ವೈಯಕ್ತಿಕ ಕಾರಣಗಳಿಂದಾಗಿ ಋತುರಾಜ್ ಗಾಯಕ್ವಾಡ್ ಯಾರ್ಕ್‌ಷೈರ್ ಪರ ಕೌಂಟಿ ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದಾರೆ. ಐಪಿಎಲ್ ಗಾಯದ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಮುನ್ನವೇ ಋತುರಾಜ್ ತವರಿಗೆ ಮರಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಅವರ ಬದಲಿ ಆಟಗಾರನ ಹುಡುಕಾಟದಲ್ಲಿದೆ.
ಲಂಡನ್: ಭಾರತದ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಇಂಗ್ಲೆಂಡ್‌ನಲ್ಲಿ ಯಾರ್ಕ್‌ಷೈರ್ ಪರ ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದರಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಋತುರಾಜ್ ಕೌಂಟಿ ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಯಾರ್ಕ್‌ಷೈರ್ ತಂಡವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ತಿಂಗಳ 22 ರಂದು ಸರ್ರೆ ವಿರುದ್ಧದ ಪಂದ್ಯದಲ್ಲಿ ಋತುರಾಜ್ ಯಾರ್ಕ್‌ಷೈರ್ ಪರ ಚೊಚ್ಚಲ ಪಂದ್ಯವನ್ನಾಡಬೇಕಿತ್ತು. ಕೌಂಟಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮುನ್ನವೇ ಗಾಯಕ್ವಾಡ್ ಇದೀಗ ತವರಿಗೆ ವಾಪಸ್ಸಾಗಿದ್ದಾರೆ.
18ನೇ ಆವೃತ್ತಿಯ ಐಪಿಎಲ್‌ನಲ್ಲಿ ಏಪ್ರಿಲ್ 8 ರಂದು ಗಾಯಗೊಂಡು ಕ್ರಿಕೆಟ್‌ನಿಂದ ಹೊರಬಿದ್ದ ಬಳಿಕ ಋತುರಾಜ್ ಆನಂತರ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡಿಲ್ಲ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಟೆಸ್ಟ್ ಅನಧಿಕೃತ ಸರಣಿಗಾಗಿ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದರೂ ಋತುರಾಜ್‌ಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಕ್ಕಿರಲಿಲ್ಲ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದ ಋತುರಾಜ್ ಗಾಯದಿಂದಾಗಿ ಹಿಂದೆ ಸರಿದ ನಂತರ ಎಂ ಎಸ್ ಧೋನಿ ಚೆನ್ನೈ ತಂಡವನ್ನು ಮುನ್ನಡೆಸಿದ್ದರು. ಆದರೆ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ತಂಡವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ತಂಡ ಎನ್ನುವ ಕುಖ್ಯಾತಿಗೆ ಪಾತ್ರವಾಗಿತ್ತು.
28 ವರ್ಷದ ಋತುರಾಜ್ ಗಾಯಕ್ವಾಡ್ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕೇವಲ ಐದು ಪಂದ್ಯಗಳನ್ನಷ್ಟೇ ಆಡಲು ಶಕ್ತರಾಗಿದ್ದರು. ಕಳೆದ ಆವೃತ್ತಿಯಲ್ಲಿ ಋತುರಾಜ್ ಗಾಯಕ್ವಾಡ್ ನಾಯಕನಾಗಿ ಹಾಗೂ ಬ್ಯಾಟರ್ ಆಗಿ ದಯನೀಯ ವೈಫಲ್ಯ ಅನುಭವಿಸಿದ್ದರು.
ಋತುರಾಜ್ ಬದಲಿಗೆ ಚೆನ್ನೈ ತಂಡಕ್ಕೆ ಸೇರಿಸಿಕೊಂಡ ಯುವ ಆಟಗಾರ ಆಯುಷ್ ಮಾತ್ರೆ ಚೆನ್ನೈ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಋತುರಾಜ್ ಅವರ ಅನಿರೀಕ್ಷಿತ ಹಿಂದೆ ಸರಿಯುವಿಕೆ ನಿರಾಶಾದಾಯಕವಾಗಿದೆ ಮತ್ತು ಕೊನೆಯ ಕ್ಷಣದಲ್ಲಿ ಯಾರನ್ನು ಬದಲಿ ಆಟಗಾರನನ್ನಾಗಿ ಮಾಡಬೇಕೆಂಬ ಬಗ್ಗೆ ಅನಿಶ್ಚಿತತೆ ಇದೆ ಎಂದು ಯಾರ್ಕ್‌ಷೈರ್ ಕೌಂಟಿ ತಂಡದ ಕೋಚ್ ಆಂಥೋನಿ ಮೆಕ್‌ಗ್ರಾತ್ ಹೇಳಿದ್ದಾರೆ. ಜೂನ್‌ನಲ್ಲಿ ಋತುರಾಜ್ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಯಾರ್ಕ್‌ಷೈರ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು.
38 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಋತುರಾಜ್ ಗಾಯಕ್ವಾಡ್ 41.77 ಸರಾಸರಿಯಲ್ಲಿ 2632 ರನ್ ಗಳಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದ ಪರ ಆಡಿದ ಋತುರಾಜ್ ನಾಲ್ಕು ಇನ್ನಿಂಗ್ಸ್‌ಗಳಿಂದ ಕೇವಲ 20 ರನ್ ಗಳಿಸಿದ್ದರು. ಆದರೆ ಕಳೆದ ದೇಶೀಯ ಋತುವಿನಲ್ಲಿ 12 ಇನ್ನಿಂಗ್ಸ್‌ಗಳಿಂದ ಋತುರಾಜ್ 571 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು.
ಇನ್ನು 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ ರಾಯಲ್ಸ್‌ನಿಂದ ಚೆನ್ನೈಗೆ ಕರೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನುವಂತಹ ಚರ್ಚೆಗಳು ಜೋರಾಗಿವೆ. ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಆಲ್ರೌಂಡರ್ ಶಿವಂ ದುಬೆ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ರಾಜಸ್ಥಾನ ರಾಯಲ್ಸ್‌ಗೆ ನೀಡಿ ಸಂಜು ಸ್ಯಾಮ್ಸನ್ ಅವರನ್ನು ಕರೆತರಲು ಚೆನ್ನೈ ಸೂಪರ್ ಕಿಂಗ್ಸ್ ಮಾಸ್ಟರ್ ಪ್ಲಾನ್ ರೂಪಿಸಿದೆ ಎನ್ನಲಾಗುತ್ತದೆ. ಒಂದು ವೇಳೆ ಸಂಜು ಸ್ಯಾಮ್ಸನ್ ಸಿಎಸ್‌ಕೆ ತಂಡ ಕೂಡಿಕೊಂಡರೆ ನಾಯಕರಾಗುತ್ತಾರೋ ಅಥವಾ ಋತುರಾಜ್ ಗಾಯಕ್ವಾಡ್ ಅವರೇ ನಾಯಕರಾಗಿ ಮುಂದುವರೆಯುತ್ತಾರೋ ಕಾದು ನೋಡಬೇಕಿದೆ.
