* 15ನೇ ಆವೃತ್ತಿಗೂ ಮುನ್ನ ತನ್ನ ನಾಯಕನ ಹೆಸರನ್ನು ಘೋಷಿಸಿದ ಆರ್‌ಸಿಬಿ* ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ನೂತನ ನಾಯಕರಾಗಿ ಆಯ್ಕೆ* ನೂತನ ಆರ್‌ಸಿಬಿ ಜೆರ್ಸಿ ಬಗ್ಗೆ ಸಂತಸ ವ್ಯಕ್ತಪಡಿಸಿದ ಮಾಜಿ ನಾಯಕ ವಿರಾಟ್ ಕೊಹ್ಲಿ
ಬೆಂಗಳೂರು: 2022ರ ಐಪಿಎಲ್‌ಗೆ ಆರ್‌ಸಿಬಿ (RCB) ತಂಡ ಹೊಸ ವಿನ್ಯಾಸದ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದೆ. ಶನಿವಾರ ಆಯೋಜಿಸಿದ್ದ ವಿಶೇಷ ಕಾರ‍್ಯಕ್ರಮದಲ್ಲಿ, ಅಭಿಮಾನಿಗಳ ಸಮ್ಮುಖದಲ್ಲಿ ತಂಡ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತು. ನಾಯಕ ಫಾಫ್ ಡು ಪ್ಲೆಸಿಸ್ (Faf du Plessis), ತಂಡದ ಆಟಗಾರರಾದ ದಿನೇಶ್ ಕಾರ್ತಿಕ್ (Dinesh Karthik), ಹರ್ಷಲ್ ಪಟೇಲ್, ಶಾಬಾಜ್ ಅಹ್ಮದ್, ಲುವ್ನಿತ್ ಪಾಲ್ಗೊಂಡಿದ್ದರು. ನೂತನ ಜೆರ್ಸಿ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಇದು ತಮಗೆ ಅತಿಹೆಚ್ಚು ಹಿಡಿಸಿದ ಆರ್‌ಸಿಬಿ ಜೆರ್ಸಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ತಂಡದ ನೂತನ ಜೆರ್ಸಿಯು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿ ಮುಂಬರುವ ಐಪಿಎಲ್ 15ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವನ್ನು ಮುನ್ನಡೆಸಲಿದ್ದಾರೆ. 37 ವರ್ಷದ ಡು ಪ್ಲೆಸಿಯನ್ನು ನಾಯಕನನ್ನಾಗಿ ನೇಮಿಸಿರುವುದಾಗಿ ಆರ್‌ಸಿಬಿ, ಶನಿವಾರ ಬೆಂಗಳೂರಲ್ಲಿ ಆಯೋಜಿಸಿದ್ದ ವಿಶೇಷ ಕಾರ‍್ಯಕ್ರಮದಲ್ಲಿ ಘೋಷಿಸಿತು. ವಿರಾಟ್ ಕೊಹ್ಲಿಯವರಿಂದ ತೆರವಾಗಿದ್ದ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಅನುಭವಿ ಕ್ರಿಕೆಟಿಗ ಫಾಫ್ ತುಂಬಲಿದ್ದಾರೆ.
ಆರ್‌ಸಿಬಿ ತಂಡದ 7ನೇ ನಾಯಕ ಫಾಫ್
ಆರ್‌ಸಿಬಿಯನ್ನು ಮುನ್ನಡೆಸಲಿರುವ 7ನೇ ಆಟಗಾರ ಎನ್ನುವ ಹಿರಿಮೆಗೆ ಡು ಪ್ಲೆಸಿಸ್ ಪಾತ್ರರಾಗಲಿದ್ದಾರೆ. ಈ ಮೊದಲು ರಾಹುಲ್ ದ್ರಾವಿಡ್(14 ಪಂದ್ಯ), ಅನಿಲ್ ಕುಂಬ್ಳೆ(26 ಪಂದ್ಯ), ಕೆವಿನ್ ಪೀಟರ್‌ಸನ್(06 ಪಂದ್ಯ), ಡೇನಿಯಲ್ ವೆಟ್ಟೋರಿ (22 ಪಂದ್ಯ), ವಿರಾಟ್ ಕೊಹ್ಲಿ(140 ಪಂದ್ಯ) ಹಾಗೂ ಶೇನ್ ವಾಟ್ಸನ್(03 ಪಂದ್ಯ) ತಂಡದ ನಾಯಕರಾಗಿದ್ದರು. ಡು ಪ್ಲೆಸಿಸ್ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸಹ ಗಮನಾರ್ಹ.
