* ಸನ್‌ರೈಸರ್ಸ್ ಹೈದರಾಬಾದ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ* ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು* ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಎರಡು ಬದಲಾವಣೆ
ಮುಂಬೈ(ಮೇ.08): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 54ನೇ ಪಂದ್ಯದಲ್ಲಿಂದು ದಕ್ಷಿಣ ಭಾರತ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯವನ್ನು ವಹಿಸಿದೆ.
ಇಂದಿನ ಪಂದ್ಯದಲ್ಲಿ ಆಫ್ಘಾನಿಸ್ತಾನದ ಯುವ ಎಡಗೈ ವೇಗಿ ಫಜಲ್‌ಹಕ್ ಫಾರೂಕಿ (Fazalhaq Farooqi) ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಶ್ರೇಯಸ್ ಗೋಪಾಲ್ ಬದಲಿಗೆ ಜಗದೀಶ್ ಸುಚಿತ್ ತಂಡ ಕೂಡಿಕೊಂಡಿದ್ದಾರೆ ಈ ಮೊದಲಿನ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಕಾಡಿದ್ದ ಮಾರ್ಕೊ ಯಾನ್ಸನ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ
ಪ್ಲೇ ಆಫ್ ಪ್ರವೇಶಿಸುವ ದೃಷ್ಟಿಯಿಂದ ಎರಡೂ ತಂಡಗಳ ಪಾಲಿಗೆ ಇಂದಿನ ಪಂದ್ಯ ಸಾಕಷ್ಟು ಮಹತ್ವದ್ದೆನಿಸಿದ್ದು, ಎರಡೂ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸುವ ನಿರೀಕ್ಷೆಯಿದೆ. ಒಂದು ಕಡೆ ಕೇನ್ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ್ದು, ಇನ್ನೊಂದು ಆರೆಂಜ್ ಆರ್ಮಿಯ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸುವ ಸಾಧ್ಯತೆಯಿದೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಾ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿತ್ತು. ಆದರೆ ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿತ್ತು.
RCB ಫ್ಯಾನ್ ಫಾಲೋವರ್ಸ್ ಹೆಚ್ಚಾಗಲು ಕಾರಣವೇನು ಗೊತ್ತಾ..?
ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 'Go Green' ಅಭಿಯಾನದಡಿಯಲ್ಲಿ ('Go Green' initiative) ಹಸಿರು ಜೆರ್ಸಿ ತೊಟ್ಟು ಮೈದಾನಕ್ಕಿಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2011ರಿಂದಲೂ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರು ಜೆರ್ಸಿ ತೊಟ್ಟು ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ. ಆರ್‌ಸಿಬಿ ತಂಡವು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಮುಂದಿನ ತಲೆಮಾರಿಗೆ ಸ್ವಚ್ಛ ಹಾಗೂ ಹಸಿರಿನಿಂದ ಕೂಡಿದ ಪರಿಸರವನ್ನು ಉಳಿಸಲು ಜಾಗೃತಿ ಮೂಡಿಸುವುದಾಗಿದೆ.
ತಂಡಗಳು ಹೀಗಿವೆ ನೋಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್, ಮಹಿಪಾಲ್ ಲೋಮ್ರಾರ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್.
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್(ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್, ನಿಕೋಲಸ್ ಪೂರನ್, ಶಶಾಂಕ್ ಶರ್ಮಾ, ವಾಷಿಂಗ್ಟನ್ ಸುಂದರ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್, ಫಜಲ್‌ಹಕ್ ಫಾರೂಕಿ, ಉಮ್ರಾನ್ ಮಲಿಕ್.
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
