ಮುಂಬೈ(ನ.15): ಭಾರತ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡುಲ್ಕರ್ ಪಾಲಿಗೆ ನವೆಂಬರ್ 15 ಎಂದೆಂದಿಗೂ ಮರೆಯಲಾಗದ ಅವಿಸ್ಮರಣೀಯ ದಿನ. ಈ ದಿನದಂದೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮೊದಲ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನಾಡಲು ಬ್ಯಾಟ್ ಹಿಡಿದು ಮೈದಾನಕ್ಕಿಳಿದಿದ್ದರು. 

ಹೌದು, ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್ 1989ರ ನವೆಂಬರ್ 15ರಂದು ಪಾಕಿಸ್ತಾನ ವಿರುದ್ಧ ಮೊಟ್ಟ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದರು. ಇದಾಗಿ ಸರಿ ಸುಮಾರು 24 ವರ್ಷಗಳ ಬಳಿಕ 2013ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಬ್ಯಾಟ್ ಹಿಡಿದು ಮೈದಾನಕ್ಕಿಳಿದಿದ್ದರು.

ಈ ದಿನವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಈ ದಿನ 1989ರಲ್ಲಿ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2013ರಂದು ಇದೇ ದಿನ ಭಾರತ ಪರ ದಿಗ್ಗಜ ಆಟಗಾರ ಕೊನೆಯ ಬಾರಿಗೆ ಟೀಂ ಇಂಡಿಯಾ ಕೊನೆಯದಾಗಿ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಿದ್ದರು. ಜಗತ್ತಿನಾದ್ಯಂತ ಇರುವ ಕೋಟ್ಯಾಂತರ ಮಂದಿಯನ್ನು ಸ್ಪೂರ್ತಿಗೊಳಿಸಿದ ನಿಮಗೆ ಅನಂತ ಧನ್ಯವಾದಗಳು ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ತಮ್ಮ ಬ್ಯಾಕ್‌ಫುಟ್ ಢಿಫೆನ್ಸ್ ಗುಟ್ಟು ಶೇರ್ ಮಾಡಿದ ಕ್ರಿಕೆಟ್ 'ದೇವರು

ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಪಾಕಿಸ್ತಾನ ವಿರುದ್ಧ ಕೇವಲ 15 ರನ್ ಬಾರಿಸಿ ವೇಗಿ ವಕಾರ್ ಯೂನಿಸ್‌ಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ವಿಂಡೀಸ್ ಎದುರಿನ ಕೊನೆಯ ಟೆಸ್ಟ್ ಪಂದ್ಯದಲ್ಲಿ 74 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

 

ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಮೊದಲ ಹಾಗೂ ಏಕೈಕ ಕ್ರಿಕೆಟಿಗ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ. ಟೆಸ್ಟ್‌ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 49 ಶತಕ ಬಾರಿಸುವ ಮೂಲಕ ಸಚಿನ್ ಈ ಸಾಧನೆ ಮಾಡಿದ್ದಾರೆ.

24 ವರ್ಷಗಳ ಸುದೀರ್ಘ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಸಚಿನ್ ತೆಂಡುಲ್ಕರ್ ಭಾರತ ಪರ 6 ಏಕದಿನ ಪಂದ್ಯಗಳನ್ನಾಡಿದ್ದಾರೆ. ತವರಿನಲ್ಲಿ 2011ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆದಾಗ ಸಚಿನ್ ಟೀಂ ಇಂಡಿಯಾದ ಸದಸ್ಯರಾಗಿದ್ದರು. ಇನ್ನು 2010ರಲ್ಲಿ ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅಜೇಯ ದ್ವಿಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಸಚಿನ್ ಪಾತ್ರರಾಗಿದ್ದರು.