ಟಿ20 ನಾಯಕನಾಗಿ ಉತ್ತಮ ದಾಖಲೆ
ಫಾಫ್ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡವನ್ನು ಮುನ್ನಡೆಸುವುದರ ಜೊತೆಗೆ ಫ್ರಾಂಚೈಸಿ ಲೀಗ್‌ಗಳಲ್ಲಿ ಕೊಮಿಲಾ ವಿಕ್ಟೋರಿಯನ್ಸ್, ಪಾರ್ಲ್ ರಾಕ್ಸ್, ಸೇಂಟ್ ಕಿಟ್ಸ್ ಅಂಡ್ ನೆವೆಸ್ ಪೇಟ್ರಿಯಾಟ್ಸ್ ಹಾಗೂ ಸೇಂಟ್ ಲೂಸಿಯಾ ಕಿಂಗ್ಸ್ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ನಾಯಕನಾಗಿ 79 ಪಂದ್ಯಗಳನ್ನು ಆಡಿರುವ ಡು ಪ್ಲೆಸಿಸ್, 43 ಗೆಲುವು, 34 ಸೋಲು ಕಂಡಿದ್ದಾರೆ. 1 ಪಂದ್ಯ ಟೈ ಆದರೆ, 1 ಪಂದ್ಯ ಫಲಿತಾಂಶ ನೀಡಿಲ್ಲ.
ಭಾರತ ತಂಡದಿಂದ ಸಿರಾಜ್ ಬಿಡುಗಡೆ
ಬೆಂಗಳೂರು: ಲಂಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆಯದ ವೇಗಿ ಮೊಹಮದ್ ಸಿರಾಜ್‌ರನ್ನು ಭಾರತ ತಂಡ ಬಿಡುಗಡೆ ಮಾಡಿದೆ. ಅವರು ತಮ್ಮ ಐಪಿಎಲ್ ತಂಡ ಆರ್‌ಸಿಬಿಯನ್ನು ಕೂಡಿಕೊಳ್ಳಲಿದ್ದು, ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಂಕಾ ವಿರುದ್ಧ ಟೆಸ್ಟ್ ಮುಕ್ತಾಯಗೊಂಡ ಬಳಿಕ ಭಾರತ ತಂಡದ ಆಟಗಾರರು ತಮ್ಮ ತಮ್ಮ ಐಪಿಎಲ್ ತಂಡಗಳನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಐಪಿಎಲ್: ಡೆಲ್ಲಿ ತಂಡದ ಹೊಸ ಜೆರ್ಸಿ ಅನಾವರಣ
ನವದೆಹಲಿ: 2022ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಹೊಸ ವಿನ್ಯಾಸವುಳ್ಳ ಜೆರ್ಸಿ ತೊಟ್ಟು ಆಡಲಿದೆ. ಶನಿವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜೆರ್ಸಿ ಅನಾವರಣಗೊಳಿಸಲಾಯಿತು. ಕೆಲ ಆಯ್ದ ಅಭಿಮಾನಿಗಳಿಗೆ ಜೆರ್ಸಿ ವಿತರಿಸಲಾಯಿತು ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
IPL 2022: ಆರ್‌ಸಿಬಿ ನೂತನ ನಾಯಕರಾಗಿ ಫಾಫ್ ಡು ಪ್ಲೆಸಿಸ್ ನೇಮಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಂತೆಯೇ ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ನಾಯಕರಾಗಿ ಮುನ್ನಡೆಸಲಿದ್ದಾರೆ. ಮೇಲ್ನೋಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.
