆಟ್‌ಗೆ ಬುಮ್ರಾ ವಾಪಸ್‌: ಸುಳಿವು ಕೊಟ್ಟ ಮಾರಕ ವೇಗಿ!

ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವು ಸಾಧಿಸಬೇಕಿದ್ದರೇ, ಆರಂಭದಲ್ಲೇ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್‌ಗಳ ವಿಕೆಟ್ ಕಬಳಿಸಬೇಕು. ಯಾಕೆಂದರೆ ಗುಜರಾತ್ ತಂಡದಲ್ಲಿ ಹಾರ್ದಿಕ್‌ ಪಾಂಡ್ಯ, ಡೇವಿಡ್ ಮಿಲ್ಲರ್ ಹಾಗೂ ಶುಭ್‌ಮನ್ ಗಿಲ್ ಅವರಂತಹ ಸ್ಪೋಟಕ ಬ್ಯಾಟರ್‌ಗಳಿದ್ದಾರೆ. ಗಿಲ್, ಪಾಂಡ್ಯ ಹಾಗೂ ಮಿಲ್ಲರ್ ಗುಜರಾತ್ ಪರ ಕೀ ವಿಕೆಟ್‌ಗಳಾಗಿವೆ. ಇನ್ನು ಚೆನ್ನೈ ತಂಡವು ಕೂಡಾ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿದ್ದು, ಧೋನಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಫೈನಲ್ ಪಂದ್ಯವು ಸಾಕಷ್ಟು ಕುತೂಹಲಭರಿತವಾಗಿರಲಿದೆ ಎಂದು ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭ್‌ಮನ್ ಗಿಲ್‌ 16 ಪಂದ್ಯಗಳನ್ನಾಡಿ 3 ಶತಕ ಹಾಗೂ 4 ಅರ್ಧಶತಕ ಸಹಿತ 851 ರನ್ ಗಳಿಸಿದ್ದು, ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್‌ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.